ಬೆಂಗಳೂರು,ಜ.30- ರಾಜ್ಯಪಾಲರ ವಿರುದ್ಧ ಆಕ್ಷೇ ಪಾರ್ಹ ಪದ ಬಳಸಿದ್ದ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರನ್ನು ಸದನದಿಂದ ಅಮಾನತುಗೊಳಿಸುವಂತೆ ಕಳೆದೆರಡು ದಿನಗಳಿಂದ ಪ್ರತಿಪಕ್ಷ ನಡೆಸುತ್ತಿದ್ದ ಧರಣಿಯನ್ನು ಹಿಂಪಡೆದಿದ್ದರಿಂದ ಕಲಾಪ ಸುಗಮವಾಗಿ ಆರಂಭವಾಯಿತು.
ದಿನದ ಕಲಾಪ ಆರಂಭ ವಾಗುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಶ್ನೋತ್ತರ ಅವಧಿ ಆರಂಭಿಸಲು ಮುಂದಾದರು. ಆಗ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ನಾವು ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರನ್ನು ಅಮಾನತುಪಡಿಸಬೇಕು ಎಂದು ಸದನದಲ್ಲಿ ಧರಣಿ ನಡೆಸುತ್ತಿದ್ದೇವೆ. ನೀವು ನಮ ಬೇಡಿಕೆಯನ್ನು ಈಡೇರಿಸಿಲ್ಲ. ಇದರ ಬಗ್ಗೆ ರೂಲಿಂಗ್ ನೀಡಿ ಎಂದು ಒತ್ತಾಯಿಸಿದರು.
ಸದನದ ಸಮಯವನ್ನು ಹಾಳು ಮಾಡಬೇಕೆಂಬ ಉದ್ದೇಶ ನಮಗಿಲ್ಲ. ಕಲಾಪವು ಸುಗಮವಾಗಿ ನಡೆಯಲಿ ಎಂಬ ಆಶಯ ನಮಗೂ ಇದೆ. ಆದರೆ ರಾಜ್ಯಪಾಲರ ಕುರಿತು ಸದಸ್ಯರು ಬಳಸಿರುವ ಪದ ಯಾರಿಗೂ ಶೋಭೆ ತರುವುದಿಲ್ಲ. ಸಾರ್ವಜನಿಕ ಜೀವನದಲ್ಲಿರುವವರಿಗೆ ಇದು ಸರಿ ಕಾಣುತ್ತದೆಯೇ? ಎಂದು ಪ್ರಶ್ನೆ ಮಾಡಿದರು.
ನಾವು ಅವರನ್ನು ಸದನದಿಂದ ಅಮಾನತುಪಡಿಸಬೇಕೆಂದು ಧರಣಿ ನಡೆಸುತ್ತಿದ್ದೇವೆ. ನೀವು ಯಾವುದೇ ರೂಲಿಂಗ್ ಕೊಡದೇ ಕಲಾಪ ಆರಂಭಿಸಿದರೆ ಹೇಗೆ? ಅಂದರೆ ಯಾರು, ಏನು ಬೇಕಾದರೂ ಮಾತನಾಡಬಹುದೇ? ಸದನಕ್ಕೆ ಗರಿಮೆ, ಹಿರಿಮೆ ಇಲ್ಲವೇ? ಎಂದು ಸರ್ಕಾರದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಅವರು ತಮ ಹಿಂದಿನ ದಿನಗಳನ್ನು ನೆನಪಿಸಿಕೊಂಡು ಮಾತನಾಡಿರಬಹುದು. ಸಾರ್ವಜನಿಕ ಜೀವನದಲ್ಲಿರುವ ನಮಗೆ ನಮದೇ ಆದ ಘನತೆ, ಗೌರವವಿದೆ. ಈ ರೀತಿ ರಾಜ್ಯಪಾಲರಿಗೆ ಮಾತನಾಡುವುದು ಸರಿಯೇ? ರೂಲಿಂಗ್ ಕೊಡಿ ಎಂದು ಸಭಾಪತಿಗಳಿಗೆ ಒತ್ತಾಯಿಸಿದರು.
ಆಗ ಕೆಲ ಸದಸ್ಯರು ಮಾತನಾಡಲು ಮುಂದಾದರು. ಕಾಂಗ್ರೆಸ್‌ನ ಮುಖ್ಯ ಸಚೇತಕ ಸಲೀಂ, ನಾಗರಾಜ್ ಯಾದವ್, ಬಿಜೆಪಿಯ ರವಿಕುಮಾರ್ ಮತ್ತಿತರರು ವಿಷಯ ಪ್ರಸ್ತಾಪಿಸಲು ಮುಂದಾದಾಗ ಸಭಾಪತಿಯವರು ಯಾರೂ ಮಾತನಾಡಬೇಡಿ ಎಂದು ತಾಕೀತು ಮಾಡಿದರು.
ಈ ವೇಳೆ ಬಿಜೆಪಿ ಹಿರಿಯ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಹಿಂದೆ ಆರ್.ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದಾಗ ದೇವರಾಜ ಅರಸು ಪ್ರತಿಪಕ್ಷದ ನಾಯಕರಾಗಿದ್ದರು. ಆಗ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದ ಸಿ.ಎಂ.ಇಬ್ರಾಹಿಂ ಅವರು ಬಳಸಿದ ಪದಕ್ಕೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಪಕ್ಷಾತೀತವಾಗಿ ಖಂಡಿಸಿದರು. ಇದರಿಂದ ಇಬ್ರಾಹಿಂ ಸದನದಿಂದ ಆಚೆಯೇ ಹೋಗಿದ್ದರು ಎಂದು ನೆನಪಿಸಿಕೊಂಡರು. ಸದನದಲ್ಲಿ ಘಟನೆ ನಡೆದುಹೋಗಿದೆ. ಮಾತಿನ ಭರದಲ್ಲಿ ಶಬ್ದಗಳು ಬಂದಿವೆ. ಅದನ್ನು ಮುಂದುವರೆಸುವ ಅಗತ್ಯವಿಲ್ಲ ಎಂದು ಸಲಹೆ ಮಾಡಿದರು.
ಅಂತಿಮವಾಗಿ ಸಭಾಪತಿ ಹೊರಟ್ಟಿ ಮಾಧ್ಯಮಗಳಲ್ಲಿ ನಮ ಬಗ್ಗೆ ಏನು ಬರುತ್ತಿದೆ ಎಂಬುದನ್ನು ಎಲ್ಲರೂ ಗಮನಿಸಿ, ಸದನ ಸರಿಯಾಗಿ ನಡೆಯಬೇಕು. ಮನೆ ಎಂದ ಮೇಲೆ ಒಂದು ಮಾತು ಬರುತ್ತದೆ, ಹೋಗುತ್ತದೆ. ಅದನ್ನು ಹೆಚ್ಚು ವಿವಾದಕ್ಕೆ ಎಳೆಯಬಾರದು. ಇನ್ನು ಮುಂದೆ ಸದನದಲ್ಲಿ ಇಂತಹ ಘಟನೆಗಳು ನಡೆಯದಂತೆ ನಾನು ಎಚ್ಚರ ವಹಿಸುತ್ತೇನೆ. ಹಾಗೊಂದು ವೇಳೆ ಯಾರಾದರೂ ನಡೆದುಕೊಂಡರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.
