Homeರಾಜ್ಯಬೆಳ್ಳಂದೂರಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 800 ಕೆಜಿ ಜಿಲೆಟಿನ್‌ ಜಪ್ತಿ

ಬೆಳ್ಳಂದೂರಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 800 ಕೆಜಿ ಜಿಲೆಟಿನ್‌ ಜಪ್ತಿ

Over 800 KG Of Gelatin Seized In Bengaluru

ಬೆಂಗಳೂರು, ಆ.17- ನಗರದ ಪ್ರತಿಷ್ಠಿತ ಪ್ರದೇಶಗಳಲ್ಲಿ ಒಂದಾದ ಬೆಳ್ಳಂದೂರಿನಲ್ಲಿ ಯಾವುದೇ ಪರವಾನಗಿ ಇಲ್ಲದೆ ನಿರ್ಮಾಣ ಕಾಮಗಾರಿಗೆ ಬಂಡೆಗಳನ್ನು ಸ್ಫೋಟಿಸಲು ಸಂಗ್ರಹಿಸಿದ್ದ 800 ಕೆಜಿಗೂ ಅಧಿಕ ಜಿಲೆಟಿನ್‌ ಸ್ಟಿಕ್‌ಗಳನ್ನು ಬೆಳ್ಳಂದೂರು ಠಾಣೆ ಪೊಲೀಸರು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.

ಅರುಣ್‌ ಕುಮಾರ್‌ ಮತ್ತು ಜಗನ್‌ ಬಂಧಿತ ಆರೋಪಿಗಳು. ಬೆಳ್ಳಂದೂರಿನ ಭೋಗನಹಳ್ಳಿ ಸಮೀಪದ ಸುಮಾರು 25 ಎಕರೆ ವಿಶಾಲ ಪ್ರದೇಶದಲ್ಲಿ ಬೃಹತ್‌ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಈ ಸ್ಥಳದಲ್ಲಿ ಬಂಡೆಗಳನ್ನು ತೆರವುಗೊಳಿಸಲು ಅಥವಾ ಸ್ಫೋಟಿಸಲು ಯಾವುದೇ ಅಧಿಕೃತ ಪರವಾನಗಿ ಅಥವಾ ಅಗತ್ಯ ಸುರಕ್ಷತಾ ಮುನ್ನೆಚ್ಚರಿಕೆಗಳಿಲ್ಲದೆ ಭಾರೀ ಪ್ರಮಾಣದ ಜಿಲೆಟಿನ್‌ ಸ್ಫೋಟಕಗಳನ್ನು ಬಳಸಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು.

ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು, ಸ್ಥಳದಲ್ಲಿದ್ದ 800 ಕೆಜಿಗೂ ಅಧಿಕ ಜಿಲೆಟಿನ್‌ ಅನ್ನು ಜಪ್ತಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ನಿರ್ಮಾಣ ಕಾಮಗಾರಿಯನ್ನು ಆದರ್ಶ್‌ ಡೆವಲಪರ್ಸ್‌ ಸಂಸ್ಥೆ ಕೈಗೆತ್ತಿಕೊಂಡಿದ್ದು, ಇಲ್ಲಿ ಬಹುರಾಷ್ಟ್ರೀಯ ಕಂಪನಿಗಳ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.

ಸ್ಫೋಟಕ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ಯಾವುದೇ ಅಧಿಕೃತ ಪರವಾನಗಿ ಪಡೆಯದೆ ಅಕ್ರಮವಾಗಿ ಜಿಲೆಟಿನ್‌ ಬಳಸಲಾಗಿದೆ ಎಂಬ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರ್ಶ್‌ ಡೆವಲಪರ್ಸ್‌ ಸಂಸ್ಥೆ ಹಾಗೂ ಪ್ರಮುಖ ವ್ಯಕ್ತಿಗಳಾದ ಅರುಣ್‌ ಕುಮಾರ್‌, ಜಗನ್‌ ಮತ್ತು ಪ್ರಭಾಕರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಜನವಸತಿ ಪ್ರದೇಶದ ಸಮೀಪದಲ್ಲಿರುವ ಬೃಹತ್‌ ನಿರ್ಮಾಣ ಸ್ಥಳದಲ್ಲಿ ಇಷ್ಟು ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ಸುರಕ್ಷತಾ ಕ್ರಮಗಳಿಲ್ಲದೆ ಸಂಗ್ರಹಿಸಿಟ್ಟಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಸದ್ಯ ಪೊಲೀಸರು ಸ್ಫೋಟಕಗಳನ್ನು ಎಲ್ಲಿಂದ ತರಲಾಗಿತ್ತು, ಅವುಗಳನ್ನು ಸಂಗ್ರಹಿಸಲು ಅನುಮತಿ ನೀಡಲಾಗಿತ್ತೇ, ಇದರ ಹಿಂದೆ ಇನ್ನೂ ಯಾರ ಕೈವಾಡವಿದೆ ಎಂಬುದೂ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ತೀವ್ರಗೊಳಿಸಿದ್ದಾರೆ.

RELATED ARTICLES
spot_img

Latest News