ಬೆಂಗಳೂರು,ಮಾ.13- ಸಾರ್ವಜನಿಕ ಹಿತದೃಷ್ಟಿಯಿಂದ ಕಷ್ಟ ಸಂದರ್ಭದಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆಯುವವರ ಹಿತರಕ್ಷಣೆ ಉದ್ದೇಶದ ಕರ್ನಾಟಕ ಚಿನ್ನ ಅಡಮಾನವಿಟ್ಟ ಸಾಲಗಾರರ ರಕ್ಷಣಾ ವಿಧೇಯಕ-2025 ಎಂಬ ಖಾಸಗಿ ಸದಸ್ಯರ ವಿಧೇಯಕವನ್ನು ಶಾಸಕ ರಮೇಶ್‌ಬಾಬು ವಿಧಾನಪರಿಷತ್‌ನಲ್ಲಿಂದು ಮಂಡಿಸಿದರು.
ವಿಧೇಯಕ ಮಂಡಿಸಿ ಮಾತನಾಡಿದ ಶಾಸಕರು, ಖಾಸಗಿ ಹಣಕಾಸು ಸಂಸ್ಥೆಗಳು ಚಿನ್ನವನ್ನು ಅಡವಿಟ್ಟುಕೊಂಡು ಸಾಲ ನೀಡುವಾಗ ಮೋಸ ಮಾಡುವ ನಿದರ್ಶನವಿದೆ. ಚಿನ್ನದ ಮಾರುಕಟ್ಟೆ ಮೌಲ್ಯದಲ್ಲಿ ಅರ್ಧಕ್ಕಿಂತಲೂ ಕಡಿಮೆ ಕೊಡಲಾಗುತ್ತದೆ. ಸಾಲಗಾರರಿಗೆ ಸರಿಯಾದ ಮಾಹಿತಿ ದೊರೆಯದೆ ವಂಚನೆಗೊಳಗಾಗುತ್ತಾರೆ.
ಸಾಲ ಮರು ಪಾವತಿಸದ ಸಾಲಗಾರರ ಚಿನ್ನವನ್ನು ಮುಟ್ಟುಗೋಲು ಹಾಕಲಾಗುತ್ತದೆ. ಚಿನ್ನ ಅಡವಿಟ್ಟವರಿಗೆ ಮಾರುಕಟ್ಟೆ ಮೌಲ್ಯದ ಶೇ.25 ರಷ್ಟು ಸಿಗುತ್ತದೆ. ಅಡವಿಟ್ಟ ಚಿನ್ನ ಹರಾಜು ಹಾಕುವ ಪ್ರಕ್ರಿಯೆಯು ಪಾರದರ್ಶಕವಾಗಿರುವುದಿಲ್ಲ. ಬಡ್ಡಿ ವಿಧಿಸುವುದು ಸರಿಯಿರುವುದಿಲ್ಲ, ತೂಕದಲ್ಲಿ ಮೋಸವಾಗುತ್ತದೆ. ಸಾಲಗಾರರ ಶೋಷಣೆ ಮಾಡಲಾಗುತ್ತದೆ ಎಂದು ವಿವರಿಸಿದರು.
ಅಡಮಾನವಿಟ್ಟ ಚಿನ್ನ ಹರಾಜು ಹಾಕುವ ಮೊದಲು 180 ದಿನಗಳ ಕನಿಷ್ಠ ನೋಟಿಸಿನ ಅವಧಿಯನ್ನು ಖಚಿತಪಡಿಸಿಕೊಳ್ಳಬೇಕು. ಪಾರದರ್ಶಕ ಮೌಲ್ಯಮಾಪನ ಸೂಕ್ತವಾದ ಸಂವಹನ ಮತ್ತು ಬಿಡಿಸಿಕೊಳ್ಳುವಿಕೆಗೆ ಅವಕಾಶವನ್ನು ಕಡ್ಡಾಯಗೊಳಿಸುವ ಉದ್ದೇಶವನ್ನು ಈ ವಿಧೇಯಕ ಒಳಗೊಂಡಿದೆ. ಪರವಾನಗಿ ಪಡೆದವರಿಂದ ಮತ್ತು ಮೇಲ್ವಿಚಾರಣೆಯ ಕಾರ್ಯವಿಧಾನಗಳ ಮೂಲಕ ಹರಾಜು ಪ್ರಕ್ರಿಯೆಯನ್ನು ನಿಯಂತ್ರಿಸಬೇಕು.
ಸಾಲಗಾರರ ರಕ್ಷಣಾ ಮಾನದಂಡಗಳ ಉಲ್ಲಂಘನೆಗಾಗಿ ದಂಡ ವಿಧಿಸಬೇಕು. ಸಾಲ ನೀಡುವ ಕ್ಷೇತ್ರದಲ್ಲಿ ನ್ಯಾಯಯುತ ವಾಣಿಜ್ಯ ಪದ್ಧತಿಗಳನ್ನು ಖಚಿತಪಡಿಸಿಕೊಳ್ಳುವಾಗ ಖಾಸಗಿ ಹಣಕಾಸು ಸಂಸ್ಥೆಗಳಿಂದ ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳಿಂದ ಆಗುವ ಶೋಷಣೆಯಿಂದ ಬಡ ಮತ್ತು ಮಧ್ಯಮ ವರ್ಗದ ಸಾಲಗಾರರ ಹಿತಾಸಕ್ತಿಗಳನ್ನು ರಕ್ಷಿಸುವ ಗುರಿಗಳನ್ನು ಈ ವಿಧೇಯಕ ಒಳಗೊಂಡಿದೆ ಎಂದರು.ಈ ವಿಧೇಯಕವನ್ನು ಮುಂದಿನ ಸಂದರ್ಭದಲ್ಲಿ ಚರ್ಚೆಗೆ ಪರಿಗಣಿಸುವುದಾಗಿ ಸಭಾಪತಿ ಬಸವರಾಜ ಹೊರಟ್ಟಿಯವರು ತಿಳಿಸಿದರು.
