Homeಇದೀಗ ಬಂದ ಸುದ್ದಿಲೋಕಸಭೆಯಲ್ಲಿ ಡಿಎಂಕೆಯ 22 ಸಂಸದರಿಗೆ ಹೊಸ ಆಸನ ವ್ಯವಸ್ಥೆ

ಲೋಕಸಭೆಯಲ್ಲಿ ಡಿಎಂಕೆಯ 22 ಸಂಸದರಿಗೆ ಹೊಸ ಆಸನ ವ್ಯವಸ್ಥೆ

ನವದೆಹಲಿ,ನ.29-ಕ್ಷೇತ್ರ ಮರುವಿಂಗಡಣೆ ಹಾಗೂ ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಕೇಂದ್ರ ಸರ್ಕಾರದ ಪರಿಷ್ಕೃತ ಮಸೂದೆಗಳಿಗೆ ಡಿಎಂಕೆ ಬೆಂಬಲ ಘೋಷಿಸಿದ ಕಾರಣ ಲೋಕಸಭೆಯಲ್ಲಿ ಪಕ್ಷದ 22 ಸಂಸದರ ಆಸನ ವ್ಯವಸ್ಥೆಯನ್ನೇ ಬದಲಾಯಿಸಲಾಗಿದೆ. ಒಟ್ಟು 97 ಸಂಸದರ ಆಸನಗಳನ್ನು ಮರುಹೊಂದಿಸಲಾಗಿದ್ದು, ಡಿಎಂಕೆ ಸಂಸದರನ್ನು ಕಾಂಗ್ರೆಸ್‌‍ ಸದಸ್ಯರಿಂದ ಪ್ರತ್ಯೇಕವಾಗಿ, ಖಜಾನೆ ಪೀಠಗಳ ಸಮೀಪದ ಭಾಗಕ್ಕೆ ಸ್ಥಳಾಂತರಿಸಲಾಗಿದೆ. ಈ ಬೆಳವಣಿಗೆ ಕೇವಲ ಸಂಸತ್ತಿನ ಆಸನ ಬದಲಾವಣೆಯಾಗಿ ಕಾಣಿಸಿಕೊಳ್ಳುತ್ತಿದ್ದರೂ, ಇದರ ಹಿಂದೆ ಡಿಎಂಕೆ-ಕಾಂಗ್ರೆಸ್‌‍ ಸಂಬಂಧದ ಬಿರುಕು ಮತ್ತು ಕ್ಷೇತ್ರ ಮರುವಿಂಗಡಣೆ ಕುರಿತ ರಾಜಕೀಯ ಲೆಕ್ಕಾಚಾರ ಎರಡೂ ಪ್ರಮುಖ ಕಾರಣಗಳಾಗಿವೆ.

ಕಾಂಗ್ರೆಸ್‌‍ನಿಂದ ಡಿಎಂಕೆ ಪ್ರತ್ಯೇಕ
ತಮಿಳುನಾಡಿನಲ್ಲಿ ಕಾಂಗ್ರೆಸ್‌‍, ಟಿವಿಕೆ ನೇತೃತ್ವದ ಸರ್ಕಾರದೊಂದಿಗೆ ಕೈಜೋಡಿಸಿದ ಬಳಿಕ ಡಿಎಂಕೆ ಮತ್ತು ಕಾಂಗ್ರೆಸ್‌‍ ನಡುವಿನ ರಾಜಕೀಯ ಸಂಬಂಧ ಹದಗೆಟ್ಟಿತ್ತು. ಇದರ ಬೆನ್ನಲ್ಲೇ ಡಿಎಂಕೆ ಸಂಸದೀಯ ಪಕ್ಷದ ನಾಯಕಿ ಕನಿಮೊಳಿ, ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಪತ್ರ ಬರೆದು, ಕಾಂಗ್ರೆಸ್‌‍ ಸಂಸದರ ಪಕ್ಕದಲ್ಲಿ ಡಿಎಂಕೆ ಸದಸ್ಯರು ಕುಳಿತುಕೊಳ್ಳುವ ಹಳೆಯ ವ್ಯವಸ್ಥೆಯನ್ನು ಬದಲಾಯಿಸುವಂತೆ ಮನವಿ ಮಾಡಿದ್ದರು.

ಈ ಬೇಡಿಕೆಗೆ ಇದೀಗ ಸ್ಪೀಕರ್‌ ಅನುಮೋದನೆ ದೊರೆತಿದೆ. ಪರಿಣಾಮವಾಗಿ ಡಿಎಂಕೆಯ 22 ಲೋಕಸಭಾ ಸದಸ್ಯರು ಕಾಂಗ್ರೆಸ್‌‍ನಿಂದ ದೂರದ ಆಸನಗಳಲ್ಲಿ ಕುಳಿತುಕೊಳ್ಳಲಿದ್ದಾರೆ.ಆದರೆ ಈ ಆಸನ ಬದಲಾವಣೆಯ ಸಮಯವೇ ರಾಜಕೀಯವಾಗಿ ಹೆಚ್ಚು ಗಮನ ಸೆಳೆದಿದೆ. ನವೆಂಬರ್‌ 28ರಂದು ಡಿಎಂಕೆ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಬೆಂಬಲ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಲೋಕಸಭಾ ಸಚಿವಾಲಯ 97 ಸಂಸದರ ಆಸನ ವ್ಯವಸ್ಥೆಯನ್ನು ಮರುಹೊಂದಿಸಿದೆ.

ಕಾಂಗ್ರೆಸ್‌‍ಗೆ ರಾಜಕೀಯ ಹೊಡೆತವೇ?
ಡಿಎಂಕೆಯ ನಿರ್ಧಾರವು ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಕೇಂದ್ರ ಸರ್ಕಾರದ ಸಂಖ್ಯಾಬಲ ಹೆಚ್ಚಿಸುವ ಸಾಧ್ಯತೆಯಿಂದಾಗಿ ಕಾಂಗ್ರೆಸ್‌‍ಗೆ ರಾಜಕೀಯವಾಗಿ ಮಹತ್ವದ ಬೆಳವಣಿಗೆಯಾಗಿದೆ. ಡಿಎಂಕೆಗೆ ಲೋಕಸಭೆಯಲ್ಲಿ 22 ಸದಸ್ಯರಿದ್ದಾರೆ. ಈ ಬೆಂಬಲವು ಸರ್ಕಾರಕ್ಕೆ ಮಸೂದೆ ಅಂಗೀಕಾರದ ಸಂದರ್ಭದಲ್ಲಿ ಗಣನೀಯ ನೆರವು ನೀಡಬಹುದು. ಕಾಂಗ್ರೆಸ್‌‍ ಮಾತ್ರ ಡಿಎಂಕೆಯ ನಿರ್ಧಾರವನ್ನು ಟೀಕಿಸಿದೆ. ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯ ಕುರಿತು ಸರ್ಕಾರದ ಉದ್ದೇಶಗಳನ್ನು ಪ್ರಶ್ನಿಸಿದ್ದು, ಇತರ ದಕ್ಷಿಣ ರಾಜ್ಯಗಳ ಪಕ್ಷಗಳೂ ತಮ ನಿಲುವನ್ನು ಮರುಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಆದರೆ ಡಿಎಂಕೆ ತನ್ನ ನಿರ್ಧಾರವನ್ನು ಬಿಜೆಪಿ ಅಥವಾ ಎನ್‌ಡಿಎಗೆ ಸೇರುವ ಹೆಜ್ಜೆ ಎಂದು ಪರಿಗಣಿಸಬಾರದು ಎಂದು ಸ್ಪಷ್ಟಪಡಿಸಿದೆ. ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ ತಮ ರಾಜ್ಯದ ಹಿತಾಸಕ್ತಿಗೆ ಅನುಕೂಲವಾಗುವ ಷರತ್ತುಗಳು ಮಸೂದೆಯಲ್ಲಿ ಸೇರಿರುವುದರಿಂದ ಮಾತ್ರ ಬೆಂಬಲಿಸುತ್ತಿದ್ದೇವೆ ಎಂಬುದು ಪಕ್ಷದ ನಿಲುವು.

RELATED ARTICLES

Latest News