ಬೆಂಗಳೂರು, ನ.29- ವಿಧಾನ ಮಂಡಲದ ಅಧಿವೇಶನದ ಒಳಗೆ ಸಚಿವ ಸಂಪುಟ ಪುನರ್ ರಚನೆಯಾಗಲಿದೆ ಮತ್ತು ನಿಗಮ ಮಂಡಲಿಗಳಿಗೆ ನೇಮಕಾತಿ ಪೂರ್ಣಗೊಳ್ಳಲಿದೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಮತ್ತೆ ನಿರಾಶೆಯಾಗಿದೆ. ಕಳೆದ 6 ತಿಂಗಳಿನಿಂದಲೂ ಮಹಿಳಾ ಸಚಿವರಿಲ್ಲದ ಸಂಪುಟ ಸರ್ಕಾರ ನಡೆಸುತ್ತಿದೆ. 2 ಸ್ಥಾನಗಳು ಖಾಲಿ ಉಳಿದಿದ್ದರು ಅವುಗಳಿಗೆ ಸಚಿವರನ್ನು ನಿಯೋಜಿಸುವ ಪ್ರಕ್ರಿಯೆ ನನೆಗುದಿಯಲ್ಲಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿನ್ನೆ ದೆಹಲಿಗೆ ಭೇಟಿ ನೀಡಿದ್ದರು. ಈ ವೇಳೆ ಸಂಪುಟ ವಿಸ್ತರಣೆಯ ಚರ್ಚೆಗಳಾಗಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ನಕಾರಾತಕ ಸಂದೇಶ ರವಾನೆಯಾಗಿದೆ. ಡಿ.ಕೆ.ಶಿವಕುಮಾರ್ ಅವರು ಸದ್ಯಕ್ಕೆ ಸಂಪುಟ ವಿಸ್ತರಣೆಯ ಬಗ್ಗೆ ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸುವುದಿಲ್ಲ ಎಂದು ಮಾಹಿತಿ ನೀಡಲಾಗಿದೆ.
ಸಂಸತ್ ಅಧಿವೇಶನದಲ್ಲಿ ಮಂಡನೆಯಾಗುವ ಕ್ಷೇತ್ರ ಪುನರ್ ವಿಂಗಡಣೆಯ ಮಸೂದೆಯನ್ನು ಸೋಲಿಸುವುದು ಕಾಂಗ್ರೆಸ್ನ ಸದ್ಯದ ಆದ್ಯತೆಯಾಗಿದ್ದು, ಅದಕ್ಕಾಗಿ ಬಲಾಬಲ ಕ್ರೋಢೀಕರಿಸಲು ಇಂಡಿ ಕೂಟದ ನಾಯಕರು ಕಾಂಗ್ರೆಸ್ ವರಿಷ್ಠರೊಂದಿಗೆ ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಿಗೆ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ಕಾರ್ಯದೊತ್ತಡದಲ್ಲಿ ಕರ್ನಾಟಕದ ರಾಜಕಾರಣದ ಬಗ್ಗೆ ಚರ್ಚೆ ನಡೆಸಲು ಯಾರಿಗೂ ಬಿಡುವಿಲ್ಲ ಎಂದು ಹೇಳಲಾಗಿದೆ.
ಕರ್ನಾಟಕ, ಕೇರಳ ಮತ್ತು ತೆಲಂಗಾಣದ ರಾಜ್ಯಗಳ ಮುಖ್ಯಮಂತ್ರಿಗಳನ್ನು ದೆಹಲಿಗೆ ಕರೆಸಿಕೊಂಡಿರುವ ಕಾಂಗ್ರೆಸ್ ವರಿಷ್ಠರು ದಕ್ಷಿಣ ಭಾರತದ ಬಲಾಬಲವನ್ನು ಕ್ರೋಡೀಕರಿಸಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ಇತ್ತ ಡಿಸೆಂಬರ್ 2ರಿಂದಲೇ ಚಳಿಗಾಲದ ವಿಧಾನಮಂಡಲ ಅಧಿವೇಶ ಆರಂಭಗೊಳ್ಳುತ್ತಿದೆ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಸಂಪುಟ ವಿಸ್ತರಣೆಗೆ ಸಮಯವಿಲ್ಲ ಎಂಬ ಸಂದೇಶ ರವಾನೆಯಾಗಿದೆ. ಮತ್ತೊಂದೆಡೆ ದೆಹಲಿಯ ನಾಯಕರು ಇತ್ತೀಚಿನ ದಿನಗಳಲ್ಲಿ ರಾಜಕೀಯ ನೇಮಕಾತಿಯ ಬಗ್ಗೆ ತೀವ್ರ ಅಸಡ್ಡೆ ತೋರಿಸುತ್ತಿದ್ದು ಅನಗತ್ಯ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಅಸಮಾಧಾನ ಕೆಲವರಿಂದ ವ್ಯಕ್ತವಾಗಿದೆ.
ರಾಜ್ಯದಿಂದ ಮುಖ್ಯಮಂತ್ರಿಯವರ ಕಚೇರಿ, ಕೆಪಿಸಿಸಿ ನಡುವೆ ಸಮನ್ವಯ ಸಾಧಿಸಿ, ಪಟ್ಟಿ ರವಾನಿಸಿದರೆ, ಅದು ಮೊದಲಿಗೆ ದೆಹಲಿಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಗೆ ತಲುಪಲಿದೆ. ಅನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೇವಾಲಾ, ಕೆ.ಸಿ.ವೇಣುಗೋಪಾಲ್ ಅವರ ಕಚೇರಿಯನ್ನು ಹಾದು ಲೋಕಾಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಯವರನ್ನು ತಲುಪಬೇಕು. ಅಲ್ಲಿಗೆ ಸಾಕಷ್ಟು ಸಮಯ ವ್ಯರ್ಥವಾಗುತ್ತದೆ ಎಂದು ಹೇಳಲಾಗಿದೆ.
ಈ ಮೊದಲು 50 ನಿಗಮ ಮಂಡಲಿಗಳಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಿಸಲು ರಾಜ್ಯದಿಂದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಈವರೆಗೂ ಕೇವಲ 18 ನೇಮಕಾತಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ನಿಗಮ ಮಂಡಲಿಗಳ ಸದಸ್ಯರು ಮತ್ತು ನಿರ್ದೇಶಕರ ಪಟ್ಟಿಯ ಪೈಕಿ 250 ಜನರಿಗೆ ಮಾತ್ರ ಅಂಗೀಕಾರ ದೊರೆತಿದೆ. ಇನ್ನೂ 350ಕ್ಕೂ ಹೆಚ್ಚು ನೇಮಕಾತಿಗಳು ನೆನೆಗುದಿಗೆ ಬಿದ್ದಿವೆ. ಹೈಕಮಾಂಡ್ನ ಈ ವಿಳಂಬ ಧೋರಣೆ ರಾಜ್ಯ ನಾಯಕರನ್ನು ಅಸಹನೆಗೀಡು ಮಾಡಿದೆ.
