ಬೆಂಗಳೂರು, ಆ.31- ರೈತರ ಮಕ್ಕಳು ಎಂದು ಹೇಳಿಕೊಳ್ಳುವ ದೊಡ್ಡದೊಡ್ಡವರ ಜಮೀನುಗಳು ಬೆಂಗಳೂರಿನ ಸುತ್ತಮುತ್ತ ಇರುವುದು ನಮಗೂ ಗೊತ್ತಿದೆ. ಆ ಜಮೀನುಗಳನ್ನು ಯಾವುದಾದರೂ ಯೋಜನೆಗೆ ಬಿಟ್ಟುಕೊಟ್ಟಿದ್ದಾರೆಯೇ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
ಬೆಂಗಳೂರಿನ ನೆಹರೂ ತಾರಾಲಯದ ಯು.ಆರ್. ಭವನದಲ್ಲಿ ನಡೆದ ಡಾ. ಕೆ. ಶಿವರಾಮ ಕಾರಂತ ಬಡಾವಣೆಯ ಭೂ ಮಾಲೀಕರಿಗೆ ನಿವೇಶನ ಹಂಚಿಕೆ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಶಿವರಾಮ ಕಾರಂತ ಬಡಾವಣೆ ಯೋಜನೆ ಕುಮಾರಸ್ವಾಮಿ ಅವರ ಕಾಲದಲ್ಲೇ ಆರಂಭವಾಗಿತ್ತು. ತಾವು ಬಿಡಿಎ ಜವಾಬ್ದಾರಿ ವಹಿಸಿಕೊಂಡಾಗ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿತ್ತು. ಪ್ರತಿಯೊಂದಕ್ಕೂ ಲಂಚ ನೀಡಬೇಕಾದ ಪರಿಸ್ಥಿತಿ ಇತ್ತು. ಇದರ ಬಗ್ಗೆ ಮಾತನಾಡಲು ರೈತರ ಮಕ್ಕಳಿಗೆ ಧಮ್, ತಾಕತ್ತು ಇಲ್ಲವೇ ಎಂದು ಶಿವಕುಮಾರ್ ಪ್ರಶ್ನಿಸಿದರು.
ಬೆಂಗಳೂರಿನ ಸುತ್ತಮುತ್ತ ಸಾವಿರಾರು ಎಕರೆ ಜಮೀನು ಹೊಂದಿರುವ ಕೆಲವರು ತಮ್ಮ ಜಮೀನುಗಳನ್ನು ಯಾವುದೇ ಯೋಜನೆಗಾಗಿ ಭೂಸ್ವಾಧೀನಕ್ಕೆ ಬಿಟ್ಟುಕೊಟ್ಟಿಲ್ಲ. ಪೆರಿಫೆರಲ್ ರಿಂಗ್ ರಸ್ತೆಗೆ ಜಮೀನು ಹೋಗುತ್ತದೆ ಎಂಬ ಕಾರಣಕ್ಕೆ ಯೋಜನೆಯ ನಕ್ಷೆಯನ್ನೇ ಬದಲಾಯಿಸಿದ್ದರು. ಇದೀಗ ಅದರ ಪಕ್ಕದ ಜಮೀನಿನ ಬೆಲೆ ಎಕರೆಗೆ ₹15 ಕೋಟಿ ದಾಟಿದೆ ಎಂದು ಆರೋಪಿಸಿದರು.
ಅಭಿವೃದ್ಧಿಯಲ್ಲಿ ಭೂ ಮಾಲೀಕರಿಗೂ ಪಾಲು
ವಿಶ್ವವೇ ಬೆಂಗಳೂರಿನತ್ತ ನೋಡುತ್ತಿದೆ. ಬೆಂಗಳೂರು ಜಗತ್ತಿನ ಪ್ರಮುಖ ನಗರವಾಗಿ ಬೆಳೆಯುತ್ತಿದೆ. ಈ ಬೆಳವಣಿಗೆಯ ಹಿಂದೆ ಸಾವಿರಾರು ರೈತರು ಹಾಗೂ ಭೂ ಮಾಲೀಕರ ಕೊಡುಗೆ ಇದೆ. ಹೀಗಾಗಿ ನಗರದ ಅಭಿವೃದ್ಧಿಯೊಂದಿಗೆ ಭೂಮಿ ನೀಡಿದವರ ಕುಟುಂಬಗಳ ಬದುಕು ಕೂಡ ಬೆಳೆಯಬೇಕು. ಅಭಿವೃದ್ಧಿಯ ಫಲದಲ್ಲಿ ಅವರಿಗೂ ನ್ಯಾಯಯುತ ಪಾಲು ಸಿಗಬೇಕು ಎಂದು ಮುಖ್ಯಮಂತ್ರಿ ಹೇಳಿದರು.
ಭೂಮಿ ನೀಡಿದ ರೈತರ ಕೊಡುಗೆಯನ್ನು ಸರ್ಕಾರ ಎಂದಿಗೂ ಮರೆಯುವುದಿಲ್ಲ. ಅವರ ತ್ಯಾಗ ದೊಡ್ಡದು. ಅವರ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿ ಎಂದು ತಿಳಿಸಿದರು. ಇದು ಕೇವಲ ನಿವೇಶನ ಹಂಚಿಕೆ ಪತ್ರ ವಿತರಿಸುವ ಕಾರ್ಯಕ್ರಮವಲ್ಲ. ಹಲವು ವರ್ಷಗಳಿಂದ ಕಾಯುತ್ತಿರುವ ಭೂ ಮಾಲೀಕರ ನಿರೀಕ್ಷೆಗಳಿಗೆ ಉತ್ತರ ನೀಡುವ ದಿನ. ಬೆಂಗಳೂರಿನ ಅಭಿವೃದ್ಧಿಗಾಗಿ ಭೂಮಿ ನೀಡಿದವರಿಗೆ ಅಭಿವೃದ್ಧಿಯಲ್ಲೇ ಪಾಲು ನೀಡುವ ದಿನವಾಗಿದೆ ಎಂದರು.
ಕಾನೂನು ನಿರ್ದೇಶನ ಪಾಲಿಸಿ ಹಕ್ಕು ರಕ್ಷಣೆ
ಡಾ. ಕೆ. ಶಿವರಾಮ ಕಾರಂತ ಬಡಾವಣೆ ಯೋಜನೆ ಹಲವು ವರ್ಷಗಳಿಂದ ಭೂಸ್ವಾಧೀನ, ಕಾನೂನು ವ್ಯಾಜ್ಯಗಳು ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳ ನಡುವೆ ಸಾಗಿಬಂದಿದೆ. ಕಾನೂನು ಮತ್ತು ನ್ಯಾಯಾಲಯದ ನಿರ್ದೇಶನಗಳನ್ನು ಗೌರವಿಸುತ್ತಲೇ ಅರ್ಹ ಭೂ ಮಾಲೀಕರ ಹಕ್ಕುಗಳನ್ನು ರಕ್ಷಿಸುವ ಕೆಲಸವನ್ನು ಸರ್ಕಾರ ಮಾಡಿದೆ. ಅನಗತ್ಯ ವಿಳಂಬಕ್ಕೆ ಅವಕಾಶ ನೀಡದೆ ದಾಖಲೆಗಳ ಆಧಾರದ ಮೇಲೆ ಅರ್ಹರಿಗೆ ಅವರ ಹಕ್ಕು ನೀಡುವುದು ಸರ್ಕಾರದ ಉದ್ದೇಶ ಎಂದು ಹೇಳಿದರು.
ಲೇಔಟ್‌ನ ರಸ್ತೆಯೊಂದಕ್ಕೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಹೆಸರಿಡಲಾಗುವುದು. ಜತೆಗೆ ಬಡಾವಣೆಗೆ ಜಮೀನು ನೀಡಿದವರ ಹೆಸರುಗಳು ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
‘ಜಾಗ ನಿಮ್ಮದು, ತ್ಯಾಗ ನಿಮ್ಮದು, ಅಭಿವೃದ್ಧಿ ಬೆಂಗಳೂರಿನದು. ನಿಮ್ಮ ನೋವು, ಕಷ್ಟ ಗೊತ್ತಿದೆ. ಆದರೆ ನಿಮ್ಮ ನಿವೇಶನಗಳನ್ನು ಮಾರಾಟ ಮಾಡಬೇಡಿ. ನಿಮ್ಮ ಸೈಟ್‌ಗಳಿಗೆ ಉತ್ತಮ ಬೆಲೆ ಸಿಗಲಿದೆ’ ಎಂದು ಭೂ ಮಾಲೀಕರಿಗೆ ಸಲಹೆ ನೀಡಿದರು.
24,714 ನಿವೇಶನ ಹಂಚಿಕೆ
ಡಾ. ಕೆ. ಶಿವರಾಮ ಕಾರಂತ ಬಡಾವಣೆಯಲ್ಲಿ ಸದ್ಯ 24,714 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಈ ಪೈಕಿ 18,399 ನಿವೇಶನಗಳನ್ನು ರೈತರು ಹಾಗೂ ಭೂ ಮಾಲೀಕರಿಗೆ ನೀಡಲಾಗಿದೆ. 3,500 ರೆವೆನ್ಯೂ ಸೈಟ್‌ಗಳು ಹಾಗೂ 2,815 ನಿವೇಶನಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು. ಬಡಾವಣೆಯಲ್ಲಿ 40:60 ಅಭಿವೃದ್ಧಿ ಮಾದರಿ ಅನುಸರಿಸಲಾಗಿದೆ. ಒಂದು ಎಕರೆ ಭೂಮಿಗೆ 9,583 ಚದರ ಅಡಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಭೂ ಮಾಲೀಕರಿಗೆ ನೀಡಲಾಗುವುದು ಎಂದರು.
ಬಡಾವಣೆಯ ಸಮಗ್ರ ಅಭಿವೃದ್ಧಿ ಹಾಗೂ ಸಾರ್ವಜನಿಕ ಮೂಲಸೌಕರ್ಯದ ದೃಷ್ಟಿಯಿಂದ ಕೆಲವು ನಿವೇಶನಗಳನ್ನು ಭೂ ಮಾಲೀಕರಿಗೆ ಹಂಚಿಕೆ ಮಾಡಲು ಸಾಧ್ಯವಾಗುವುದಿಲ್ಲ. ಮುಖ್ಯವಾಗಿ ಕಾರ್ನರ್ ಸೈಟ್, ವಾಣಿಜ್ಯ ನಿವೇಶನ, ಸಿಎ ಸೈಟ್‌ಗಳು, ಉದ್ಯಾನಗಳು ಹಾಗೂ ಅಗಲವಾದ ರಸ್ತೆಗೆ ಹೊಂದಿಕೊಂಡಿರುವ ನಿವೇಶನಗಳನ್ನು ಭೂ ಮಾಲೀಕರಿಗೆ ನೀಡಲಾಗುತ್ತಿಲ್ಲ. ನಗರ ಯೋಜನೆಯ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಕೆಲವು ನಿವೇಶನಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗಿದೆ ಎಂದು ಹೇಳಿದರು.
ಫಲಾನುಭವಿಗಳಿಗೆ ಅಗತ್ಯ ದಾಖಲೆಗಳನ್ನು ನೀಡಿ, ನಿವೇಶನದ ಅಧಿಕೃತ ಸ್ವಾಧೀನ ಪಡೆಯುವವರೆಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಸರ್ಕಾರದ ಜವಾಬ್ದಾರಿ ಎಂದರು.
₹16,419 ಕೋಟಿ ವೆಚ್ಚ
ಬೆಂಗಳೂರು ಉತ್ತರ ಭಾಗದಲ್ಲಿರುವ 17 ಹಳ್ಳಿಗಳ 3,069 ಎಕರೆ ಭೂಮಿಯನ್ನು 3,200 ಭೂ ಮಾಲೀಕರಿಂದ ಸ್ವಾಧೀನಪಡಿಸಿಕೊಂಡು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಡಾ. ಕೆ. ಶಿವರಾಮ ಕಾರಂತ ಬಡಾವಣೆ ನಿರ್ಮಿಸಿದೆ.
ಒಟ್ಟು 34,992 ನಿವೇಶನಗಳನ್ನು ನಿರ್ಮಿಸುವ ಗುರಿ ಹೊಂದಿರುವ ಈ ಬಡಾವಣೆಗೆ ಒಟ್ಟಾರೆ ₹16,419.89 ಕೋಟಿ ವೆಚ್ಚವಾಗಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎನ್.ಎಂ. ಹ್ಯಾರಿಸ್ ವಹಿಸಿದ್ದರು. ಗ್ರೇಟರ್ ಬೆಂಗಳೂರು ಸಚಿವ ಕೃಷ್ಣ ಬೈರೇಗೌಡ, ಶಾಸಕರಾದ ಎಸ್.ಆರ್. ವಿಶ್ವನಾಥ್, ಮುನಿರಾಜು, ಬಿಡಿಎ ಆಯುಕ್ತ ಮಣಿವಣ್ಣನ್ ಹಾಗೂ ಬಿಡಿಎ ಸದಸ್ಯರು ಉಪಸ್ಥಿತರಿದ್ದರು.
