ಬೆಂಗಳೂರು, ಫೆ.15- ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ನಾಡಿನ ಪ್ರಮುಖ ಶಿವ ದೇವಾಲಯಗಳಿಗೆ ಭಕ್ತ ಸಾಗರವೇ ಹರಿದು ಬಂದಿದೆ. ಇಂದು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಶಿವನ ದರ್ಶನ ಪಡೆಯುತ್ತಿರುವ ದೃಶ್ಯಗಳು ದೇವಾಲಯಗಳಲ್ಲಿ ಕಂಡು ಬಂದಿತು.
ಮಹದೇಶ್ವರ ಬೆಟ್ಟದ ಮಲೈ ಮಹದೇಶ್ವರ ದೇವಾಲಯ, ಆದಿ ಚುಂಚನಗಿರಿಯ ಕಾಲಭೈರವೇಶ್ವರಸ್ವಾಮಿ ದೇವಾಲಯ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ, ಧರ್ಮಸ್ಥಳ ಮಂಜುನಾಥ ದೇವಾಲಯ, ಕದ್ರಿಯ ಮಂಜುನಾಥ, ಗೋಕರ್ಣದ ಮಹಾಬಲೇಶ್ವರ, ಮುರುಡೇಶ್ವರ, ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಾಲಯ, ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಾಲಯ ಸೇರಿದಂತೆ ನಾಡಿನ ಪ್ರಮುಖ ದೇವಾಲಯಗಳಲ್ಲಿ ಇಂದು ಮುಂಜಾನೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಶಿವರಾತ್ರಿ ಹಬ್ಬದ ಅಂಗವಾಗಿ ಶಿವದೇವಾಲಯಗಳನ್ನು ತಳಿರು ತೋರಣಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಇಂದು ನಿರಂತರ ಪೂಜೆಯ ಜೊತೆಗೆ ಶಿವಸ್ತುತಿಯನ್ನು ಪಾರಾಯಣ ಮಾಡಲಾಗುತ್ತಿದೆ. ರಾತ್ರಿ ಜಾಗರಣೆಯ ಕಾರ್ಯಕ್ರಮಗಳನ್ನು ಹಮಿಕೊಳ್ಳಲಾಗಿದೆ.
ಬಹುತೇಕ ಎಲ್ಲಾ ದೇವಾಲಯಗಳಲ್ಲಿ ಇಂದು ವಿಶೇಷ ಪೂಜೆ ಹಾಗೂ ಜಾಗರಣೆಯ ಕಾರ್ಯಕ್ರಮಗಳನ್ನು ಹಮಿಕೊಳ್ಳಲಾಗಿದೆ. ಶ್ರದ್ಧಾಭಕ್ತಿ ಯಿಂದ ಶಿವ ಪೂಜೆಯನ್ನು ನೆರವೇರಿಸಲಾಗುತ್ತಿದೆ.
ಶಿವನಿಗೆ ಪ್ರಿಯವಾಗಿರುವ ಬಿಲ್ವಪತ್ರೆಗೆ ಇಂದು ಎಲ್ಲಿಲ್ಲದ ಬೇಡಿಕೆ ಇತ್ತು. ಮಾರುಕಟ್ಟೆಯಲ್ಲಿ ಬಿಲ್ವಪತ್ರೆ ಹಾಗೂ ಹೂವು ದುಬಾರಿಯಾಗಿದ್ದವು. ಜನರು ಸಹ ಇಂದು ತಮ ಮನೆಗಳನ್ನು ಸಿಂಗರಿಸಿ ಮನೆಯ ಮುಂದೆ ವೈವಿಧ್ಯಮಯವಾದ ರಂಗೋಲಿಗಳನ್ನು ಬಿಡಿಸಿ ನೆರೆಹೊರೆಯವರು, ಬಂಧು-ಮಿತ್ರರೊಂದಿಗೆ ಹಬ್ಬದ ಶುಭಾಶಯ ಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.
ಇಂದು ಭಾನುವಾರ ವಾಗಿರುವ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯ ರೆಲ್ಲರೂ ಒಟ್ಟುಗೂಡಿ ಮನೆಯಲ್ಲಿ ಹಬ್ಬ ಆಚರಣೆ ಮಾಡಿದರು. ಹತ್ತಿರದ ಹಾಗೂ ತಮ ಆರಾಧ್ಯ ದೇವರುಗಳ ದೇವಾಲಯಕ್ಕೆ ತೆರಳಿ ಶಿವನ ದರ್ಶನ ಹಾಗೂ ವಿಶೇಷ ಪೂಜೆಗಳನ್ನು ನೆರವೇರಿಸುತ್ತಿರುವುದು ಎಲ್ಲೆಡೆ ಸಾಮಾನ್ಯವಾಗಿತ್ತು. ಅಲ್ಲದೆ, ಎಲ್ಲೆಡೆ ಹರ ನಾಮ ಸರಣೆ ಮೊಳಗುತ್ತಿತ್ತು.
