ಬೆಂಗಳೂರು, ಆ.26- ಸರ್ಕಾರಿ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆಯಾದ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂಬ ಕಾಂಗ್ರೆಸ್ ಪಕ್ಷದ ನಿಲುವಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಪಕ್ಷದ ನಿರ್ಧಾರಕ್ಕೆ ತಾವು ಬದ್ಧರಾಗಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.ಇಂಡಿಯಾ ಟುಡೇ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಸಿದ್ಧಾಂತ ಹಾಗೂ 1937ರ ನಿರ್ಣಯದ ಬಗ್ಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.
ನಮ್ಮ ಪಕ್ಷದ ಸಿದ್ಧಾಂತದಲ್ಲಿ ನನಗೆ ನಂಬಿಕೆ ಇದೆ. ನಾವು ಯಾವುದೇ ನಿರ್ಧಾರ ಕೈಗೊಂಡಿದ್ದರೂ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ಭವಿಷ್ಯದಲ್ಲಿ ಹಾಗೂ ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲೂ ಈ ಹಿಂದೆ ನಿರ್ಧರಿಸಿರುವ ವಂದೇ ಮಾತರಂನ ಎರಡು ಚರಣಗಳಿಗೆ ಮಾತ್ರ ಬದ್ಧರಾಗಿರುತ್ತೇವೆ ಎಂದು ಹೇಳಿದರು.
ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಎಲ್ಲಾ ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸುವ ಪ್ರಸ್ತಾವನೆ ಹಾಗೂ ಈ ವಿಚಾರವಾಗಿ ಬಿಜೆಪಿ-ಕಾಂಗ್ರೆಸ್ ನಡುವೆ ನಡೆಯುತ್ತಿರುವ ರಾಜಕೀಯ ವಾಕ್ಸಮರದ ಹಿನ್ನೆಲೆಯಲ್ಲಿ ಶಿವಕುಮಾರ್ ಅವರ ಹೇಳಿಕೆ ಮಹತ್ವ ಪಡೆದಿದೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಕಳೆದ ವಾರ ಸಾರ್ವಜನಿಕ ಹಾಗೂ ರಾಷ್ಟ್ರೀಯ ಸಭೆಗಳಲ್ಲಿ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂಬ 1937ರ ಐತಿಹಾಸಿಕ ನಿರ್ಣಯವನ್ನು ಪುನರುಚ್ಚರಿಸಿತ್ತು. ಇದೇ ವೇಳೆ ಹೊಸ ವಂದೇ ಮಾತರಂ ಮಸೂದೆಯಲ್ಲಿ ಎಲ್ಲಾ ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸುವ ಪ್ರಸ್ತಾವನೆ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ತುಷ್ಟೀಕರಣ ರಾಜಕೀಯದ ಆರೋಪ
ದೇಶದಲ್ಲಿ ನಡೆಯುತ್ತಿರುವ ತುಷ್ಟೀಕರಣ ರಾಜಕೀಯದ ಬಗ್ಗೆಯೂ ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.ಕಾಂಗ್ರೆಸ್ ಪಕ್ಷವು ಯಾವಾಗಲೂ ವೈವಿಧ್ಯತೆಯಲ್ಲಿ ನಂಬಿಕೆ ಇಟ್ಟಿದೆ. ಭಾರತ ವೈವಿಧ್ಯಮಯ ಸಮುದಾಯಗಳ ದೇಶ. ಬಿಜೆಪಿ ತುಷ್ಟೀಕರಣ ರಾಜಕೀಯವನ್ನು ಅನುಸರಿಸುತ್ತಿದೆ. ಆದರೆ ಕಾಂಗ್ರೆಸ್ ಸಮಾಜದ ಪ್ರತಿಯೊಂದು ವರ್ಗವನ್ನೂ ತನ್ನೊಂದಿಗೆ ಕರೆದೊಯ್ಯುವುದರಲ್ಲಿ ನಂಬಿಕೆ ಹೊಂದಿದೆ ಎಂದು ಅವರು ಹೇಳಿದರು.
ಕ್ಷೇತ್ರ ಪುನರ್ವಿಂಗಡಣೆಗೂ ವಿರೋಧ
ವಂದೇ ಮಾತರಂ ವಿಚಾರದ ಜತೆಗೆ ಜನಸಂಖ್ಯೆ ಆಧಾರಿತ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಕುರಿತ ತಮ್ಮ ನಿಲುವನ್ನೂ ಶಿವಕುಮಾರ್ ಸ್ಪಷ್ಟಪಡಿಸಿದರು.ಜನಸಂಖ್ಯಾ ನಿಯಂತ್ರಣ ನೀತಿಯನ್ನು ಯಶಸ್ವಿಯಾಗಿ ಜಾರಿಗೊಳಿಸಿರುವ ದಕ್ಷಿಣ ರಾಜ್ಯಗಳಿಗೆ ಕ್ಷೇತ್ರ ಪುನರ್ವಿಂಗಡಣೆಯ ಮೂಲಕ ರಾಜಕೀಯವಾಗಿ ಅನ್ಯಾಯವಾಗಬಾರದು ಎಂಬುದು ಅವರ ವಾದವಾಗಿದೆ.
ಪ್ರಸ್ತುತ ಲೋಕಸಭೆಯಲ್ಲಿ 543 ಸ್ಥಾನಗಳಿವೆ. 2026ರ ನಂತರ ನಡೆಯುವ ಮೊದಲ ಜನಗಣತಿಯ ಅಂಕಿಅಂಶಗಳು ಪ್ರಕಟವಾಗುವವರೆಗೆ ಕ್ಷೇತ್ರಗಳ ಮರುಹೊಂದಾಣಿಕೆಗೆ ಸಂವಿಧಾನಾತ್ಮಕ ನಿರ್ಬಂಧವಿದೆ. ಹೀಗಾಗಿ ಮುಂದಿನ ಕ್ಷೇತ್ರ ಪುನರ್ವಿಂಗಡಣೆ ದೇಶದ ರಾಜಕೀಯ ಸಮೀಕರಣದಲ್ಲಿ ಮಹತ್ವದ ವಿಚಾರವಾಗಿದೆ.
ಮುಂದಿನ 25 ವರ್ಷಗಳವರೆಗೆ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 543ರಲ್ಲೇ ಉಳಿಸಬೇಕು ಹಾಗೂ ಇದೇ ಸಂಖ್ಯೆಯೊಳಗೆ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಶಿವಕುಮಾರ್ ಪ್ರತಿಪಾದಿಸಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆಗೆ 1971ರ ಜನಗಣತಿಯನ್ನೇ ಆಧಾರವಾಗಿ ಮುಂದುವರಿಸುವಂತೆ ದಕ್ಷಿಣ ವಲಯ ಮಂಡಳಿ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಆಲೋಚನೆಯನ್ನೂ ಅವರು ಮುಂದಿಟ್ಟಿದ್ದಾರೆ.
ಕೇಂದ್ರದ ಅಂದಾಜಿನ ಪ್ರಕಾರ, ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ನಡೆದರೆ ಕರ್ನಾಟಕದ ಲೋಕಸಭಾ ಸ್ಥಾನಗಳು 28ರಿಂದ 42ಕ್ಕೆ, ತಮಿಳುನಾಡಿನವು 39ರಿಂದ 59ಕ್ಕೆ, ಕೇರಳದವು 20ರಿಂದ 30ಕ್ಕೆ, ಆಂಧ್ರಪ್ರದೇಶದವು 25ರಿಂದ 38ಕ್ಕೆ ಹಾಗೂ ತೆಲಂಗಾಣದವು 17ರಿಂದ 26ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಆದರೆ, ಒಟ್ಟು ಸ್ಥಾನಗಳ ಸಂಖ್ಯೆ ಹೆಚ್ಚಾದರೂ ಸಂಸತ್ತಿನಲ್ಲಿ ದಕ್ಷಿಣ ಭಾರತದ ಒಟ್ಟಾರೆ ರಾಜಕೀಯ ಪಾಲು ಸುಮಾರು ಶೇ.24ರಷ್ಟೇ ಉಳಿಯಬಹುದು ಎಂಬುದು ಕೇಂದ್ರದ ವಾದವಾಗಿದೆ.
ದಶಕಗಳಿಂದ ಜನಸಂಖ್ಯಾ ನಿಯಂತ್ರಣ ನೀತಿಗಳನ್ನು ಅನುಸರಿಸಿರುವ ದಕ್ಷಿಣ ರಾಜ್ಯಗಳ ಸಂಸದೀಯ ಪ್ರಾತಿನಿಧ್ಯಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಕ್ಷೇತ್ರ ಪುನರ್ವಿಂಗಡಣೆ ನಡೆಯುವುದು ನ್ಯಾಯಸಮ್ಮತವಲ್ಲ. ಆದ್ದರಿಂದ ಪ್ರಸ್ತುತ ಸ್ಥಾನಗಳನ್ನು ಉಳಿಸಿಕೊಂಡು, ಮಹಿಳಾ ಮೀಸಲಾತಿ ಸೇರಿದಂತೆ ಹೊಸ ಪ್ರತಿನಿಧಿತ್ವ ವ್ಯವಸ್ಥೆಗಳನ್ನು ಇದೇ ಸಂಖ್ಯೆಯೊಳಗೆ ಜಾರಿಗೊಳಿಸಬೇಕು ಎಂಬುದು ಶಿವಕುಮಾರ್ ಅವರ ಸಲಹೆಯಾಗಿದೆ.
