ಬೆಂಗಳೂರು, ಮಾ.14 – ಬಹುರಾಷ್ಟ್ರೀಯ ಕಂಪನಿಯಿಂದ ಒಂದು ರೂ.ಗೆ ಒಂದು ಲೀಟರ್ ಹಾಲು ಕೊಡುವುದಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಮಾಜಿ ಸಂಸದ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಗಂಭೀರ ವಿಚಾರವಾಗಿದ್ದು, ಸರ್ಕಾರ ತಕ್ಷಣ ಗಮನಹರಿಸಿ ಕಡಿವಾಣ ಹಾಕಬೇಕು. ಈ ಸಂಬಂಧ ಪ್ರಧಾನಿಗೆ ಪತ್ರ ಬರೆಯುತ್ತೇನೆ ಎಂದರು. ಪ್ರಚಾರಕ್ಕೆ 2 ಸಾವಿರ ಕೋಟಿ ಖರ್ಚಿ ಮಾಡಿದ್ದಾರೆ.
ಸ್ಪರ್ಧೆಗಾಗಿ ಒಂದು ರೂ.ಗೆ ಒಂದು ಲೀಟರ್ ಹಾಲು ಕೊಡುತ್ತಿದ್ದಾರೆ. ಸಾರ್ವಜನಿಕರ ಷೇರು ಹಣ ತಂದು ಇಲ್ಲಿ ಹಾಕುತ್ತಿದ್ದಾರೆ. ಇದರಿಂದ ರಾಜ್ಯದ ರೈತರಿಗೆ ಹೊಡೆತ ಬೀಳಲಿದೆ. ದೇಶದ ರೈತರ ಮೇಲೂ ಪರಿಣಾಮ ಬೀರಲಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸರ್ಕಾರ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂಬಂಧ ಕಾಂಪಿಟೇಷನ್ ಕಮೀಷನ್ ಇಂಡಿಯಾಗೆ ಪತ್ರ ಬರೆಯುತ್ತೇನೆ ಹಾಗೂ ಇದರ ವಿರುದ್ಧ ಕ್ರಮಕ್ಕೆ ಮನವಿ ಮಾಡುತ್ತೇನೆ. ರೈತರ ಹಿತವನ್ನು ಎಂಎನ್‌ಸಿ ಕಂಪನಿಗಳು ಹಾಳುಮಾಡುತ್ತಿವೆ. ಅವರು ಎಷ್ಟು ದಿನ ಒಂದು ರೂ.ಗೆ ಒಂದು ಲೀಟರ್ ಹಾಲು ಕೊಡುತ್ತಾರೆ? ಅದರ ಬಗ್ಗೆ ಅವರು ಸ್ಪಷ್ಟಪಡಿಸಬೇಕು. ಪ್ರಚಾರಕ್ಕಾಗಿ ರೈತರನ್ನು ಬಲಿಕೊಡುತ್ತಿದ್ದಾರೆ ಎಂದು ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರಚಾರಕ್ಕಿಂತ ರೈತರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಬೇಕು. ಈಗಾಗಲೇ ಹಾಲು ನೀಡುವ ಬಗ್ಗೆ ಜಾಹೀರಾತು ಕೊಡುತ್ತಿದ್ದಾರೆ. 14.5 ಲಕ್ಷ ಲೀಟರ್ ಹಾಲು ಮಾರಾಟವಾಗಿದೆ. ಒಂದು ರೂ.ಗೆ ಒಂದು ಲೀಟರ್ ಹಾಲನ್ನು ಒಂದು ವರ್ಷ ಕೊಡುತ್ತಾರೋ ಅಥವಾ ಎರಡು ವರ್ಷ ಕೊಡುತ್ತಾರೋ ಎಂಬುದನ್ನು ಹೇಳಬೇಕು.
ಹಾಲು ಪರಿಶೀಲನೆ:
ಹಾಲನ್ನು ಪರಿಶೀಲನೆ ಮಾಡಿ, ಪೌಡರ್ ಹಾಲು ಅಥವಾ ನೇರ ಹಾಲು ಎಂಬುದನ್ನು ನೋಡಬೇಕು. ಇವತ್ತು ಆ ಹಾಲನ್ನು ಸಂಗ್ರಹ ಮಾಡುವಂತೆ ಹೇಳಿದ್ದೇನೆ. ಹಾಲಿನ ಗುಣಮಟ್ಟವನ್ನು ಪರಿಶೀಲಿಸುತ್ತೇವೆ. ನಾವು ರೈತರಿಗೆ ಒಂದು ಲೀಟರ್‌ಗೆ 39 ರೂ. ಕೊಡುತ್ತಿದ್ದೇವೆ. ಒಂದು ರೂ.ಗೆ ಹೇಗೆ ಹಾಲು ಕೊಡಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.
ಇವರಿಂದ ನಮ ಹಾಲು ಉತ್ಪಾದನೆಗೆ ಹೊಡೆತ ಬೀಳಲಿದೆ. ಸುಮಾರು 50 ಸಾವಿರ ಲೀಟರ್ ನಷ್ಟವಾಗುತ್ತಿದ್ದರೂ ನಾವು ರೈತರಿಗೆ ಎಚ್ಚರಿಕೆ ಕೊಡುತ್ತಿಲ್ಲ. ಬದಲಿಗೆ ಈ ರೀತಿ ಹಾಲು ನೀಡುವುದರ ವಿರುದ್ಧ ನೇರ ಹೋರಾಟಕ್ಕೆ ಕರೆ ಕೊಡುತ್ತಿದ್ದೇನೆ ಎಂದರು.
ಕೇಂದ್ರದ ಮೇಲೆ ಒತ್ತಡ :
ರಾಜ್ಯದ ಹಿತ ಕಾಪಾಡುವುದು ಮುಖ್ಯ ಆ ಕೆಲಸವನ್ನ ಎಲ್ಲಾ ಸಂಸದರು ಮಾಡಬೇಕು. ಎರಡೂ ಪಕ್ಷದವರು ರಾಜ್ಯಕ್ಕೆ ನ್ಯಾಯ ಒದಗಿಸಬೇಕು. ಕರ್ನಾಟಕಕ್ಕೆ ಪದೇ ಪದೇ ಅನ್ಯಾಯ ಆಗುತ್ತಿದೆ. ಇದನ್ನು ಸರಿಪಡಿಸಲು ಯಾರೂ ಪ್ರಯತ್ನಿಸುತ್ತಿಲ್ಲ.
ನೀರಾವರಿಗೆ ಸಂಬಂಧಿಸಿದಂತೆ ಮೇಕೆದಾಟು, ಮಹಾದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆಗಳಿವೆ. ಹೀಗಾಗಿ ಎಂಪಿಗಳ ಸಹಕಾರ ಬೇಕು. ನಾನು ಸಂಸದನಾಗಿದ್ದಾಗ ಕೂಡ ಸಂಸದರ ಸಭೆಯನ್ನು ಸರ್ಕಾರ ನಡೆಸಿತ್ತು. ಈಗಲೂ ಸರ್ಕಾರ ಸಂಸದರ ಸಭೆ ಕರೆದಿರುವುದು. ಕೇಂದ್ರ ಸರ್ಕಾರದ ಮೇಲೆ ಸಂಸದರು ಒತ್ತಡ ತರಬೇಕು ಎಂದು ಅವರು ಹೇಳಿದರು.
ಕೇಂದ್ರ ವಿಫಲ :
ಜಗತ್ತಿನಲ್ಲಿ ಯುದ್ಧದ ಭೀತಿ ಇದೆ. ಯುದ್ಧದಲ್ಲಿ ನಾವಿಲ್ಲದಿರಬಹುದು, ಆದರೆ ನಮಮೇಲೂ ಅದರ ಪರಿಣಾಮ ಬೀರುತ್ತಿದೆ. ಕೇಂದ್ರ ಸರ್ಕಾರವು ನೆರೆ ದೇಶಗಳ ಜೊತೆ ಒಳ್ಳೆಯ ವಿಶ್ವಾಸ ಇಟ್ಟುಕೊಂಡಿರಬೇಕು. ದೇಶದಲ್ಲಿ ಉಂಟಾಗಿರುವ ಅಡುಗೆ ಅನಿಲದ ಸಮಸ್ಯೆ ನಿವಾರಿಸಬೇಕು. ಇದರಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
