ಬೆಂಗಳೂರು, ಆ.31- ಗ್ರಾಮ ಪಂಚಾಯಿತಿ ಸೇವೆಗಳಿಗೆ ಸಂಬಂಧಿಸಿದಂತೆ ಗ್ರಾಮೀಣರು ತಮ್ಮ ಅಹವಾಲುಗಳನ್ನು ಸುಲಭವಾಗಿ ದಾಖಲಿಸಿ, ಅದರ ಸ್ಥಿತಿಗತಿ ತಿಳಿದುಕೊಳ್ಳಲು ಅನುಕೂಲವಾಗುವಂತೆ ಡ್ಯಾಷ್ಬೋರ್ಡ್ ಆಧರಿತ ಆನ್ಲೈನ್ ದೂರು ದಾಖಲಾತಿ ಮತ್ತು ಇತ್ಯರ್ಥ ವ್ಯವಸ್ಥೆ ರೂಪಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಸೂಚಿಸಿದ್ದಾರೆ.
ಈ ಸಂಬಂಧ ಇಲಾಖೆಯ ಕಾರ್ಯದರ್ಶಿಗೆ ಲಿಖಿತ ಸೂಚನೆ ನೀಡಿರುವ ಅವರು, ಇ-ಸ್ವತ್ತು, ತೆರಿಗೆ ನಿರ್ಧರಣೆ, ಸಾಮಾಜಿಕ ಅರಣ್ಯೀಕರಣ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳ ನಿರ್ವಹಣೆ, ಕೆರೆ ಒತ್ತುವರಿ, ಜೆಜೆಎಂ, ಕುಡಿಯುವ ನೀರು, ನೈರ್ಮಲ್ಯ, ಗ್ರಾಮೀಣ ರಸ್ತೆ, ವಿಬಿಜಿ ರಾಮ್ ಜಿ ಹಾಗೂ ಗ್ರಾಮೀಣ ಆಸ್ತಿಗಳ ಸೃಜನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಾರ್ವಜನಿಕರು ದೂರು ದಾಖಲಿಸಲು ಹಾಗೂ ಅವುಗಳಿಗೆ ತ್ವರಿತವಾಗಿ ಸ್ಪಂದಿಸಲು ವ್ಯವಸ್ಥೆ ರೂಪಿಸುವಂತೆ ನಿರ್ದೇಶಿಸಿದ್ದಾರೆ.
ರಾಜ್ಯದ ಸುಮಾರು ಅರ್ಧದಷ್ಟು ಜನಸಂಖ್ಯೆಯೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೇರ ಸಂಪರ್ಕ ಹೊಂದಿದೆ. ಹೀಗಾಗಿ ಗ್ರಾಮೀಣರ ಕುಂದುಕೊರತೆಗಳಿಗೆ ಸ್ಪಂದಿಸುವುದು ಇಲಾಖೆಯ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ವಿಡಿಯೋ, ಫೋಟೋ ಸಹಿತ ದೂರು
ಇಲಾಖೆಯಲ್ಲಿ ಪಾರದರ್ಶಕತೆ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಪ್ರಾಯೋಜಿತ ಯೋಜನೆಗಳ ಕಾಮಗಾರಿಗಳಲ್ಲಿನ ಲೋಪದೋಷ, ಮೂಲಸೌಕರ್ಯಗಳ ಗುಣಮಟ್ಟದ ಕೊರತೆ, ಗ್ರಾಮ ಪಂಚಾಯಿತಿಗಳು ಒದಗಿಸುವ ವಿವಿಧ ಸೇವೆಗಳಲ್ಲಿನ ವಿಳಂಬ ಹಾಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಚಿವಾಲಯಕ್ಕೆ ದೂರುಗಳು ಬರುತ್ತಿವೆ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಖಂಡ್ರೆ ಹೇಳಿದ್ದಾರೆ.
ಸಾರ್ವಜನಿಕರು ವಿಡಿಯೋ ಹಾಗೂ ಫೋಟೋ ಸಹಿತ ದೂರುಗಳನ್ನು ಆನ್ಲೈನ್ನಲ್ಲಿ ದಾಖಲಿಸಲು ಅವಕಾಶ ಕಲ್ಪಿಸುವಂತೆ ಅವರು ಸೂಚಿಸಿದ್ದಾರೆ. ಅಲ್ಲದೆ, ದೂರಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವ ಅಧಿಕಾರಿಯ ಹೆಸರು, ದೂರವಾಣಿ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಪಡೆಯಲು ಹಾಗೂ ದೂರಿನ ಪ್ರಸ್ತುತ ಸ್ಥಿತಿಗತಿ ತಿಳಿದುಕೊಳ್ಳಲು ವ್ಯವಸ್ಥೆ ಇರಬೇಕು ಎಂದು ತಿಳಿಸಿದ್ದಾರೆ.
ನಿಗದಿತ ಕಾಲಮಿತಿಯೊಳಗೆ ದೂರುಗಳನ್ನು ಇತ್ಯರ್ಥಪಡಿಸಲು ಅನುಕೂಲವಾಗುವಂತೆ ಸರಳ ಪ್ರಕ್ರಿಯೆಯ ಆ್ಯಪ್ ಹಾಗೂ ಡ್ಯಾಷ್ಬೋರ್ಡ್ ಒಳಗೊಂಡ ವೆಬ್ ಪೋರ್ಟಲ್ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ಏಕಗವಾಕ್ಷಿ ವ್ಯವಸ್ಥೆ
ಜಿಬಿಎ, ಬಿಡಬ್ಲ್ಯುಎಸ್ಎಸ್ಬಿ, ಬಿಡಿಎ, ಬಿಎಂಆರ್ಸಿಎಲ್, ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ದೂರುಗಳನ್ನು ದಾಖಲಿಸಿ ಪರಿಹಾರ ಪಡೆಯಲು ಇರುವ ‘ಸಹಾಯ’ ಆ್ಯಪ್ ಮಾದರಿಯಲ್ಲಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ವಿಭಾಗಗಳಿಗೆ ಸಂಬಂಧಿಸಿದ ದೂರುಗಳನ್ನು ಒಂದೇ ಕಡೆ ದಾಖಲಿಸಲು ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಬೇಕು ಎಂದು ಖಂಡ್ರೆ ಸೂಚಿಸಿದ್ದಾರೆ. ಈ ವ್ಯವಸ್ಥೆಯಿಂದ ಗ್ರಾಮೀಣರು ಕಚೇರಿಗಳಿಗೆ ಅಲೆದಾಡದೆ ಆನ್ಲೈನ್ ಮೂಲಕ ದೂರು ಸಲ್ಲಿಸಿ, ಅದರ ಪ್ರಗತಿಯನ್ನು ಪರಿಶೀಲಿಸಲು ಹಾಗೂ ನಿಗದಿತ ಅವಧಿಯಲ್ಲಿ ಪರಿಹಾರ ಪಡೆಯಲು ಅನುಕೂಲವಾಗಲಿದೆ.
