ಬೆಂಗಳೂರು, ಅ.18 – ಸಕಾಲ ಸೇವೆಗಳ (ತಿದ್ದುಪಡಿ) ಅಧಿನಿಯಮ, 2026 ಕಾಯ್ದೆಯಡಿ ಸೇವೆಗಳನ್ನು ವಿಳಂಬಗೊಳಿಸುವ ಅಧಿಕಾರಿಗಳಿಗೆ ವಿಧಿಸುವ ಪರಿಹಾರ ವೆಚ್ಚ ಹಾಗೂ ದುರುದ್ದೇಶಪೂರಿತ ದೂರು ಸಲ್ಲಿಸುವ ನಾಗರಿಕರಿಗೆ ವಿಧಿಸುವ ದಂಡದ ಮೊತ್ತವನ್ನು ಪರಿಷ್ಕರಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ನೂತನ ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೂ.1,500 ವರೆಗೆ ದಂಡ ವಿಧಿಸಲಾಗುತ್ತದೆ. ಸಾರ್ವಜನಿಕರಿಗೆ ನಿಗದಿತ ಸಮಯದೊಳಗೆ ಸೇವೆಗಳನ್ನು ಒದಗಿಸಲು ಅಥವಾ ಮೇಲನವಿಗಳನ್ನು ವಿಲೇವಾರಿ ಮಾಡಲು ವಿಫಲರಾಗುವ ಸಕ್ಷಮ ಪ್ರಾಧಿಕಾರಿ, ಹೆಸರಿಸಲಾದ ಅಧಿಕಾರಿ ಅಥವಾ ಮೇಲನವಿ ಪ್ರಾಧಿಕಾರದ ಅಧಿಕಾರಿಗಳಿಂದ ಈ ಪರಿಹಾರ ವೆಚ್ಚವನ್ನು ವಸೂಲಿ ಮಾಡಲಾಗುತ್ತದೆ.
ಮೊದಲ 1 ರಿಂದ 5 ದಿನಗಳ ವಿಳಂಬಕ್ಕೆ ದಿನಕ್ಕೆ 20 ರೂ. ರಂತೆ ಗರಿಷ್ಠ 100 ರೂ., 6 ರಿಂದ 10 ದಿನಗಳ ವಿಳಂಬಕ್ಕೆ ದಿನಕ್ಕೆ 40 ರೂ. ರಂತೆ ಗರಿಷ್ಠ 300 ರೂ., 11 ರಿಂದ 15 ದಿನಗಳ ವಿಳಂಬಕ್ಕೆ ದಿನಕ್ಕೆ 60 ರೂ.ರಂತೆ ಗರಿಷ್ಠ 600 ರೂ, 16 ರಿಂದ 20 ದಿನಗಳ ವಿಳಂಬಕ್ಕೆ ದಿನಕ್ಕೆ 80 ರೂ. ರಂತೆ ಗರಿಷ್ಠ 1,000 ರೂ. ಹಾಗೂ 21 ರಿಂದ 25 ದಿನಗಳ ವಿಳಂಬಕ್ಕೆ ದಿನಕ್ಕೆ 100 ರೂ.ರಂತೆ ಒಟ್ಟಾರೆಯಾಗಿ ಗರಿಷ್ಠ 1,500 ರೂ.ಪರಿಹಾರ ವೆಚ್ಚವನ್ನು ನಿಗದಿಪಡಿಸಲಾಗಿದೆ.
=ಅಲ್ಲದೆ, ಸೇವೆಗಳನ್ನು ಸರಿಯಾಗಿ ನೀಡದೆ ಲೋಪದೋಷಗಳಿದ್ದರೆ ಅಥವಾ ಅರ್ಜಿಗಳನ್ನು ಸೂಕ್ತ ಕಾರಣವಿಲ್ಲದೆ ತಪ್ಪಾಗಿ ತಿರಸ್ಕರಿಸಿದ್ದರೆ, ನಾಗರಿಕರಿಗೆ ಗರಿಷ್ಠ 1,500 ರೂ.ಪರಿಹಾರವನ್ನು ಸಂಬಂಧಪಟ್ಟ ಅಧಿಕಾರಿಯಿಂದ ವಸೂಲಿ ಮಾಡಿ ನೀಡಲಾಗುತ್ತದೆ.
ಹುಸಿ ಹಾಗೂ ಕಿರುಕುಳಕಾರಿ ದೂರು ನೀಡುವ ನಾಗರಿಕರಿಗೆ ದಂಡ: ಸರ್ಕಾರಿ ನೌಕರರಿಗೆ ಕೇಡು ಉಂಟುಮಾಡುವ, ಕಿರುಕುಳ ನೀಡುವ, ಬೆದರಿಸುವ ಅಥವಾ ದುರುದ್ದೇಶದಿಂದ ಸುಳ್ಳು ಕುಂದು-ಕೊರತೆ ದೂರುಗಳನ್ನು ಸಲ್ಲಿಸುವ ನಾಗರಿಕರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ತನಿಖೆಯಲ್ಲಿ ದೂರು ದುರುದ್ದೇಶಪೂರಿತ ಎಂದು ಸಾಬೀತಾದರೆ, ಅಂತಹ ನಾಗರಿಕರಿಗೆ ಪ್ರತಿ ಅರ್ಜಿಗೆ 1,500 ರೂ. ದಂಡ ವಿಧಿಸಲಾಗುತ್ತದೆ. ಇದೇ ತಪ್ಪನ್ನು ಪುನರಾವರ್ತಿಸಿದಲ್ಲಿ ಮತ್ತೆ ಪ್ರತಿ ಅರ್ಜಿಗೆ 1,500 ರೂ. ದಂಡ ವಿಧಿಸಲಾಗುತ್ತದೆ.
ನಾಗರಿಕರಿಗೆ ತಮ ಅಹವಾಲು ಹೇಳಿಕೊಳ್ಳಲು ಸೂಕ್ತ ಅವಕಾಶ ನೀಡಿದ ನಂತರವೇ ಈ ಆದೇಶ ಹೊರಡಿಸಲಾಗುತ್ತದೆ ಹಾಗೂ ಈ ದಂಡದ ಮೊತ್ತವನ್ನು ಭೂ ಕಂದಾಯ ಹಿಂಬಾಕಿಯಂತೆ ವಸೂಲಿ ಮಾಡಲಾಗುತ್ತದೆ. ಸಾರ್ವಜನಿಕ ಸೇವೆಗಳ ವಿಲೇವಾರಿಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ಹೆಚ್ಚಿಸುವುದು ಈ ತಿದ್ದುಪಡಿಯ ಮುಖ್ಯ ಉದ್ದೇಶವಾಗಿದೆ ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
