Homeರಾಜ್ಯಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ನಿಗೂಢ ನಾಪತ್ತೆ!

ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ನಿಗೂಢ ನಾಪತ್ತೆ!

Karnataka IAS officer goes missing, police trace his travel to Delhi

ಬೆಂಗಳೂರು, ಆ.22- ಕೆಪಿಎಸ್‌ಸಿ ಕರ್ಮಕಾಂಡದ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣ ಕುತೂಹಲ ಕೆರಳಿಸಿದೆ.ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದ ಅವರು ಗುರುವಾರ ಬೆಳಗ್ಗೆ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದು, ಬಳಿಕ ಅವರ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಜ್ಞಾನೇಂದ್ರ ಕುಮಾರ್‌ ಅವರು ದೆಹಲಿಗೆ ತೆರಳಲು ವಿಮಾನದ ಟಿಕೆಟ್‌ ಬುಕ್‌ ಮಾಡಿದ್ದರು ಎನ್ನಲಾಗಿದೆ.

ದೆಹಲಿಗೆ ತೆರಳುವುದಾಗಿ ತಿಳಿಸಿ ವಿಮಾನ ನಿಲ್ದಾಣಕ್ಕೆ ತೆರಳಿದ್ದ ಅವರು, ಅಲ್ಲಿಂದ ವಿಮಾನ ಏರಿ ದೆಹಲಿ ತಲುಪಿದ ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ. ವಿಮಾನ ನಿಲ್ದಾಣದವರೆಗೆ ಅವರ ಚಲನವಲನವನ್ನು ಪೊಲೀಸರು ಟ್ರ್ಯಾಕ್‌ ಮಾಡಿದ್ದು, ಬಳಿಕ ಅವರ ಮೊಬೈಲ್‌ ಸಂಪರ್ಕ ಕಡಿತಗೊಂಡಿದೆ ಎಂದು ತಿಳಿದುಬಂದಿದೆ.

ದೆಹಲಿ ತಲುಪಿದ ಬಳಿಕ ಮೊಬೈಲ್‌ ಫೋನ್‌ ಸ್ವಿಚ್‌ ಆಫ್‌ ಆಗಿರುವ ಹಿನ್ನೆಲೆಯಲ್ಲಿ ಪೊಲೀಸರು ಹಲವು ಸಾಧ್ಯತೆಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಕುಟುಂಬದವರ ಸಂಪರ್ಕಕ್ಕೂ ಅವರು ಸಿಗದಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.

ಜ್ಞಾನೇಂದ್ರ ಕುಮಾರ್‌ ಅವರಿಗೆ ಈ ಹಿಂದೆ ಆರೋಗ್ಯ ಸಮಸ್ಯೆ ಇತ್ತು ಎಂಬ ಮಾಹಿತಿಯೂ ಲಭ್ಯವಾಗಿದೆ. ಸದ್ಯ ಅವರು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್‌ಸಿ) ಸೇವೆ ಸಲ್ಲಿಸಿದ್ದರು. ಹಿರಿಯ ಅಧಿಕಾರಿಗಳ ಮಾಹಿತಿ ಮೇರೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಪ್ರಕರಣ ಗಂಭೀರ ಪರಿಗಣನೆ

ಜ್ಞಾನೇಂದ್ರ ಕುಮಾರ್‌ ನಾಪತ್ತೆಯಾಗಿರುವ ಬಗ್ಗೆ ಹಿರಿಯ ಐಎಎಸ್‌ ಅಧಿಕಾರಿಯೊಬ್ಬರು ನನಗೆ ಮಾಹಿತಿ ನೀಡಿದ್ದಾರೆ. ಆದರೆ ಈ ಸಂಬಂಧ ಯಾವುದೇ ದೂರು ನೀಡಿಲ್ಲ. ಅಧಿಕಾರಿ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಅವರ ಚಲನವಲನದ ಕುರಿತು ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ನಗರ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

ವಿಮಾನ ನಿಲ್ದಾಣದಿಂದ ಅವರು ದೆಹಲಿಗೆ ತೆರಳಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ವಿಮಾನ ನಿಲ್ದಾಣದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳು ಸೇರಿದಂತೆ ಲಭ್ಯವಿರುವ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ.

ಜ್ಞಾನೇಂದ್ರ ಕುಮಾರ್‌ ಅವರ ನಾಪತ್ತೆ ಪ್ರಕರಣವು ಇತ್ತೀಚೆಗೆ ಬೆಳಕಿಗೆ ಬಂದಿರುವ ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದ ಅಕ್ರಮದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದರು.

ಈ ಪ್ರಕರಣದಲ್ಲಿ ಜ್ಞಾನೇಂದ್ರ ಕುಮಾರ್‌ ಅವರು ಈ ಹಿಂದೆ ಕೆಪಿಎಸ್‌ಸಿಯಲ್ಲಿ ಕಾರ್ಯನಿರ್ವಹಿಸಿದ್ದ ಅವಧಿಯಲ್ಲಿನ ಪಾತ್ರ ಸೇರಿದಂತೆ ಹಲವು ಅಂಶಗಳನ್ನು ತನಿಖಾ ಸಂಸ್ಥೆಗಳು ಪರಿಶೀಲಿಸುತ್ತಿವೆ ಎನ್ನಲಾಗಿದೆ. ಇಡಿ ದಾಳಿ ನಡೆದ ಮರುದಿನವೇ ಅವರು ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

RELATED ARTICLES
spot_img

Latest News