ಮೀರಾ-ಭಯಂದರ್(ಮಹಾರಾಷ್ಟ್ರ),ನ.29-ಪ್ರಧಾನಿ ನರೇಂದ್ರಮೋದಿ ಅವರ ಶಾಲಾ ಸಹಪಾಠಿ ಅಸ್ಗರ್ ಅಲಿ ವೋರಾ ಅವರ 19 ವರ್ಷಗಳ ಭೂ ವಿವಾದಕ್ಕೆ ಕೊನೆಗೂ ತಿರುವು ಸಿಕ್ಕಿದೆ. ಮಹಾರಾಷ್ಟ್ರದ ಮೀರಾ-ಭಯಂದರ್ನ 2,810 ಚದರ ಮೀಟರ್ ವಿವಾದಿತ ಜಮೀನಿನ 7/12 (ಸತ್ಬರಾ) ಭೂ ದಾಖಲೆಯಲ್ಲಿ ಅಸ್ಗರ್ ಅಲಿ ವೋರಾ ಅವರ ಹೆಸರನ್ನು ಕಂದಾಯ ಇಲಾಖೆ ಮರುಸ್ಥಾಪಿಸಿದೆ.
81 ವರ್ಷದ ಅಸ್ಗರ್ ಅಲಿ ಅವರು 1989ರಲ್ಲಿ ದಾವೂದ್ ವೋರಾ ಅವರೊಂದಿಗೆ ನೋಂದಾಯಿತ ಒಪ್ಪಂದದ ಮೂಲಕ ಈ ಜಮೀನನ್ನು ಖರೀದಿಸಿದ್ದರು. 2007ರಲ್ಲಿ ಇಬ್ಬರ ಹೆಸರುಗಳು ಭೂ ದಾಖಲೆಗಳಲ್ಲಿ ದಾಖಲಾಗಿದ್ದರೂ, ಬಳಿಕ ಮೂಲ ಭೂಮಾಲೀಕ ಪಾಲ್ ಆಂಥೋನಿ ಫೆರ್ನಾಂಡಿಸ್ ಅವರ ಉತ್ತರಾಧಿಕಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಆ ದಾಖಲಾತಿಯನ್ನು ರದ್ದುಗೊಳಿಸಲಾಗಿತ್ತು.
ನಂತರ ಹಲವು ವ್ಯಕ್ತಿಗಳು ಮತ್ತು ಸಂಸ್ಥೆಗಳು ಭೂಮಿಯ ಮೇಲೆ ಹಕ್ಕು ಸಾಧಿಸಿದರು. 2011ರಲ್ಲಿ ಸ್ವಯಂ ಬಿಲ್ಡರ್ಸ್ ಪವರ್ ಆಫ್ ಅಟಾರ್ನಿ ಮೂಲಕ ಜಮೀನಿನ ಶೇ.50ರಷ್ಟು ಪಾಲನ್ನು ಪಡೆದಿರುವುದಾಗಿ ಹೇಳಿಕೊಂಡಿತು. ಈ ದಾಖಲೆಗಳಲ್ಲಿ ಅಕ್ರಮ ನಡೆದಿದೆ ಎಂದು ಅಸ್ಗರ್ ಅಲಿ ಆರೋಪಿಸಿದ್ದು, 2015ರಲ್ಲಿ ಕ್ರಿಮಿನಲ್ ಪ್ರಕರಣವೂ ದಾಖಲಾಗಿತ್ತು.
2019ರಲ್ಲಿ ಬಿಜೆಪಿ ಶಾಸಕ ನರೇಂದ್ರ ಮೆಹ್ತಾ ಅವರೊಂದಿಗೆ ಸಂಪರ್ಕ ಹೊಂದಿರುವ ಸೆವೆನ್ ಇಲೆವೆನ್ ಕನ್ಸ್ಟ್ರಕ್ಷನ್್ಸ ಸಂಸ್ಥೆಯು ವಿವಾದಿತ ಜಮೀನಿನ ಒಂದು ಭಾಗವನ್ನು ಖರೀದಿಸಿತು. ಅಸ್ಗರ್ ಅಲಿ ಅವರ ದೂರುಗಳ ಬಳಿಕ ಮೀರಾ-ಭಯಂದರ್ ಮಹಾನಗರ ಪಾಲಿಕೆ ನೀಡಿದ್ದ ನಿರ್ಮಾಣ ಅನುಮತಿಗಳನ್ನು ರದ್ದುಗೊಳಿಸಿತು.
ಮೋದಿ ಭೇಟಿಯ ಬಳಿಕ ಬೆಳವಣಿಗೆ
ವರ್ಷಗಳ ಕಾಲ ಆಡಳಿತಾತಕ, ನ್ಯಾಯಾಂಗ ಮತ್ತು ರಾಜಕೀಯ ಮಟ್ಟದಲ್ಲಿ ಹೋರಾಟ ನಡೆಸಿದ ಅಸ್ಗರ್ ಅಲಿ ಅವರು ಸೆಪ್ಟೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಇಬ್ಬರೂ ಗುಜರಾತ್ನ ವಡ್ನಗರದ ಬಿಎನ್ ಶಾಲೆಯಲ್ಲಿ ಸಹಪಾಠಿಗಳಾಗಿದ್ದರು. ಮೋದಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಅಸ್ಗರ್ ಅಲಿ ತಮ ಭೂ ವಿವಾದವನ್ನು ವಿವರಿಸಿ, ಬಿಲ್ಡರ್ಗಳು ತಮ ಜಮೀನಿಗೆ ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸಿದರು. ಪ್ರಕರಣದ ಸಿಬಿಐ ತನಿಖೆಗೂ ಅವರು ಮನವಿ ಮಾಡಿದರು.
ಈ ಭೇಟಿಯ ಕೆಲವೇ ದಿನಗಳ ಬಳಿಕ ಶಾಸಕ ನರೇಂದ್ರ ಮೆಹ್ತಾ ಅವರು ವಿವಾದಿತ ಜಮೀನಿನ ಸ್ವಾಧೀನವನ್ನು ತ್ಯಜಿಸುವುದಾಗಿ ಹಾಗೂ ಅಸ್ಗರ್ ಅಲಿ ವಿರುದ್ಧ ನೀಡಲಾಗಿದ್ದ ಪೊಲೀಸ್ ದೂರನ್ನು ಹಿಂಪಡೆಯುವುದಾಗಿ ಘೋಷಿಸಿದರು. ಪಾಲಿಕೆಯೂ ನಿರ್ಮಾಣ ಅನುಮತಿ ಮತ್ತು ಸಂಬಂಧಿತ ಟಿಡಿಆರ್ ಅನ್ನು ರದ್ದುಗೊಳಿಸಿತು.
ಕಂದಾಯ ಇಲಾಖೆಯ ಮಹತ್ವದ ಆದೇಶ
ವಿವಾದಕ್ಕೆ ಸಂಬಂಧಿಸಿದಂತೆ ಮರ್ವಿನ್ ಫೆರ್ನಾಂಡಿಸ್ ಅವರು ಪಾಲ್ ಆಂಥೋನಿ ಫೆರ್ನಾಂಡಿಸ್ ತಮ ಜೈವಿಕ ಚಿಕ್ಕಪ್ಪನಲ್ಲ ಎಂದು ಪೊಲೀಸರಿಗೆ ಹೇಳಿಕೆ ನೀಡಿದರು. ಈ ಬೆಳವಣಿಗೆಯ ಬಳಿಕ ಪ್ರಕರಣ ಮುಖ್ಯಮಂತ್ರಿ ಕಚೇರಿಯ ಗಮನಕ್ಕೂ ಬಂತು. ನಂತರ ಕಂದಾಯ ಇಲಾಖೆ ಅಸ್ಗರ್ ಅಲಿ ಅವರ ಹೆಸರನ್ನು ಮರುಸ್ಥಾಪಿಸುವ ಪ್ರಕ್ರಿಯೆ ಆರಂಭಿಸಿತು. ಅಕ್ಟೋಬರ್ 13ರಿಂದ ನವೆಂಬರ್ 19ರವರೆಗೆ ನಡೆದ 10 ವಿಚಾರಣೆಗಳಲ್ಲಿ ಸ್ವಯಂ ಬಿಲ್ಡರ್ಸ್ ಮತ್ತು ಮುಖೇಶ್ ಪರೇಖ್ ಸೇರಿದಂತೆ ವಿವಿಧ ಆಕ್ಷೇಪಣೆಗಳನ್ನು ಪರಿಶೀಲಿಸಲಾಯಿತು.
ನವೆಂಬರ್ 25ರಂದು ಹೆಚ್ಚುವರಿ ತಹಶೀಲ್ದಾರ್ 27 ಪುಟಗಳ ಆದೇಶ ಹೊರಡಿಸಿ, 1989ರ ಅಸ್ಗರ್ ಅಲಿ ಪರ ನೋಂದಾಯಿತ ಮಾರಾಟ ಪತ್ರವನ್ನು ಯಾವುದೇ ನ್ಯಾಯಾಲಯ ರದ್ದುಗೊಳಿಸಿಲ್ಲವಾದ್ದರಿಂದ ಅದು ಕಾನೂನುಬದ್ಧವಾಗಿ ಮಾನ್ಯವಾಗಿದೆ ಎಂದು ತೀರ್ಮಾನಿಸಿದರು. ಅದರ ಬೆನ್ನಲ್ಲೇ ನವೆಂಬರ್ 27ರಂದು ಕಂದಾಯ ಇಲಾಖೆ ರೂಪಾಂತರ ನಮೂದನ್ನು ಅನುಮೋದಿಸಿ, ಅಸ್ಗರ್ ಅಲಿ ವೋರಾ ಅವರ ಹೆಸರನ್ನು 7/12 ಭೂ ದಾಖಲೆಯಲ್ಲಿ ಮರುಸ್ಥಾಪಿಸಿತು.
ಹೀಗಾಗಿ ಸುಮಾರು 19 ವರ್ಷಗಳಿಂದ ಸಾಗುತ್ತಿದ್ದ ಭೂ ವಿವಾದದಲ್ಲಿ ಅಸ್ಗರ್ ಅಲಿ ಅವರಿಗೆ ಮಹತ್ವದ ಆಡಳಿತಾತಕ ಜಯ ದೊರೆತಿದೆ. ಆದರೆ, ವಿವಾದಿತ ಜಮೀನಿಗೆ ಸಂಬಂಧಿಸಿದ ಇತರ ಕೆಲವು ಕಾನೂನು ಮತ್ತು ಹಕ್ಕು ವಿವಾದಗಳು ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ ಎಂಬುದನ್ನು ವರದಿ ಸೂಚಿಸುತ್ತದೆ.
