ಹೈದರಾಬಾದ್, ಜು.11 (ಪಿಟಿಐ) ಪೋಕ್ಸೊ ಪ್ರಕರಣದ ಆರೋಪಿಯಾಗಿರುವ 35 ವರ್ಷದ ವ್ಯಕ್ತಿಯೊಬ್ಬ ರಂಗಾರೆಡ್ಡಿ ಜಿಲ್ಲೆಯಲ್ಲಿ ತನ್ನ ಇಬ್ಬರು ಮಕ್ಕಳು ಮತ್ತು ತನ್ನ ವಿರುದ್ಧ ದೂರು ದಾಖಲಿಸಿದ ಕುಟುಂಬದ ಮೂವರು ಸದಸ್ಯರು ಸೇರಿದಂತೆ ಆರು ಜನರನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಿ. ರಾಜ್‌ಕುಮಾರ್ ಎಂಬಾತ ಆರು ಜನರನ್ನು ಬಲಿ ತೆಗೆದುಕೊಂಡ ಪಾಪಿಯಾಗಿದ್ದಾನೆ. ಈತ ಆರಂಭದಲ್ಲಿ ಅಪ್ರಾಪ್ತ ಬಾಲಕಿ, ಆಕೆಯ ತಾಯಿ ಮತ್ತು ಅಜ್ಜಿಯನ್ನು ಗುರಿಯಾಗಿಸಿಕೊಂಡು, ನಂತರ ರಾತ್ರಿ ಶಾಬಾದ್ ಮಂಡಲದಲ್ಲಿ ವಿವಿಧ ಪ್ರದೇಶಗಳಲ್ಲಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಂದಿದ್ದಾನೆ ಎಂದು ಅವರು ಹೇಳಿದರು.
ಹುಡುಗಿಯ ಕುಟುಂಬ ಸಲ್ಲಿಸಿದ ದೂರಿನ ಆಧಾರದ ಮೇಲೆ ಈ ವರ್ಷದ ಮೇ ತಿಂಗಳಲ್ಲಿ ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸಿದ್ದಕ್ಕಾಗಿ ಆ ವ್ಯಕ್ತಿಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದಲ್ಲಿ ಅವರು ಇತ್ತೀಚೆಗೆ ನಿರೀಕ್ಷಣಾ ಜಾಮೀನು ಪಡೆದಿದ್ದರು.ಆರೋಪಿ ಕುಡಗೋಲು ಮತ್ತು ಚಾಕು ಬಳಸಿ ಬಲಿಪಶುಗಳನ್ನು ಇರಿದು ಕತ್ತು ಸೀಳಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಕೊಲೆಗಳು ನಡೆದ ತಕ್ಷಣ, ಆರೋಪಿ ತನ್ನ ತಂದೆಗೆ ಕರೆ ಮಾಡಿ ಅಪರಾಧಗಳನ್ನು ಒಪ್ಪಿಕೊಂಡಿದ್ದಾನೆ.ನಂತರ ಆರೋಪಿಯ ಪೋಷಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ರಾಜ್‌ಕುಮಾರ್ ಸ್ಥಳದಿಂದ ಪರಾರಿಯಾಗಿದ್ದು, ಇನ್ನೂ ತಲೆಮರೆಸಿಕೊಂಡಿದ್ದಾನೆ. ಕೊಲೆಗಳಿಗೆ ನಿಖರವಾದ ಕಾರಣ ತನಿಖೆ ಹಂತದಲ್ಲಿದೆ ಎಂದು ಅಧಿಕಾರಿ ಹೇಳಿದರು, ಅವರನ್ನು ಬಂಧಿಸಿ ವಿಚಾರಣೆ ನಡೆಸಿದ ನಂತರ ಪೂರ್ಣ ಚಿತ್ರಣ ತಿಳಿಯುತ್ತದೆ ಎಂದಿದ್ದಾರೆ.
ಅಪ್ರಾಪ್ತ ಬಾಲಕಿಯ ವಿರುದ್ಧ ಆಳವಾದ ದ್ವೇಷವಿತ್ತು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ, ಆದರೆ ಅವರ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಂದ ಹಿಂದಿನ ಉದ್ದೇಶ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಕೊಲೆಗಳಿಗೆ ಸಂಬಂಧಿಸಿದಂತೆ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ.
