ಬೆಂಗಳೂರು,ಜು.11- ಜನಪ್ರತಿನಿಧಿಗಳ ವಿರುದ್ಧದ ವಿಚಾರಣೆಗೆ ಅನುಮತಿ ಕೋರಿ ರಾಜ್ಯಪಾಲರ ಬಳಿ ಸಲ್ಲಿಸಲಾದ ಅರ್ಜಿಗಳ ಲೋಕಭವನದಲ್ಲಿ ಈಗಲೂ ಮುಕ್ತಿ ಸಿಕ್ಕಿಲ್ಲ. ರಾಜ್ಯಪಾಲರ ಕಚೇರಿಯು ಸಾಮಾನ್ಯವಾಗಿ ಪ್ರಕರಣದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಅಥವಾ ತನಿಖಾ ಪ್ರಕ್ರಿಯೆಗೆ ಅಡ್ಡಿಯಾಗಬಹುದು ಎಂಬ ಕಾರಣ ನೀಡಿ (ನಿಯಮ 8(1)( ಹೆಚ್ ) ಅಡಿಯಲ್ಲಿ) ಕೆಲವು ಸಂದರ್ಭಗಳಲ್ಲಿ ಮಾಹಿತಿ ನೀಡಲು ನಿರಾಕರಿಸುತ್ತದೆ.
ಹೀಗಾಗಿ, ಬಾಕಿ ಇರುವ ನಿಖರ ಸಂಖ್ಯೆಯನ್ನು ರಾಜ್ಯಪಾಲರ ಕಚೇರಿ ಅಧಿಕೃತವಾಗಿ ಬಹಿರಂಗಪಡಿಸುವುದಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ಧನ ರೆಡ್ಡಿ ಸೇರಿದಂತೆ ಹಲವು ರಾಜಕೀಯ ನಾಯಕರ ವಿರುದ್ಧದ ವಿವಿಧ ದೂರುಗಳು ಲೋಕಾಯುಕ್ತ ಅಥವಾ ಸಂಬಂಧಪಟ್ಟ ತನಿಖಾ ಸಂಸ್ಥೆಗಳ ಹಂತದಲ್ಲಿವೆ.
ಬಿ.ಎಸ್.ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧದ ಪ್ರಾಸಿಕ್ಯೂಷನ್(ವಿಚಾರಣೆ)ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿರುವ ಪ್ರಕರಣವು ಪ್ರಮುಖವಾಗಿ ಬಿಡಿಎ ಟೆಂಡರ್ ಅಕ್ರಮ ಆರೋಪಕ್ಕೆ ಸಂಬಂಧಿಸಿದೆ. 2019-21ರ ಅವಧಿಯಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಸತಿ ಯೋಜನೆಯೊಂದರ ಟೆಂಡರ್ ಅನ್ನು ೞರಾಮಲಿಂಗಂ ಕನ್ಸ್ಟ್ರಕ್ಷನ್ ಕಂಪನಿೞಗೆ ನೀಡಲು ಪ್ರತಿಯಾಗಿ 12 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂಬುದು ಪ್ರಮುಖ ಆರೋಪ.
ಈ ಹಿಂದೆ ಈ ಪ್ರಕರಣದಲ್ಲಿ ಯಡಿಯೂರಪ್ಪ ಅವರ ವಿರುದ್ಧ ತನಿಖೆ ನಡೆಸಲು ಪ್ರಾಸಿಕ್ಯೂಷನ್ ಅನುಮತಿ ಕೋರಿದಾಗ, ಅಂದಿನ ರಾಜ್ಯಪಾಲರು ಅದಕ್ಕೆ ಅನುಮತಿ ನೀಡಿರಲಿಲ್ಲ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು, ರಾಜ್ಯಪಾಲರು ಈ ಹಿಂದೆ ತೆಗೆದುಕೊಂಡಿದ್ದ ಆ ನಿರ್ಧಾರವನ್ನು (ಅನುಮತಿ ನಿರಾಕರಿಸಿದ್ದನ್ನು) ಮರುಪರಿಶೀಲಿಸುವಂತೆ ಕೋರಿ ಮತ್ತೆ ಶಿಫಾರಸು ಮಾಡಿತ್ತು. ಎಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧದ ಈ ಪ್ರಕರಣವು ಮುಖ್ಯವಾಗಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಭೂಮಿ ಮಂಜೂರಾತಿ ಪ್ರಕರಣವಾಗಿದೆ.
2007ರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ನೋಂದಣಿಯೇ ಆಗದ ಕಂಪನಿಯೊಂದಕ್ಕೆ ಸುಮಾರು 550 ಎಕರೆ ಅರಣ್ಯ ಭೂಮಿಯನ್ನು ಅಕ್ರಮವಾಗಿ ಗಣಿಗಾರಿಕೆಗಾಗಿ ಮಂಜೂರು ಮಾಡಿದ್ದಾರೆ ಎಂಬುದು ಪ್ರಮುಖ ಆರೋಪವಾಗಿದೆ.
ಈ ಪ್ರಕರಣದ ಕುರಿತು ಕರ್ನಾಟಕ ಲೋಕಾಯುಕ್ತದ ವಿಶೇಷ ತನಿಖಾ ತಂಡ ತನಿಖೆಯನ್ನು ನಡೆಸಿದೆ. ತನಿಖೆಯ ನಂತರ, ಕುಮಾರಸ್ವಾಮಿ ಅವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲು ರಾಜ್ಯಪಾಲರ ಅನುಮತಿ ಕೋರಿ ಲೋಕಾಯುಕ್ತ ಎಸ್ಐಟಿ ಪತ್ರ ಬರೆದಿತ್ತು.ಗಾಲಿ ಜನಾರ್ದನ ರೆಡ್ಡಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ವಿರುದ್ಧ ವಿಚಾರಣೆ ನಡೆಸಲು ರಾಜ್ಯಪಾಲರ ಅನುಮತಿ ಕೋರಿರುವ ಪ್ರಕರಣವು ಮುಖ್ಯವಾಗಿ ಅಕ್ರಮ ಆಸ್ತಿ ಗಳಿಕೆ ಮತ್ತು ಅಕ್ರಮ ಗಣಿಗಾರಿಕೆ ಆರೋಪಗಳಿಗೆ ಸಂಬಂಧಿಸಿದ್ದಾಗಿದೆ. ಲೋಕಾಯುಕ್ತ ಪೊಲೀಸರು ಜನಾರ್ದನ ರೆಡ್ಡಿ ಅವರ ವಿರುದ್ಧ ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಅವರನ್ನು ಕಾನೂನುಬದ್ಧವಾಗಿ ವಿಚಾರಣೆಗೊಳಪಡಿಸಲು ಅನುಮತಿಯನ್ನು ಕೋರಿ ಲೋಕಾಯುಕ್ತ ತನಿಖಾಧಿಕಾರಿಗಳು ರಾಜ್ಯಪಾಲರಿಗೆ ವರದಿ ಸಲ್ಲಿಸಿದ್ದಾರೆ.
ಸುಮಾರು 5500 ಪುಟಗಳಿಗೂ ಹೆಚ್ಚು ದೋಷಾರೋಪಣಾ ಪಟ್ಟಿಯನ್ನು ರಾಜಭವನಕ್ಕೆ ಸಲ್ಲಿಸಲಾಗಿದೆ.ಮುರುಗೇಶ್ ನಿರಾಣಿ ರಾಜ್ಯಪಾಲರಿಗೆ ಸಲ್ಲಿಕೆಯಾದ ಪ್ರಸ್ತ್ತಾವನೆ ಮತ್ತು ಮುರುಗೇಶ್ ನಿರಾಣಿ ಅವರ ವಿರುದ್ಧದ ಆರೋಪಗಳು ಪ್ರಮುಖವಾಗಿ ಅವರ ಅಧಿಕಾರಾವಧಿಯಲ್ಲಿ ನಡೆದಿದೆ ಎನ್ನಲಾದ ಕೆಲವೊಂದು ಅಕ್ರಮಗಳಿಗೆ ಸಂಬಂಧಿಸಿವೆ. ಮುರುಗೇಶ್ ನಿರಾಣಿ ಅವರು ಸಚಿವರಾಗಿದ್ದ ಅವಧಿಯಲ್ಲಿ (2011-15), ಕೈಗಾರಿಕಾ ಇಲಾಖೆಯ ವ್ಯಾಪ್ತಿಗೆ ಬರುವ ಮಾರ್ಕೆಟಿಂಗ್, ಜಾಹೀರಾತು ಮತ್ತು ಪ್ರಚಾರ ಸಂಸ್ಥೆಯಲ್ಲಿ ನಡೆದ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪವಿದೆ. ಈ ಸಂಬಂಧ ವಿಚಾರಣೆ ನಡೆಸಲು ಅನುಮತಿ ಕೋರಿ ಲೋಕಾಯುಕ್ತ ಪೆಲೀಸರು ಅಥವಾ ಸಂಬಂಧಿತ ತನಿಖಾ ಸಂಸ್ಥೆಗಳು ರಾಜ್ಯಪಾಲರಿಗೆ ಪ್ರಸ್ತಾವನೆಗಳನ್ನು ಸಲ್ಲಿಸಿವೆ.
ಶಶಿಕಲಾ ಜೊಲ್ಲೆ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರ ವಿರುದ್ಧ ವಿಚಾರಣೆಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಸಲ್ಲಿಕೆಯಾದ ಪ್ರಸ್ತಾವನೆಯು ಮುಖ್ಯವಾಗಿ ೞಮೊಟ್ಟೆ ಖರೀದಿ ಹಗರಣೞಕ್ಕೆ ಸಂಬಂಧಿಸಿದ್ದಾಗಿದೆ. 2021ರಲ್ಲಿ ಶಶಿಕಲಾ ಜೊಲ್ಲೆ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದಾಗ, ಅಂಗನವಾಡಿಗಳಿಗೆ ಮೊಟ್ಟೆ ಸರಬರಾಜು ಮಾಡುವ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಮತ್ತು ಕಿಕ್ಬ್ಯಾಕ್ (ಲಂಚ) ಪಡೆಯಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ವಿಚಾರದಲ್ಲಿ ರಾಜ್ಯಪಾಲರು ಸುದೀರ್ಘ ಕಾಲದಿಂದ ನಿರ್ಧಾರವನ್ನು ಬಾಕಿ ಉಳಿಸಿಕೊಂಡಿದ್ದರು.
ಇತ್ತೀಚಿನ ವರದಿಗಳ ಪ್ರಕಾರ, ರಾಜ್ಯಪಾಲರು ಶಶಿಕಲಾ ಜೊಲ್ಲೆ ಅವರ ವಿರುದ್ಧದ ಪ್ರಾಥಮಿಕ ವಿಚಾರಣೆಗೆ ಅನುಮತಿ ನೀಡುವ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ವಿಚಾರಣೆಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಮಾಡಲಾಗಿತ್ತು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಂಚಿಕೆ ಮಾಡಿರುವ ನಿವೇಶನಗಳಲ್ಲಿ ಅಕ್ರಮ ನಡೆದಿದೆ ಎಂಬುದು ಪ್ರಮುಖ ಆರೋಪವಾಗಿತ್ತು. ಭ್ರಷ್ಟಾಚಾರ ತಡೆ ಕಾಯ್ದೆಯಡಿ ವಿಚಾರಣೆ ನಡೆಸಲು ಅನುಮತಿ ನೀಡಬೇಕೆಂದು ಕೋರಿದ್ದರು.
ರಾಜ್ಯಪಾಲರ ಕ್ರಮ :
ದೂರುಗಳನ್ನು ಪರಿಗಣಿಸಿದ ರಾಜ್ಯಪಾಲರು, ಕಾನೂನು ಪ್ರಕ್ರಿಯೆಗಳ ಅನ್ವಯ ಈ ಬಗ್ಗೆ ವಿಚಾರಣೆ ನಡೆಸಲು ಅನುಮತಿ ನೀಡಿ ಆದೇಶ ಹೊರಡಿಸಿದ್ದರು.
ಅನುಮತಿ ಏಕೆ ಕಡ್ಡಾಯ? :
ಇದಕ್ಕೆ ಸಂಬಂಧಿಸಿದಂತೆ ಮುಖ್ಯವಾಗಿ ಭ್ರಷ್ಟಾಚಾರ ತಡೆ ಕಾಯ್ದೆ ( 1988) ಮತ್ತು ದಂಡ ಪ್ರಕ್ರಿಯೆ ಸಂಹಿತೆ (ಅಡಿಅ) ಯಲ್ಲಿ ನಿಬಂಧನೆಗಳಿವೆ.
ಸೆಕ್ಷನ್ 19 (ಭ್ರಷ್ಟಾಚಾರ ತಡೆ ಕಾಯ್ದೆ) :
ಯಾವುದೇ ಸಾರ್ವಜನಿಕ ಸೇವಕರ ವಿರುದ್ಧ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಆರೋಪಗಳಿದ್ದರೆ, ನ್ಯಾಯಾಲಯವು ವಿಚಾರಣೆಯನ್ನು ಕೈಗೆತ್ತಿಕೊಳ್ಳುವ ಮುನ್ನ ಸರ್ಕಾರದ ಅಥವಾ ಆ ಸೇವಕರನ್ನು ನೇಮಿಸಿದ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಕಡ್ಡಾಯವಾಗಿದೆ.
ಜನಪ್ರತಿನಿಧಿಗಳ ವಿಷಯದಲ್ಲಿ (ಉದಾಹರಣೆಗೆ ಮಂತ್ರಿಗಳು ಅಥವಾ ಶಾಸಕರು), ಸಂವಿಧಾನಾತಕ ಹುದ್ದೆಯಲ್ಲಿರುವವರು ಅಥವಾ ರಾಜ್ಯ ಸರ್ಕಾರದ ಮಟ್ಟದಲ್ಲಿ, ರಾಜ್ಯಪಾಲರು ಸಕ್ಷಮ ಪ್ರಾಧಿಕಾರವಾಗಿ ಕಾರ್ಯ ನಿರ್ವಹಿಸುತ್ತಾರೆ. ರಾಜ್ಯಪಾಲರು ಸಂಪುಟದ ಸಲಹೆಯಂತೆ ಅಥವಾ ವಿವೇಚನಾಧಿಕಾರದನ್ವಯ (ಪ್ರಕರಣದ ತೀವ್ರತೆಯನ್ನು ನೋಡಿ) ಈ ಅನುಮತಿಯನ್ನು ನೀಡುತ್ತಾರೆ.
