ಬೆಂಗಳೂರು, ನ.29- ನಗರದ ಮಸಾಜ್ ಪಾರ್ಲರ್ಗಳು ಹಾಗೂ ಸ್ಪಾ ಕೇಂದ್ರಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಮತ್ತು ಸಾರ್ವಜನಿಕ ಸುರಕ್ಷತೆ ಖಾತರಿಪಡಿಸುವ ಉದ್ದೇಶದಿಂದ ಬೆಂಗಳೂರು ನಗರ ಪೊಲೀಸರು ಬೃಹತ್ ವಿಶೇಷ ಪರಿಶೀಲನಾ ಕಾರ್ಯಾಚರಣೆ ನಡೆಸಿದ್ದಾರೆ. ನಗರದಾದ್ಯಂತ ಒಟ್ಟು 1,154 ಮಸಾಜ್ ಪಾರ್ಲರ್ಗಳು ಮತ್ತು ಸ್ಪಾ ಕೇಂದ್ರಗಳನ್ನು ಪರಿಶೀಲಿಸಲಾಗಿದ್ದು, ಸಾರ್ವಜನಿಕ ಸುರಕ್ಷತಾ ನಿಯಮಗಳ 11 ಉಲ್ಲಂಘನೆಗಳು ಪತ್ತೆಯಾಗಿವೆ. ನಿಯಮ ಉಲ್ಲಂಘಿಸಿದ ಕೇಂದ್ರಗಳಿಗೆ ಒಟ್ಟು 91 ನೋಟೀಸ್ಗಳನ್ನು ಜಾರಿ ಮಾಡಲಾಗಿದೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಸ್ಪಷ್ಟ ಆಶಯದಂತೆ ಈ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಹಿತೇಂದ್ರ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಜಂಟಿ ಪೊಲೀಸ್ ಆಯುಕ್ತರು ಮತ್ತು ಸಂಚಾರ, ರೌಡಿ ನಿಗ್ರಹ ದಳ, ಅಪರಾಧ ನಿಯಂತ್ರಣ ವಿಭಾಗದ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಮೇಲ್ವಿಚಾರಣೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಸಾರ್ವಜನಿಕ ಸುರಕ್ಷತೆಗೆ ಸಂಬಂಧಿಸಿದ ಅನ್ವಯವಾಗುವ ಕಾನೂನು ನಿಯಮಗಳು, ಆರೋಗ್ಯ ಇಲಾಖೆಯು ಸೂಚಿಸಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳ ಪಾಲನೆ ಹಾಗೂ ಈ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಮತ್ತು ಗ್ರಾಹಕರ ಸುರಕ್ಷತೆ ಮತ್ತು ಹಕ್ಕುಗಳ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಲಾಗಿದೆ.
ಪೊಲೀಸ್ ವಿಭಾಗವಾರು ಪರಿಶೀಲನೆಯಲ್ಲಿ ಕೇಂದ್ರ ವಿಭಾಗದಲ್ಲಿ 112 ಕೇಂದ್ರಗಳನ್ನು ತಪಾಸಣೆ ನಡೆಸಿ, ನಾಲ್ಕು ಉಲ್ಲಂಘನೆಗಳನ್ನು ಪತ್ತೆಹಚ್ಚಿ ನಾಲ್ಕು ನೋಟೀಸ್ಗಳನ್ನು ನೀಡಲಾಗಿದೆ. ಉತ್ತರ ವಿಭಾಗದಲ್ಲಿ 250 ಕೇಂದ್ರಗಳನ್ನು ಪರಿಶೀಲಿಸಿ 26 ನೋಟೀಸ್ಗಳನ್ನು ಜಾರಿ ಮಾಡಲಾಗಿದೆ. ಪೂರ್ವ ವಿಭಾಗದಲ್ಲಿ 191 ಕೇಂದ್ರಗಳನ್ನು ಪರಿಶೀಲಿಸಿ 61 ನೋಟೀಸ್ಗಳನ್ನು ನೀಡಲಾಗಿದೆ. ಪಶ್ಚಿಮ ವಿಭಾಗದಲ್ಲಿ 224 ಹಾಗೂ ದಕ್ಷಿಣ ವಿಭಾಗದಲ್ಲಿ 289 ಕೇಂದ್ರಗಳನ್ನು ಪರಿಶೀಲಿಸಲಾಗಿದ್ದು, ಯಾವುದೇ ಉಲ್ಲಂಘನೆಗಳು ಅಥವಾ ನೋಟೀಸ್ಗಳು ವರದಿಯಾಗಿಲ್ಲ. ರೌಡಿ ನಿಗ್ರಹ ದಳ ವಿಭಾಗವು 88 ಕೇಂದ್ರಗಳನ್ನು ಪರಿಶೀಲಿಸಿ ಏಳು ಉಲ್ಲಂಘನೆಗಳನ್ನು ಪತ್ತೆಹಚ್ಚಿದೆ.
ಒಟ್ಟಾರೆ 1,154 ಕೇಂದ್ರ ಗಳ ಪರಿಶೀಲನೆಯಲ್ಲಿ 11 ಉಲ್ಲಂಘನೆಗಳು ಪತ್ತೆಯಾ ಗಿದ್ದು, 91 ನೋಟೀಸ್ಗಳನ್ನು ನೀಡಲಾಗಿದೆ. ಮಸಾಜ್ ಪಾರ್ಲರ್ಗಳು ಮತ್ತು ಸ್ಪಾ ಕೇಂದ್ರಗಳು ನ್ಯಾಯ ಯುತ, ಸುರಕ್ಷಿತ ಹಾಗೂ ಕಾನೂನು ಬದ್ಧ ವಾತಾವರಣದಲ್ಲಿ ಕಾರ್ಯ ನಿರ್ವಹಿಸುವುದನ್ನು ಖಚಿತಪಡಿಸುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ. ಕೇಂದ್ರಗಳ ಮಾಲೀಕರು, ಸಿಬ್ಬಂದಿ ಮತ್ತು ಗ್ರಾಹಕರ ಹಕ್ಕುಗಳನ್ನು ಸಮಾನವಾಗಿ ರಕ್ಷಿಸುವುದು ಹಾಗೂ ಅನ್ವಯವಾಗುವ ಸಾರ್ವಜನಿಕ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡುವುದು ಪೊಲೀಸರ ಉದ್ದೇಶವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಲ್ಲ ಕೇಂದ್ರಗಳು ಸಾರ್ವಜನಿಕ ಸುರಕ್ಷತೆಗೆ ಸಂಬಂಧಿಸಿದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ಅನುಸರಿಸಬೇಕು ಹಾಗೂ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಗೃಹ ಸಚಿವರು ಸೂಚಿಸಿದ್ದಾರೆ. ಕಾನೂನುಬದ್ಧ ವ್ಯವಹಾರಗಳಿಗೆ ಪೂರಕ ವಾತಾವರಣ ಕಲ್ಪಿಸಲು ಸರ್ಕಾರ ಬದ್ಧವಾಗಿದ್ದರೂ, ಕಾನೂನು ಉಲ್ಲಂಘನೆ ಅಥವಾ ಆರೋಗ್ಯ ಸುರಕ್ಷತಾ ನಿಯಮಗಳ ಉಲ್ಲಂಘನೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಕಾನೂನುಬದ್ಧ ಕಾರ್ಯಾಚರಣೆ, ಸಾರ್ವಜನಿಕ ಸುರಕ್ಷತೆ ಹಾಗೂ ಉದ್ಯೋಗಿಗಳು ಮತ್ತು ಗ್ರಾಹಕರ ಹಕ್ಕುಗಳ ರಕ್ಷಣೆಯನ್ನು ಖಚಿತಪಡಿಸಲು ಬೆಂಗಳೂರು ನಗರ ಪೊಲೀಸರು ಮುಂದಿನ ದಿನಗಳಲ್ಲಿಯೂ ಪರಿಶೀಲನೆ ಮತ್ತು ಮೇಲ್ವಿಚಾರಣಾ ಕ್ರಮಗಳನ್ನು ಮುಂದುವರಿಸಲಿದ್ದಾರೆ ಎಂದು ಸ್ಪಷ್ಟ ಪಡಿಸಲಾಗಿದೆ.
