ಹಾಸನ, ಜು.8- ಜಿಲ್ಲೆಯ ಸಕಲೇಶಪುರ ತಾಲ್ಲೂ ಕಿನ ಕಪ್ಪಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ-75ರ ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ನಡೆದಿರುವ ಪ್ರದೇಶದಲ್ಲಿ ಗುಡ್ಡ ಕುಸಿಯುತ್ತಿದ್ದು, ಪ್ರಯಾಣಿಕರು ಹಾಗೂ ವಾಹನ ಸವಾರರಲ್ಲಿ ಆತಂಕ ಸೃಷ್ಟಿಸಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ.
ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಮಳೆನೀರಿನಿಂದ ಮಣ್ಣು ಸಡಿಲಗೊಂಡು ಗಿಡಗಳ ಸಮೇತ ರಸ್ತೆಗೆ ಜಾರುತ್ತಿದ್ದು, ಮಳೆ ಇದೇ ರೀತಿ ಮುಂದುವರಿದರೆ ಹೆಚ್ಚಿನ ಪ್ರಮಾಣದಲ್ಲಿ ಗುಡ್ಡ ಕುಸಿಯುವ ಆತಂಕ ವ್ಯಕ್ತವಾಗಿದೆ.
ಇನ್ನೊಂದೆಡೆ, ಚಿಕ್ಕಂದೂರು ಗ್ರಾಮದ ಬಳಿ ಬಹತ್ ಗಾತ್ರದ ಮರ ರಸ್ತೆ ಮೇಲೆ ಉರುಳಿದ್ದರಿಂದ ಹುಚ್ಚಂಗಿ, ಯಸಳೂರು ಹಾಗೂ ಕೊಡ್ಲಿಪೇಟೆ ಸಂಪರ್ಕ ರಸ್ತೆ ಕೆಲಕಾಲ ಬಂದ್ ಆಗಿತ್ತು. ವಾಹನ ಸಂಚಾರ ಕಡಿಮೆ ಇದ್ದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಸ್ಥಳೀಯರ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಮರ ತೆರವು ಕಾರ್ಯ ಕೈಗೊಂಡಿದೆ.
ಎರಡು ಮನೆಗಳಿಗೆ ಹಾನಿ, ಮರಗಳ ತೆರವು :
ಜುಲೈ 4 ಮತ್ತು 5ರಂದು ಸುರಿದ ಬಿರುಗಾಳಿ ಸಹಿತ ಮಳೆಯಿಂದ ಸಕಲೇಶಪುರ ಪಟ್ಟಣದಲ್ಲಿ ತಡೆಗೋಡೆ ಕುಸಿದು ಎರಡು ಮನೆಗಳಿಗೆ ಹಾನಿಯಾಗಿದೆ.ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟು ಕೊಂಡು ಅಪಾಯಕಾರಿಯಾಗಿದ್ದ ಎಂಟು ಮರಗಳನ್ನು ಅರಣ್ಯ ಇಲಾಖೆ ತೆರವುಗೊಳಿಸಿದೆ.
ಸಕಲೇಶಪುರ ವಿಭಾಗದಲ್ಲಿ ಒಟ್ಟು 43 ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ದುರಸ್ತಿ ಕಾರ್ಯ ಮುಂದುವರಿದಿದೆ ಎಂದು ತಹಶೀಲ್ದಾರ್ ಸುಪ್ರಿತಾ ತಿಳಿಸಿದ್ದಾರೆ.
ಆಡಳಿತ ಎಚ್ಚರಿಕೆ :
ಮಳೆ ಇನ್ನೂ ಕೆಲವು ದಿನ ಮುಂದುವರಿಯುವ ಸಾಧ್ಯತೆ ಇರುವುದರಿಂದ ಜನರು ಅನಗತ್ಯವಾಗಿ ಪ್ರವಾಸ ಕೈಗೊಳ್ಳದಂತೆ ಹಾಗೂ ಗುಡ್ಡ ಪ್ರದೇಶಗಳು, ನದಿಹಳ್ಳಗಳ ಸಮೀಪ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿರುವ ಸ್ಥಳಗಳಿಗೆ ಸಾರ್ವಜನಿಕರು ಸಮೀಪಿಸದಂತೆ ಸೂಚಿಸಲಾಗಿದೆ.
