ಬೆಂಗಳೂರು, ಜು.8- ಬರುವ ಅಕ್ಟೋಬರ್ 27 ರಿಂದ ಡಂಪಿಂಗ್ ಯಾರ್ಡ್‌ಗಳಿಗೆ ನಗರದ ಹಸಿ- ಒಣ ಕಸದ ಮಿಶ್ರಣವನ್ನು ಸಾಗಿಸಲು ಅವಕಾಶ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಘನ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಮಹತ್ವದ ಆದೇಶ ನೀಡಿದೆ.
ಬರುವ ಅಕ್ಟೋಬರ್ 27ರಿಂದ ಬೆಂಗಳೂರಿನ ಮಿಶ್ರ ತ್ಯಾಜ್ಯವನ್ನು ಲ್ಯಾಂಡ್‌ಫಿಲ್ (ಡಂಪಿಂಗ್ ಯಾರ್ಡ್)ಗಳಿಗೆ ಸಾಗಿಸಲು ಅವಕಾಶ ಇರುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ನಗರದಲ್ಲಿ ಉತ್ಪತ್ತಿಯಾಗುವ ಹಸಿ, ಒಣ ಹಾಗೂ ಮಿಶ್ರ ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸಿ, ಬೆಂಗಳೂರಿನಲ್ಲೇ ಸಂಸ್ಕರಣೆ (ಪ್ರೊಸೆಸಿಂಗ್) ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಯಾವುದೇ ಮಿಶ್ರ ತ್ಯಾಜ್ಯವನ್ನು ನೇರವಾಗಿ ಭೂಭರ್ತಿ ಪ್ರದೇಶಗಳಿಗೆ ಕಳುಹಿಸಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಸ್ತುತ ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 5 ಸಾವಿರ ಟನ್ ಘನ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಅದರಲ್ಲಿ ಸುಮಾರು 4 ಸಾವಿರ ಟನ್ ಮಿಶ್ರ ತ್ಯಾಜ್ಯವಾಗಿದೆ. ಇನ್ನು ಮುಂದೆ ಈ ಮಿಶ್ರ ತ್ಯಾಜ್ಯವನ್ನು ಮೂಲದಲ್ಲೇ ಹಸಿ ಮತ್ತು ಒಣ ತ್ಯಾಜ್ಯವಾಗಿ ಪ್ರತ್ಯೇಕಿಸಿ ಸಂಸ್ಕರಿಸಬೇಕಾಗಿದೆ.
ಇದುವರೆಗೆ ನಗರದ ತ್ಯಾಜ್ಯವನ್ನು ಹೊರವಲಯದ ಲ್ಯಾಂಡ್‌ಫಿಲ್ ಪ್ರದೇಶಗಳಿಗೆ ಸಾಗಿಸಲಾಗುತ್ತಿತ್ತು. ಆದರೆ ಅಕ್ಟೋಬರ್ 27ರಿಂದ ಈ ಪದ್ಧತಿಗೆ ತೆರೆ ಬೀಳಲಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲೇ ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆ ರೂಪಿಸುವ ಜವಾಬ್ದಾರಿ ಸ್ಥಳೀಯ ಆಡಳಿತದ ಮೇಲಿದೆ.
ಇದರ ಜೊತೆಗೆ, ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಿಸುವ ಬೃಹತ್ ತ್ಯಾಜ್ಯ ಉತ್ಪಾದಕರಿಗೆ ಹೊಸ ನಿಯಮಗಳ ಕುರಿತು ಮಾಹಿತಿ ನೀಡುವಂತೆ ಹಾಗೂ ಪ್ರತಿ ಕ್ಷೇತ್ರದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಆದೇಶವು ಬೆಂಗಳೂರಿನ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗುವ ನಿರೀಕ್ಷೆಯಿದೆ.
