Homeಇದೀಗ ಬಂದ ಸುದ್ದಿಪಡಿತರ ರಾಗಿಗೆ ಮರಳು ಬೆರೆಸುವ ಜಾಲ ಪತ್ತೆ : ಕಳೆದ ಆರು ತಿಂಗಳಿಂದ ನಡೆಯುತ್ತಿದ್ದ ದಂಧೆ...

ಪಡಿತರ ರಾಗಿಗೆ ಮರಳು ಬೆರೆಸುವ ಜಾಲ ಪತ್ತೆ : ಕಳೆದ ಆರು ತಿಂಗಳಿಂದ ನಡೆಯುತ್ತಿದ್ದ ದಂಧೆ ಬಯಲಿಗೆ

ಚಿಕ್ಕಮಗಳೂರು, ನ.29- ಪಡಿತರ ವ್ಯವಸ್ಥೆಯಲ್ಲಿ ವಿತರಿಸುವ ರಾಗಿಗೆ ಮರಳು ಮಿಶ್ರಣ ಮಾಡುವ ಖತರ್ನಾಕ್‌ ಜಾಲವೊಂದು ಚಿಕ್ಕಮಗಳೂರಿನಲ್ಲಿ ಪತ್ತೆಯಾಗಿದೆ. ಆರು ತಿಂಗಳಿನಿಂದಲೂ ನಡೆಯುತ್ತಿದ್ದ ಈ ದಂಧೆಯನ್ನು ಗಮನಿಸಿದ ಸ್ಥಳೀಯರು ನಿನ್ನೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆಹಾರ ದಾಸ್ತಾನು ನಿಗಮದ ವ್ಯವಸ್ಥಾಪಕಿ ಅನುರಾಧ ನೇತೃತ್ವದಲ್ಲಿ ನಿನ್ನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಳ್ಳಿ ಬಳಿ ಇರುವ ದಾಸ್ತಾನು ಮಳಿಗೆಯ ಮೇಲೆ ದಾಳಿ ನಡೆಸಲಾಗಿದೆ. ಈ ಸಂದರ್ಭದಲ್ಲಿ ರಾಗಿಗೆ ಮರಳು ಮಿಶ್ರಣ ಮಾಡುವ ದಂಧೆ ಪತ್ತೆಯಾಗಿದೆ.

ರೈತರಿಂದ ಖರೀದಿಸಿದ ಉತ್ತಮ ವಾದ ರಾಗಿಗೆ ಮರಳನ್ನು ಮಿಶ್ರಣ ಮಾಡಿ ತೂಕ ಹೆಚ್ಚಿಸಲು ಈ ಜಾಲ ಪ್ರಯತ್ನಿಸುತ್ತಿತ್ತು ಎಂಬ ಆರೋಪಗಳಿವೆ. ಅಧಿಕಾರಿಗಳಿಗೆ ಮಾಹಿತಿ ಸಿಕ್ಕಾಗ ಸ್ಥಳಕ್ಕೆ ಧಾವಿಸಿದ್ದಾರೆ, ಈ ವೇಳೆ ಗುಂಪೊಂದು ಅಧಿಕಾರಿಗಳನ್ನು ಸುತ್ತುವರೆದು ತಪಾಸಣೆ ನಡೆಸಿದಂತೆ ಅಡ್ಡಿಪಡಿಸಲು ಪ್ರಯತ್ನಿಸಿದೆ. ಪೊಲೀಸರ ಸಹಕಾರದೊಂದಿಗೆ ಪರಿಶೀಲಿಸಿದಾಗ ರಾಗಿಯಲ್ಲಿ ಮರಳು ಮಿಶ್ರಣ ಮಾಡುತ್ತಿರುವುದು ಖಚಿತಪಟ್ಟಿದೆ.
ಆಹಾರ ಇಲಾಖೆಯ ಅಧಿಕಾರಿಗಳು ತಪಾಸಣೆ ನಡೆಸಿ ಮಹಜರು ವರದಿಯನ್ನು ಪೊಲೀಸರಿಗೆ ನೀಡಿದ್ದಾರೆ. ಪೊಲೀಸರು ತರೀಕೆರೆಯ ದಾಸ್ತಾನು ಮಳಿಗೆಯ ಮೇನೇಜರ್‌ ಲೋಕೇಶ್‌ ಸೇರಿದಂತೆ ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ತಿನ್ನುವ ಆಹಾರದಲ್ಲಿ ಕಲಬೆರಕೆ ಮಾಡುವ ಇಂತಹ ಖೂಳರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಆಹಾರ ಹಾಗೂ ಇಲಾಖೆ ಜಾಗೃತಿ ವಹಿಸಿ ರಾಜ್ಯಾದ್ಯಂತ ತಪಾಸಣೆ ನಡೆಸಬೇಕು ಎಂಬ ಒತ್ತಾಯಗಳು ಕೇಳಿ ಬಂದಿವೆ.

RELATED ARTICLES

Latest News