ಬೆಂಗಳೂರು,ಮಾ.11- ಅಡುಗೆ ಅನಿಲ ಬೆಲೆ ಏರಿಕೆ ಬೆನ್ನಲ್ಲೇ ದಿನಸಿ ಬೆಲೆ ಸದ್ದಿಲ್ಲದೆ ಏರಿಕೆಯಾಗುತ್ತಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.ಈಗಾಗಲೇ ಅಡುಗೆ ಎಣ್ಣೆ, ಬೇಳೆ ಕಾಳು, ಕಡಲೆ ಬೀಜಗಳ ಬೆಲೆ 200ರ ಆಸುಪಾಸಿನಲ್ಲಿದ್ದು, ಎಲ್ಲ ದಿನಸಿಗಳ ಬೆಲೆ ಶತಕದತ್ತ ಮುನ್ನು ಗ್ಗುತ್ತಿವೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ದೃಷ್ಟಿಯಿಂದ ಜನರು ಮುಂಜಾಗ್ರತಾ ಕ್ರಮವಾಗಿ ಯುಗಾದಿ ಹಬ್ಬಕ್ಕಾಗಿ ಈಗಿನಿಂದಲೇ ದಿನಸಿ ಖರೀದಿಯಲ್ಲಿ ತೊಡಗಿದ್ದು, ಡಿ ಮಾರ್ಟ್, ಆರ್‌ಎಂಸಿ ಸೇರಿದಂತೆ ದಿನಸಿ ಅಂಗಡಿಗಳಿಗೆ ಮುಗಿ ಬಿದ್ದು, ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿರುವ ದೃಶ್ಯಗಳು ರಾಜಧಾನಿ ಬೆಂಗಳೂರಿನಲ್ಲಿ ಕಂಡುಬಂದವು.
ಮಧ್ಯಮ ವರ್ಗದ ಜನರಿಗೆ ಬೆಲೆ ಏರಿಕೆಯ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ರಾಜಧಾನಿ ಜೀವನ ಕಷ್ಟಕರವಾದಂತಾಗಿದೆ. ಯಾವ ದಿನಸಿ ವಸ್ತುಗಳ ಬೆಲೆಯೂ ಸುಲಭವಾಗಿ ಕೈಗೆಟುಕದಂತಾಗಿದೆ.
ದಿನಸಿ ವಸ್ತುಗಳ ಬೆಲೆ ನೋಡುವುದಾದರೆ, ಗುಣಮಟ್ಟ ಸೋನಾ ಮಸೂರಿ ಅಕ್ಕಿ ಕೆಜಿಗೆ 60 ರಿಂದ 70 ರೂ., ಧನಿಯಾ ಕೆ.ಜಿಗೆ 160 ರಿಂದ 200ರೂ., ಕಡಲೆಬೀಜ 180 ರಿಂದ 200 ರೂ., ಉದ್ದಿನಬೇಳೆ 180 ರಿಂದ 200 ರೂ., ಒಣಮೆಣಸು 250 ರಿಂದ 300 ರೂ., ಬಾಸುಮತಿ ಅಕ್ಕಿ 150 ರಿಂದ 200 ರೂ., ಸಕ್ಕರೆ 45, ಅಡುಗೆ ಎಣ್ಣೆ 180 ರಿಂದ 200 ರೂ., ತೊಗರಿಬೇಳೆ 150 ರಿಂದ 200 ರೂ., ಹೆಸರುಬೇಳೆ 200 ರೂ., ಕಡಲೆಬೇಳೆ 150 ರೂ.ಗೆ ಮಾರಾಟವಾಗುತ್ತಿವೆ.
ಊರಹಬ್ಬ, ಜಾತ್ರೆ, ಮದುವೆ ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿದ್ದು, ಬೇಡಿಕೆಯೂ ಸಹ ಹೆಚ್ಚಾಗಿದೆ. ಉತ್ಪಾದನೆ ಕುಂಠಿತ ಹಾಗೂ ಮಧ್ಯಪ್ರಾಚ್ಯದ ಸಂಘರ್ಷದಿಂದ ಅಗತ್ಯ ವಸ್ತುಗಳ ಸರಬರಾಜಿನಲ್ಲಿ ವ್ಯತ್ಯಯವಾಗಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ.
ಹಿಂದೂ ಸಂಪ್ರದಾಯದ ಪ್ರಕಾರ ಹೊಸ ವರ್ಷವಾದ ಯುಗಾದಿ ಹಬ್ಬಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದ್ದು, ಬೆಲೆ ಏರಿಕೆ ಮಧ್ಯಮವರ್ಗದವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮುಂದಿನ ದಿನಗಳಲ್ಲಿ ಇನ್ನೂ ಬೆಲೆ ಏರಿಕೆಯಾಗುವ ಸಾಧ್ಯತೆಯಿದ್ದು, ಮಧ್ಯಮ ವರ್ಗದವರ ಜೀವನ ತುಂಬಾ ಕಷ್ಟಕರವಾಗಲಿದೆ.
