Homeಅಂತಾರಾಷ್ಟ್ರೀಯನೇಪಾಳದಲ್ಲಿ ಭಯಾನಕ ಪ್ರವಾಹ : 16 ಮಂದಿ ಸಾವು, ಭಾರತೀಯರೂ ಸೇರಿ ನೂರಾರು ಮಂದಿ ನಾಪತ್ತೆ

ನೇಪಾಳದಲ್ಲಿ ಭಯಾನಕ ಪ್ರವಾಹ : 16 ಮಂದಿ ಸಾವು, ಭಾರತೀಯರೂ ಸೇರಿ ನೂರಾರು ಮಂದಿ ನಾಪತ್ತೆ

ಕಠ್ಮಂಡು/ಪಾಟ್ನಾ, ಆ.26- ನೇಪಾಳದ ಟಿಬೆಟ್‌ ಗಡಿ ಸಮೀಪದ ರಸುವಾ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಹಠಾತ್‌ ಪ್ರವಾಹಕ್ಕೆ ಕನಿಷ್ಠ 16 ಮಂದಿ ಮೃತಪಟ್ಟಿದ್ದು, 105 ಭಾರತೀಯರು ಸೇರಿದಂತೆ ಸುಮಾರು 400 ಮಂದಿ ನಾಪತ್ತೆಯಾಗಿದ್ದಾರೆ. ಪ್ರವಾಹದ ರಭಸಕ್ಕೆ ಮನೆಗಳು, ವಾಹನಗಳು, ಸೇತುವೆಗಳು ಹಾಗೂ ಹಲವು ಮೂಲಸೌಕರ್ಯ ಯೋಜನೆಗಳು ಕೊಚ್ಚಿಹೋಗಿವೆ.ರಸುವಾ ಜಿಲ್ಲೆಯ ಟಿಮುರೆ ಮತ್ತು ಸ್ಯಾಪ್ರುಬೆಸಿ ಪ್ರದೇಶಗಳಲ್ಲಿ ಪ್ರವಾಹ ಭಾರಿ ಹಾನಿ ಉಂಟುಮಾಡಿದೆ. ಬೆಳಗ್ಗೆ ಸುಮಾರು 9 ಗಂಟೆ ವೇಳೆಗೆ ಟಿಬೆಟ್‌ ಕಡೆಯಿಂದ ಭೋಟೆ ಕೋಶಿ ನದಿಗೆ ಭಾರಿ ಪ್ರಮಾಣದಲ್ಲಿ ನೀರು ನುಗ್ಗಿದ್ದರಿಂದ ಪ್ರವಾಹ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹಕ್ಕೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ರಸುವಾದಲ್ಲಿ ಭಾರಿ ಮಳೆಯಾಗಿರುವ ಸಾಧ್ಯತೆ ಕಡಿಮೆ ಎಂದು ನೇಪಾಳದ ಪ್ರವಾಹ ಮುನ್ಸೂಚನಾ ವಿಭಾಗ ತಿಳಿಸಿದೆ. ಆದರೆ, ಉಪಗ್ರಹ ಚಿತ್ರಗಳಲ್ಲಿ ಟಿಬೆಟ್‌ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿರುವುದು ಕಂಡುಬಂದಿದೆ. ಹೀಗಾಗಿ ಹಿಮನದಿ ಸರೋವರ ಒಡೆದು ಪ್ರವಾಹ ಉಂಟಾಗಿರುವ ಸಾಧ್ಯತೆ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ.

ಇದೇ ವೇಳೆ, ಭೂಕಂಪದಿಂದ ಹಿಮಕುಸಿತ ಸಂಭವಿಸಿ, ಅದರ ಪರಿಣಾಮ ಭಾರಿ ಪ್ರಮಾಣದ ನೀರು ಮತ್ತು ಅವಶೇಷಗಳು ಕೆಳಭಾಗಕ್ಕೆ ಹರಿದು ಹಠಾತ್‌ ಪ್ರವಾಹ ಉಂಟಾಗಿರಬಹುದು ಎಂಬ ಸಾಧ್ಯತೆಯನ್ನೂ ನೇಪಾಳದ ವಿದೇಶಾಂಗ ಸಚಿವರು ಪ್ರಸ್ತಾಪಿಸಿದ್ದಾರೆ.

ಟಿಬೆಟ್‌ನಲ್ಲೂ ಭಾರಿ ಹಾನಿ
ಪ್ರವಾಹದ ಜತೆಗೆ ಟಿಬೆಟ್‌ನ ಗೈರಾಂಗ್‌ ಗಡಿ ಪ್ರದೇಶದ ಸಮೀಪ ಮಣ್ಣು ಕುಸಿತ ಸಂಭವಿಸಿದ್ದು, ಹಲವರು ಮೃತಪಟ್ಟಿರುವ ಹಾಗೂ ನಾಪತ್ತೆಯಾಗಿರುವ ವರದಿಗಳಿವೆ. ಟಿಬೆಟ್‌ನಲ್ಲೂ ನಾಪತ್ತೆಯಾದವರಿಗಾಗಿ ಸಮರೋಪಾದಿಯಲ್ಲಿ ಶೋಧ ನಡೆಸುವಂತೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಸೂಚಿಸಿದ್ದಾರೆ.

ರಸುವಾ ಜಿಲ್ಲೆಯ ಟಿಮುರೆ ಬಜಾರ್‌ ಹಾಗೂ ಟಿಬೆಟ್‌ ಗಡಿಯಲ್ಲಿರುವ ಕಸ್ಟಮ್ಸ್‌ ಪ್ರದೇಶವೂ ಪ್ರವಾಹಕ್ಕೆ ತೀವ್ರವಾಗಿ ಹಾನಿಗೊಳಗಾಗಿದೆ. ಹಲವು ವಾಹನಗಳು ಹಾಗೂ ಸರಕುಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಕಳೆದ ವರ್ಷದ ಪ್ರವಾಹದಲ್ಲಿ ಹಾನಿಗೊಳಗಾಗಿ ಮರುನಿರ್ಮಿಸಲಾಗಿದ್ದ ರಸುವಾಗಢಿ ಸಮೀಪದ ಫ್ರೆಂಡ್‌ಶಿಪ್‌ ಸೇತುವೆಯೂ ಮತ್ತೆ ಪ್ರವಾಹಕ್ಕೆ ಕೊಚ್ಚಿಹೋಗಿದೆ.

ಭಾರತದಲ್ಲೂ ಕಟ್ಟೆಚ್ಚರ
ನೇಪಾಳದಲ್ಲಿ ಉಂಟಾಗಿರುವ ಪ್ರವಾಹದ ಪರಿಣಾಮ ಭಾರತಕ್ಕೂ ಆತಂಕ ಎದುರಾಗಿದೆ. ನೇಪಾಳದೊಂದಿಗೆ ಗಡಿ ಹಂಚಿಕೊಂಡಿರುವ ಬಿಹಾರದಲ್ಲಿ ರಾಜ್ಯ ಸರ್ಕಾರ ಕಟ್ಟೆಚ್ಚರ ವಹಿಸಿದೆ. ಬಿಹಾರ ಮುಖ್ಯ ಕಾರ್ಯದರ್ಶಿ ಪ್ರತ್ಯಯ್‌ ಅಮೃತ್‌ ಅವರು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ನಡೆಸಿ, ಗಂಡಕ್‌ ಮತ್ತು ಕೋಸಿ ನದಿ ವ್ಯವಸ್ಥೆಯ ವ್ಯಾಪ್ತಿಯಲ್ಲಿರುವ ಜಿಲ್ಲೆಗಳಲ್ಲಿ ವಿಶೇಷ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಪ್ರವಾಹದ ನೀರು ಕೆಳಭಾಗಕ್ಕೆ ಹರಿದುಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಗಡಿ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಉತ್ತರ ಪ್ರದೇಶದ ಗಡಿ ಪ್ರದೇಶಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

ರಕ್ಷಣಾ ಕಾರ್ಯಾಚರಣೆ ಚುರುಕು
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೇಪಾಳ ಸರ್ಕಾರ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ. ಆದರೆ ಕೆಲವು ಪ್ರದೇಶಗಳಲ್ಲಿ ನೀರಿನ ಮಟ್ಟ ಅತ್ಯಂತ ಹೆಚ್ಚಿರುವುದರಿಂದ ಹೆಲಿಕಾಪ್ಟರ್‌ಗಳನ್ನು ಇಳಿಸಲು ಸಾಧ್ಯವಾಗುತ್ತಿಲ್ಲ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಪ್ರವಾಹದ ಭೀಕರತೆ ತೋರಿಸುವ ಹಲವು ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನದಿಯ ರಭಸಕ್ಕೆ ಸೇತುವೆಗಳು ಕೊಚ್ಚಿಹೋಗುತ್ತಿರುವುದು ಹಾಗೂ ಮನೆಗಳು ಕುಸಿದುಬೀಳುತ್ತಿರುವ ದೃಶ್ಯಗಳು ಆತಂಕ ಮೂಡಿಸಿವೆ. ಸದ್ಯ 16 ಮಂದಿ ಮೃತಪಟ್ಟಿರುವುದು ದೃಢಪಟ್ಟಿದ್ದು, 105 ಭಾರತೀಯರು ಸೇರಿದಂತೆ ಸುಮಾರು 400 ಮಂದಿ ನಾಪತ್ತೆಯಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕವಿದೆ.

RELATED ARTICLES
spot_img

Latest News