Homeರಾಜ್ಯಬೆಂಗಳೂರಿನ 8 ಕ್ಲಬ್‌ಗಳಲ್ಲಿ ಆಹಾರ ಸುರಕ್ಷತೆ ಕುರಿತ ನಿಯಮ ಉಲ್ಲಂಘನೆ, ನೋಟಿಸ್‌ ಜಾರಿ

ಬೆಂಗಳೂರಿನ 8 ಕ್ಲಬ್‌ಗಳಲ್ಲಿ ಆಹಾರ ಸುರಕ್ಷತೆ ಕುರಿತ ನಿಯಮ ಉಲ್ಲಂಘನೆ, ನೋಟಿಸ್‌ ಜಾರಿ

Notices issued for violation of food safety rules in 8 clubs in Bengaluru

ಬೆಂಗಳೂರು, ಆ.26- ಬೆಂಗಳೂರು ನಗರ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಂಟು ಕ್ಲಬ್‌ಗಳಲ್ಲಿ ಆಹಾರ ಸುರಕ್ಷತೆ ಕುರಿತ ವಿಶೇಷ ತಪಾಸಣೆ ನಡೆಸಿ, ನಿಯಮ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ.

ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತಾ ವಿಭಾಗದ ವತಿಯಿಂದ ವಿವಿಧ ಕ್ಲಬ್‌ಗಳಲ್ಲಿ ವಿಶೇಷ ತಪಾಸಣೆ ನಡೆಸಲು ಆಹಾರ ಸುರಕ್ಷತಾ ಅಧಿಕಾರಿಗಳ ತಂಡಗಳನ್ನು ರಚಿಸಿ ನಿಯೋಜಿಸಲಾಗಿತ್ತು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೌರಿಂಗ್‌ ಕ್ಲಬ್‌ನಲ್ಲಿ ಆಹಾರ ಸಂಗ್ರಹಣಾ ಸ್ಥಳದಲ್ಲಿ ಅಸ್ವಚ್ಛತೆ ಹಾಗೂ ಕೀಟಬಾಧೆ ಕಂಡುಬಂದಿದೆ. ಸೆಂಚುರಿ ಕ್ಲಬ್‌ನಲ್ಲಿ ತಪಾಸಣೆ ವೇಳೆ ಕೀಟಬಾಧೆ ಹಾಗೂ ಅಸ್ವಚ್ಛ ಮತ್ತು ಅನೈರ್ಮಲ್ಯಕರ ಪರಿಸ್ಥಿತಿ ಕಂಡುಬಂದ ಹಿನ್ನೆಲೆಯಲ್ಲಿ ಈ ಎರಡು ಕ್ಲಬ್‌ಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

ಕೆಎಸ್‌ಸಿಎ ಕ್ಲಬ್‌ನಲ್ಲಿ ವೈಯಕ್ತಿಕ ಸ್ವಚ್ಛತೆಯ ಕೊರತೆ, ಪ್ಲಾಸ್ಟಿಕ್‌ ಕಟಿಂಗ್‌ ಬೋರ್ಡ್‌ ಬಳಕೆ, ಡ್ರೈನೇಜ್‌ ವ್ಯವಸ್ಥೆಯಲ್ಲಿ ತಡೆ, ಆಹಾರ ಲೇಬಲಿಂಗ್‌ ನಿಯಮಗಳ ಉಲ್ಲಂಘನೆ, ಫ್ರೋಜನ್‌ ಸ್ಟೋರೇಜ್‌ನಲ್ಲಿ ಸ್ವಚ್ಛತೆಯ ಕೊರತೆ, ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರ ಪದಾರ್ಥಗಳ ಅಸಮರ್ಪಕ ಸಂಗ್ರಹಣೆ ಹಾಗೂ ಪಾತ್ರೆ ತೊಳೆಯುವ ಸ್ಥಳದಲ್ಲಿ ಬಿಸಿನೀರಿನ ವ್ಯವಸ್ಥೆಯ ಕೊರತೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕ್ಲಬ್‌ಗೆ ನೋಟಿಸ್‌ ನೀಡಲಾಗಿದೆ.

ಕ್ಯಾಥೋಲಿಕ್‌ ಕ್ಲಬ್‌ನಲ್ಲಿ ಆಹಾರ ಪದಾರ್ಥಗಳ ಲೇಬಲಿಂಗ್‌ ನಿಯಮ ಉಲ್ಲಂಘನೆ, ಕೀಟಬಾಧೆ, ಸ್ವಚ್ಛತೆ ಮತ್ತು ನೈರ್ಮಲ್ಯದ ಕೊರತೆ ಹಾಗೂ ಅವಧಿ ಮೀರಿದ 10 ಪ್ಯಾಕೆಟ್‌ಗಳ ಅಣಬೆ ಆಹಾರ ಪದಾರ್ಥಗಳು ಪತ್ತೆಯಾದ ಹಿನ್ನೆಲೆಯಲ್ಲಿ ನೋಟಿಸ್‌ ಜಾರಿ ಮಾಡಲಾಗಿದೆ.

ಕೆನ್ನಿಸ್‌ ಕ್ಲಬ್‌ನಲ್ಲಿ ಆಹಾರ ನಿರ್ವಹಣಾ ಸಿಬ್ಬಂದಿಗೆ ಸಂಬಂಧಿಸಿದ ವೈದ್ಯಕೀಯ ಪ್ರಮಾಣಪತ್ರಗಳು ಲಭ್ಯವಿಲ್ಲದಿರುವುದು ಕಂಡುಬಂದಿದೆ. ವಿಜಯನಗರ ಕ್ಲಬ್‌ನಲ್ಲಿ ಆಹಾರ ಪದಾರ್ಥಗಳ ಲೇಬಲಿಂಗ್‌ ನಿಯಮಗಳ ಉಲ್ಲಂಘನೆ ಹಾಗೂ ಸ್ವಚ್ಛತೆ ಮತ್ತು ನೈರ್ಮಲ್ಯದ ಕೊರತೆ ಕಂಡುಬಂದಿದೆ.

ಮಹಾಲಕ್ಷ್ಮೀ ಲೇಔಟ್‌ ಕ್ಲಬ್‌ನಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯದ ಕೊರತೆ ಕಂಡುಬಂದಿದ್ದು, ಮಲ್ಲೇಶ್ವರಂ ಕ್ಲಬ್‌ನಲ್ಲಿ ಆಹಾರ ಪದಾರ್ಥಗಳ ಲೇಬಲಿಂಗ್‌ ಉಲ್ಲಂಘನೆ, ಕೀಟಬಾಧೆ ಹಾಗೂ ಸ್ವಚ್ಛತೆ ಮತ್ತು ನೈರ್ಮಲ್ಯದ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್‌ ನೀಡಲಾಗಿದೆ.

ತಪಾಸಣೆ ವೇಳೆ ಕುಡಿಯುವ ನೀರು ಹಾಗೂ ಬಳಸಿದ ಅಡುಗೆ ಎಣ್ಣೆಯ ಮಾದರಿಗಳನ್ನು ಸಂಗ್ರಹಿಸಿ, ಹೆಚ್ಚಿನ ವಿಶ್ಲೇಷಣೆಗಾಗಿ ಸರ್ಕಾರಿ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಯೋಗಾಲಯದ ವಿಶ್ಲೇಷಣಾ ವರದಿ ಬಂದ ಬಳಿಕ ಅದರ ಫಲಿತಾಂಶದ ಆಧಾರದ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಹಾಗೂ ನಿಯಮಗಳು-2011ರ ಅನ್ವಯ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

RELATED ARTICLES
spot_img

Latest News