Homeರಾಜ್ಯಒಂಟಿ ವೃದ್ಧೆ ಕೊಲೆ ಪ್ರಕರಣ : ಕೊಲೆ ಮಾಡಿ ಪರಾರಿಯಾಗಿದ್ದ ಸಂಬಂಧಿಕರ ಬಂಧನ

ಒಂಟಿ ವೃದ್ಧೆ ಕೊಲೆ ಪ್ರಕರಣ : ಕೊಲೆ ಮಾಡಿ ಪರಾರಿಯಾಗಿದ್ದ ಸಂಬಂಧಿಕರ ಬಂಧನ

ಬೆಂಗಳೂರು,ನ.5- ಆಸ್ತಿ ಆಸೆಗಾಗಿ ಹೊಸ ಗುಡ್ಡದ ಹಳ್ಳಿಯಲ್ಲಿ ಒಂಟಿ ವೃದ್ಧೆಯನ್ನುಕೊಲೆ ಮಾಡಿ ಪರಾರಿಯಾಗಿದ್ದಸಂಬಂಧಿಕರನ್ನು ಬ್ಯಾಟ ರಾಯನಪುರ ಪೊಲೀಸರು ಬಂಧಿಸಿದ್ದಾರೆ.ಕೊಲೆಯಾದ ವೆಂಕಟಲಕ್ಷ್ಮಮ (68) ಅವರ ಅಣ್ಣನ ದೂರದ ಸಂಬಂಧಿ ಜಯನಗರದ ನಕ್ಕಲುಬಂಡೆ ನಿವಾಸಿ ಕಾಂತರಾಜು (39) ಮತ್ತು ಸಾಕು ತಂಗಿಯ ಸಂಬಂಧಿ ಮಾದನಾಯಕನಹಳ್ಳಿಯ ಸುವರ್ಣ ನಗರದ ದೊಡ್ಡಬಿದಿರಕಲ್ಲು ನಿವಾಸಿ ಮಂಜಪ್ಪ (30) ಬಂಧಿತರು.

ಹೊಸಗುಡ್ಡದ ಹಳ್ಳಿಯ 1ನೇ ಮುಖ್ಯ ರಸ್ತೆ ಸಿ ಕ್ರಾಸ್‌‍ನಲ್ಲಿ ವೆಂಕಟಲಕ್ಷ್ಮಮ ಅವರ ಪತಿ ಕೋವಿಡ್‌ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ. ಮಗಳು ಸಹ ಕೆಲವು ವರ್ಷಗಳ ಹಿಂದೆ ಮೃತಪಟ್ಟಿರುತ್ತಾರೆ.ಹಾಗಾಗಿ ಇವರು ಒಬ್ಬರೇ ಕಳೆದ 6 ವರ್ಷಗಳಿಂದ ಒಂಟಿಯಾಗಿ ತಮ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದರು. ಆರ್‌ಆರ್‌ನಗರದಲ್ಲಿ ಜಮೀನು ಹೊಂದಿರುವ ಇವರಿಗೆ ಹಲವು ನಿವೇಶನಗಳಿವೆ. ಒಟ್ಟಾರೆ ಆಸ್ತಿ ವಿಚಾರವಾಗಿ ನ್ಯಾಯಾಲಯದಲ್ಲಿ ವ್ಯಾಜ್ಯವಿದೆ.

ಅ.23 ರಂದು ಮಧ್ಯಾಹ್ನ 1 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸಂಬಂಧಿಕರು ಆಸ್ತಿ ವಿಚಾರವಾಗಿ ವೆಂಕಟಲಕ್ಷ್ಮಮ ಅವರೊಂದಿಗೆ ಮಾತನಾಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.ಅಂದು ರಾತ್ರಿ ಇದೇ ವಿಷಯ ಮಾತನಾಡಲು ಈ ಇಬ್ಬರು ಸಂಬಂಧಿಗಳು ವೆಂಕಟಲಕ್ಷ್ಮಮ ಅವರ ಮನೆಗೆ ಬಂದು ಜಗಳವಾಡಿದ್ದು, ಆ ಸಂದರ್ಭದಲ್ಲಿ ತಲೆ, ಕುತ್ತಿಗೆ ಭಾಗಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದರು. ಮಾರನೇ ದಿನ ವೆಂಕಟಲಕ್ಷ್ಮಮ ಕೊಲೆಯಾಗಿರುವುದು ಗೊತ್ತಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವೆಂಕಟಲಕ್ಷ್ಮಮ ಅವರ ಮೊಬೈಲ್‌ನಲ್ಲಿ ಬಂದಿರುವ ಕರೆಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.ಮೃತರ ಮೈ ಮೇಲೆ ಕೆಲವು ಆಭರಣಗಳು ಹಾಗೆಯೇ ಇದ್ದುದ್ದರಿಂದ ಇದು ಆಸ್ತಿ ವಿವಾದ ಅಥವಾ ಬೇರೆ ಯಾವುದೋ ಕಾರಣಕ್ಕೆ ಪರಿಚಯಸ್ಥರಿಂದಲೇ ಕೊಲೆಯಾಗಿರುವ ಬಗ್ಗೆ ಅನುಮಾನಗೊಂಡು ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ತೀವ್ರಗೊಳಿಸಿ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಅಲ್ಲದೇ ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳು ಹಾಗೂ ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮೃತರ ದೂರದ ಇಬ್ಬರು ಸಂಬಂಧಿಕರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

RELATED ARTICLES

Latest News