ಬೆಂಗಳೂರು,ಫೆ.16- ಮಹಾಶಿವರಾತ್ರಿ ಅಂಗವಾಗಿ ರಾಜ್ಯಾದ್ಯಂತ ನಡೆದ ಜಾಗರಣೆಯಲ್ಲಿ ಶಿವನಾಮಸ್ಮರಣೆ, ಹರಹರ ಮಹಾದೇವ ಘೋಷಣೆಗಳು ಮೊಳಗಿದವು.ನಿನ್ನೆ ಮುಂಜಾನೆಯಿಂದಲೇ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜಾಕಾರ್ಯಗಳು ಅದ್ಧೂರಿಯಾಗಿ ನೆರವೇರಿದ್ದು, ರಾತ್ರಿ ಜಾಗರಣೆ ಕಾರ್ಯಕ್ರಮಗಳನ್ನು ಹಮಿಕೊಳ್ಳಲಾಗಿತ್ತು.
ಭಕ್ತರು ಉಪವಾಸದೊಂದಿಗೆ ಶಿವಪೂಜೆ ಮಾಡಿ ರಾತ್ರಿ ಜಾಗರಣೆಯಿದ್ದು, ಇಂದು ಬೆಳಿಗ್ಗೆ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದು ಪ್ರಸಾದ ಸೇವಿಸಿ ಉಪವಾಸ ಕೈಬಿಟ್ಟರು.
ರಾಜ್ಯಾದ್ಯಂತ ಶಿವನ ದೇವಾಲಯಗಳಿಗೆ ಭಕ್ತಸಾಗರವೇ ಹರಿದುಬಂದಿತ್ತು. ಅದರಲ್ಲೂ ಚಾಮರಾಜನಗರ ಜಿಲ್ಲೆಯ ಮಲೈ ಮಹದೇಶ್ವರ ಬೆಟ್ಟದಲ್ಲಿ ಮಾದಪ್ಪನನ್ನು ನೋಡಲು ಸಾಗರೋಪಾದಿಯಲ್ಲಿ ಭಕ್ತರು ತೆರಳಿ ದರ್ಶನ ಪಡದು ಪುನೀತರಾದರು.
ಸಾಲೂರು ಬೃಹನಠದ ಪೀಠಾಧಿಪತಿಗಳಾದ ಡಾ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಯವರ ನೇತೃತ್ವದಲ್ಲಿ ಬೇಡಗಂಪಣ ಅರ್ಚಕರಿಂದ ಮಹದೇಶ್ವರ ಸ್ವಾಮಿಗೆ ಎಣ್ಣೆಮಜ್ಜನ ನೆರವೇರಿಸಲಾಯಿತು.
ದೇವಾಲಯದ ಗರ್ಭಗುಡಿ ಹಾಗೂ ಒಳಾಂಗಣವನ್ನು ವಿವಿಧ ಹಣ್ಣು, ತರಕಾರಿ, ಫಲಪುಷ್ಪಗಳಿಂದ ಶೃಂಗರಿಸಲಾಗಿದ್ದು, ನೋಡಲು ಎರಡು ಕಣ್ಣುಗಳೂ ಸಾಲದಾಗಿತ್ತು. ಜಾಗರಣೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ರಾತ್ರಿಯಿಡೀ ಉಘೇಉಘೇ ಮಾದಪ್ಪ ಎಂಬ ಘೋಷಣೆಯೊಂದಿಗೆ ಜಾಗರಣೆ ಮಾಡಿದರು.
ಇಂದೂ ಕೂಡ ದೇವಾಲಯಗಲ್ಲಿ ಅಭಿಷೇಕ, ಮಹಾಮಂಗಳಾರತಿ ಸೇರಿದಂತೆ ವಿಶೇಷ ಪೂಜಾ ಕಾರ್ಯಗಳು ವಿಜೃಂಭಣೆಯಿಂದ ನೆರವೇರಿದವು.ನಿನ್ನೆಯಿಡೀ ಹಬ್ಬ ಆಚರಣೆ ಮಾಡಿ, ರಾತ್ರಿ ಜಾಗರಣೆ ಮಾಡಿ ಇಂದು ಬೆಳಿಗ್ಗೆ ದೇವರ ದರ್ಶನ ಪಡೆದು ಭಕ್ತರು ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದ ದೃಶ್ಯಗಳು ರಾಜಧಾನಿ ಸೇರಿದಂತೆ ವಿವಿಧ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಕಂಡುಬಂದವು.
