Homeರಾಜ್ಯನಕಲಿ ಔಷಧ ಮಾರಾಟ : ಕೊಲೆ ಪ್ರಕರಣ ದಾಖಲಿಸಲು ಸಿದ್ಧತೆ

ನಕಲಿ ಔಷಧ ಮಾರಾಟ : ಕೊಲೆ ಪ್ರಕರಣ ದಾಖಲಿಸಲು ಸಿದ್ಧತೆ

ಬೆಂಗಳೂರು, ಸೆ.24- ನಕಲಿ ಔಷಧಿಗಳನ್ನು ಮಾರಾಟ ಮಾಡುವ ಮೂಲಕ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಕೊಲೆ ಮಾಡುವ ಉದ್ದೇಶದ ಆರೋಪದಡಿ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಿದೆ.

ನಕಲಿ ಔಷಧಿಗಳಿಗೆ ಕಡಿವಾಣ ಹಾಕಲು ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಔಷಧಿಗಳು ನಕಲಿ ಎಂದು ಗೊತ್ತಿದ್ದರೂ ಅವುಗಳನ್ನು ಮಾರಾಟ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ.

ಮತ್ತೊಂದೆಡೆ, ನಕಲಿ ಔಷಧಿಗಳ ಹಾವಳಿ ಹಾಗೂ ಔಷಧಿಗಳ ದುರುಪಯೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು ವೈದ್ಯರು, ಫಾರ್ಮಸಿಸ್ಟ್‌ಗಳು ಹಾಗೂ ಆರೋಗ್ಯ ಸೇವಾ ಸಂಸ್ಥೆಗಳಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ವೈದ್ಯರಿಗೆ ಸೂಚನೆ: ರೋಗಿಯ ವಯಸ್ಸು, ಕಾಯಿಲೆ ಹಾಗೂ ಪ್ರಸ್ತುತ ಬಳಸುತ್ತಿರುವ ಔಷಧಿಗಳನ್ನು ಪರಿಗಣಿಸಿ, ಅಗತ್ಯವಿದ್ದಲ್ಲಿ ಮಾತ್ರ ನೋವು ನಿವಾರಕ ಹಾಗೂ ಆ್ಯಂಟಿಬಯಾಟಿಕ್‌ಗಳನ್ನು ಕಡಿಮೆ ಪ್ರಮಾಣದಲ್ಲಿ ಮತ್ತು ಕಡಿಮೆ ಅವಧಿಗೆ ನೀಡುವಂತೆ ವೈದ್ಯರಿಗೆ ಸೂಚಿಸಲಾಗಿದೆ.

ಫಾರ್ಮಸಿಸ್ಟ್‌ಗಳು ಹಾಗೂ ಆರೋಗ್ಯ ಸೇವಾ ಕೇಂದ್ರಗಳು ಔಷಧ ಮಾರಾಟಕ್ಕೆ ಸಂಬಂಧಿಸಿದ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವೈದ್ಯರ ಅನುಮತಿ ಇಲ್ಲದೆ ಮಾತ್ರೆ ಅಥವಾ ಟಾನಿಕ್‌ಗಳನ್ನು ಮಾರಾಟ ಮಾಡಬಾರದು. ಆ್ಯಂಟಿಬಯಾಟಿಕ್‌ ಹಾಗೂ ನೋವು ನಿವಾರಕಗಳನ್ನು ತೆಗೆದುಕೊಳ್ಳುವಂತೆ ರೋಗಿಗಳನ್ನು ಪ್ರೋತ್ಸಾಹಿಸಬಾರದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ನಕಲಿ ಔಷಧ ಜಾಲದಲ್ಲಿ ಯಾರ್ಯಾರು ಸಹಕಾರ ನೀಡಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಜಾಲದ ಹಣಕಾಸು ವ್ಯವಹಾರ ಹಾಗೂ ಪೂರೈಕೆ ಮಾರ್ಗಗಳ ಕುರಿತು ಎಫ್‌ಡಿಎ ಮತ್ತು ವಾಣಿಜ್ಯ ತೆರಿಗೆ ಇಲಾಖೆ ನಡುವೆ ಸಮನ್ವಯ ಸಾಧಿಸಿ ಪೊಲೀಸರು ತನಿಖೆ ನಡೆಸಲು ಸಿದ್ಧತೆ ನಡೆಸಿದ್ದಾರೆ.

RELATED ARTICLES
spot_img

Latest News