ಬೆಂಗಳೂರು, ಆ.26- ಪ್ರಸ್ತಾವಿತ ಮೇಕೆದಾಟು ಅಣೆಕಟ್ಟು ಯೋಜನೆಯು ತಮಿಳುನಾಡಿನ ಹಿತಾಸಕ್ತಿ ಹಾಗೂ ಬೆಂಗಳೂರಿನ ಕುಡಿಯುವ ನೀರಿನ ಅಗತ್ಯಗಳನ್ನು ಸಮಾನವಾಗಿ ರಕ್ಷಿಸಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಇಂಡಿಯಾ ಟುಡೇ ರೌಂಡ್ಟೇಬಲ್ ಕರ್ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರೊಂದಿಗೆ ಈ ಕುರಿತು ಚರ್ಚಿಸಿರುವುದಾಗಿ ತಿಳಿಸಿದರು. ಜೂನ್ 3ರಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅವರು ನೀಡಿದ ಮೊದಲ ಮಾಧ್ಯಮ ಸಂದರ್ಶನ ಇದಾಗಿದೆ.
ಮೇಕೆದಾಟು ಯೋಜನೆಯಿಂದ ಸಂಗ್ರಹವಾಗುವ ನೀರಿನ ಶೇ.95ರಷ್ಟು ಭಾಗವನ್ನು ತಮಿಳುನಾಡಿನ ಬಳಕೆಗೆ ನೀಡಲಾಗುತ್ತದೆ. ಇದು ಆ ರಾಜ್ಯಕ್ಕೆ ಜೀವರಕ್ಷಕವಾಗಲಿದೆ. ಪ್ರವಾಹದ ಸಂದರ್ಭದಲ್ಲಿ ವ್ಯರ್ಥವಾಗಿ ಸಮುದ್ರಕ್ಕೆ ಹರಿದುಹೋಗುವ ನೀರನ್ನು ಸಂಗ್ರಹಿಸಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಈ ಜಲಾಶಯದ ನೀರನ್ನು ಕರ್ನಾಟಕವು ನೀರಾವರಿಗೆ ಬಳಸಿಕೊಳ್ಳಲು ಸಾಧ್ಯವಿಲ್ಲ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಕುಡಿಯುವ ನೀರಿನ ಅಗತ್ಯಕ್ಕಾಗಿ ನಿಗದಿಪಡಿಸಿರುವ 4.75 ಟಿಎಂಸಿ ನೀರನ್ನು ಮಾತ್ರ ಬಳಸಿಕೊಳ್ಳಲಾಗುತ್ತದೆ. ಸಾಮಾನ್ಯ ವರ್ಷಗಳಲ್ಲಿ ತಮಿಳುನಾಡಿಗೆ ಬಿಡುಗಡೆ ಮಾಡಬೇಕಾದ 177.25 ಟಿಎಂಸಿ ಕಾವೇರಿ ನೀರಿನ ಕುರಿತ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಸಂಪೂರ್ಣವಾಗಿ ಗೌರವಿಸಿ, ಪಾಲಿಸಲಾಗುವುದು ಎಂದು ಶಿವಕುಮಾರ್ ಪುನರುಚ್ಚರಿಸಿದರು.
ಅಂತರರಾಜ್ಯ ಜಲ ವಿವಾದಗಳನ್ನು ಕಾನೂನು ಹೋರಾಟದ ಮೂಲಕ ಬಗೆಹರಿಸುವುದಕ್ಕಿಂತ ಪರಸ್ಪರ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳುವುದು ಉತ್ತಮ. ತುಂಗಭದ್ರಾ ನದಿ ನೀರಿನ ಹಂಚಿಕೆ ವಿಚಾರವಾಗಿ ಆಂಧ್ರಪ್ರದೇಶ ಹಾಗೂ ತೆಲಂಗಾಣ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಸಕಾರಾತ್ಮಕ ಮಾತುಕತೆಯ ಮಾದರಿಯನ್ನು ಮೇಕೆದಾಟು ವಿಚಾರದಲ್ಲೂ ಅನುಸರಿಸಬಹುದು ಎಂದರು.
9 ಸಾವಿರ ಕೋಟಿ ರೂ. ಯೋಜನೆ
ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಸುಮಾರು 9,000 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮೇಕೆದಾಟು ಯೋಜನೆಯನ್ನು ರೂಪಿಸಲಾಗಿದೆ. 2019ರ ಬೆಲೆ ಆಧಾರದ ಮೇಲೆ ರೂಪಿಸಿರುವ ಈ ಬಹುಪಯೋಗಿ ಯೋಜನೆಯಡಿ 4.75 ಟಿಎಂಸಿ ಕುಡಿಯುವ ನೀರು ಒದಗಿಸುವುದರ ಜತೆಗೆ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ.
ಆದರೆ, ಯೋಜನೆಯಿಂದ ತಮ್ಮ ನೀರಿನ ಪಾಲಿಗೆ ಧಕ್ಕೆಯಾಗಲಿದೆ ಎಂದು ತಮಿಳುನಾಡು ಸರ್ಕಾರ ನಿರಂತರವಾಗಿ ವಿರೋಧಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಕಾನೂನು ಹೋರಾಟದ ಜತೆಗೆ ನೆರೆ ರಾಜ್ಯದೊಂದಿಗೆ ಸೌಹಾರ್ದಯುತ ಮಾತುಕತೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ.
