Homeರಾಜ್ಯಪ್ರತಿ ರೈತನಿಗೆ 5000 ರೂ. ಬರ ಪರಿಹಾರ : ಸಿಎಂ ಡಿಕೆಶಿ

ಪ್ರತಿ ರೈತನಿಗೆ 5000 ರೂ. ಬರ ಪರಿಹಾರ : ಸಿಎಂ ಡಿಕೆಶಿ

ಬೆಂಗಳೂರು, ನ.05: “ದಸರಾ ಮುಗಿದು ದೀಪಾವಳಿ ಬಂದಿದೆ. ರೈತರು ಬಿಕ್ಕಟ್ಟಿನಲ್ಲಿದ್ದಾರೆ. ಅವರ ಬದುಕಿಗೆ ಬೆಳಕು ನೀಡಬೇಕು ಎಂಬ ತೀರ್ಮಾನಕ್ಕೆ ಸರ್ಕಾರ ಬದ್ಧವಾಗಿದೆ. ಬರಪೀಡಿತ ರೈತರಿಗೆ ತಲಾ 5,000 ರೂ. ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದೆ. ಈಗ ಮೊದಲ ಹಂತದಲ್ಲಿ 2500 ರೂ. ಅನ್ನು ಡಿಬಿಟಿ ಮೂಲಕ ನೇರವಾಗಿ ರೈತರಿಗೆ ತಲುಪಿಸಲಾಗುತ್ತಿದೆ. ಉಳಿದ 2500 ರೂ. ಅನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಶಿವಕುಮಾರ್ ಅವರು ಯಾದಗಿರಿ ಜಿಲ್ಲೆಯ 1,06,462 ರೈತರಿಗೆ, ಪ್ರತಿ ರೈತರಿಗೆ ರೂ. 2,500 ರಂತೆ ಮೊದಲ ಕಂತಿನ ಇನ್‌ಪುಟ್ ಸಬ್ಸಿಡಿ ಮೊತ್ತ ರೂ. 17.43 ಕೋಟಿಯನ್ನು ಗುರುವಾರ ಬಿಡುಗಡೆ ಮಾಡಿ ಮಾತನಾಡಿದರು.

ಶೀಘ್ರವೇ ಎರಡನೇ ಕಂತಿನ ಪರಿಹಾರ ಬಿಡುಗಡೆ

“ಇದರ ಜೊತೆಗೆ, 15 ಜಿಲ್ಲೆಗಳಿಗೆ ಪಾವತಿ ಕಡತಗಳ ತಯಾರಿಕೆ ಪ್ರಕ್ರಿಯೆಯಲ್ಲಿದೆ. ಉತ್ತರ ಕನ್ನಡ, ಕೋಲಾರ, ಕೊಪ್ಪಳ, ಚಾಮರಾಜನಗರ, ಧಾರವಾಡ, ಬಳ್ಳಾರಿ, ಬೀದರ್, ಬೆಂಗಳೂರು ನಗರ, ಹಾವೇರಿ, ಬೆಂಗಳೂರು ದಕ್ಷಿಣ, ದಾವಣಗೆರೆ, ದಕ್ಷಿಣ ಕನ್ನಡ, ಕಲಬುರಗಿ, ಮಂಡ್ಯ ಮತ್ತು ವಿಜಯನಗರ. ಎಲ್ಲಾ ಜಿಲ್ಲೆಗಳಲ್ಲಿರುವ ಅರ್ಹ ರೈತರಿಗೆ ಮೊದಲ ಕಂತಿನ ಇನ್‌ಪುಟ್ ಸಬ್ಸಿಡಿಯನ್ನು ಆದಷ್ಟು ಶೀಘ್ರವಾಗಿ ವಿತರಿಸಲಾಗುವುದು. ಮುಂದಿನ 15-20 ದಿನಳಲ್ಲಿ 2ನೇ ಕಂತಿನ ಮೊತ್ತವನ್ನು ಬಿಡುಗಡೆ ಮಾಡಲಾಗುವುದು. ರೈತರ ಬದುಕು ಹಸನು ಮಾಡಬೇಕು ಎಂಬ ನಿಲುವಿಗೆ ಸರ್ಕಾರ ಬದ್ಧವಾಗಿದೆ. ಸರ್ಕಾರದ ಪರಿಹಾರದಿಂದ ಸಂಪೂರ್ಣ ನೆರವಾಗುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಸ್ವಲ್ಪ ಮಟ್ಟಿಗಿನ ನೆರವು ಒದಗಿಸಲಾಗುತ್ತಿದೆ” ಎಂದರು.

“ಪರಿಷ್ಕೃತ ಮಾನದಂಡಗಳ ಪ್ರಕಾರ ಬಾಕಿ ಉಳಿದಿರುವ ಅನುಮೋದಿತ ಇನ್‌ಪುಟ್ ಸಬ್ಸಿಡಿಯನ್ನು, ಅನ್ವಯವಾಗುವ ಅರ್ಹತಾ ಮಾನದಂಡಗಳಿಗೆ ಒಳಪಟ್ಟು, ಎನ್‌ಡಿಆರ್‌ಎಫ್‌ನಿಂದ ಅಗತ್ಯ ಅನುದಾನವು ದೊರೆತ ತಕ್ಷಣವೇ ಒಂದೇ ಕಂತಿನಲ್ಲಿ ಬಿಡುಗಡೆ ಮಾಡಲಾಗುತ್ತದೆ. ನಮ್ಮ ಬದುಕಿನ ಅನುಭವದಲ್ಲಿ ಇಷ್ಟು ದೊಡ್ಡ ಭೀಕರ ಬರಗಾಲ ನಾವು ಯಾರೂ ಕೇಳಿಲ್ಲ. ಕೇಂದ್ರ ಸರ್ಕಾರ ಮುನ್ಸೂಚನೆ ಕೊಟ್ಟರು ಕೂಡ ಕೃಷ್ಣಾ ಬಿಟ್ಟು ಬೇರೆ ಯಾವ ಅಣೆಕಟ್ಟು ತುಂಬಿಲ್ಲ” ಎಂದು ತಿಳಿಸಿದರು.

ಕಾನೂನಿನ ಚೌಕಟ್ಟಿನಲ್ಲಿಯೇ ಬರಪೀಡಿತ ತಾಲ್ಲೂಕುಗಳ ಘೋಷಣೆ

“ಜಂಟಿ ಬೆಳೆ ಹಾನಿ ಮೌಲ್ಯಮಾಪನ ವರದಿಯ ಪ್ರಕಾರ ರಾಜ್ಯದಲ್ಲಿ 57.93 ಲಕ್ಷ ಹೆಕ್ಟೇರ್‌ ಪ್ರದೇಶಗಳಲ್ಲಿ ಬೆಳೆ ಹಾನಿಯಾಗಿದೆ. ಈ ವಿಪತ್ತಿನಿಂದ ರೈತರು ಕಂಗೆಟ್ಟಿದ್ದಾರೆ. 226 ತಾಲ್ಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡುವಾಗ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಯಾರ ಒತ್ತಡಕ್ಕೂ ಮಣಿಯದೆ ನೇರವಾಗಿ ಪರಿಶೀಲಿಸಿ ವರದಿ ತಯಾರು ಮಾಡಲಾಗಿದೆ. ಕಾನೂನು ಪ್ರಕಾರವೇ ಕಂದಾಯ ಸಚಿವರು, ಡಿಸಿಎಂ ಅವರ ಅನುಮೋದನೆ ಪಡೆದು ನಾನು ಬರಪೀಡಿತ ತಾಲ್ಲೂಕುಗಳ ಘೋಷಣೆ ಮಾಡಿದ್ದೇನೆ” ಎಂದರು.

ವಿರೋಧ ಪಕ್ಷಗಳಿಗೆ ರಾಜಕಾರಣ ಮುಖ್ಯ

“ಕೇಂದ್ರ ಸರ್ಕಾರ ಕಳುಹಿಸಿದ್ದ ಮೂರು ತಂಡಗಳೂ ರಾಜ್ಯದ ಬರ ಪೀಡಿತ ಪ್ರದೇಶಗಳನ್ನು ಭೇಟಿ ಮಾಡಿವೆ. ನಾವು ಕೂಡ ವಿರೋಧ ಪಕ್ಷಗಳೊಂದಿಗೆ ಚರ್ಚೆ ಮಾಡಬೇಕೆಂದರೂ ಅವರಿಗೆ ರಾಜಕಾರಣ ಮುಖ್ಯವಾಯಿತು. ರೈತರ ಹಿತ ಕಾಪಾಡಲು ಮೂರು ವಿಭಾಗಗಳಿಗೆ ಭೇಟಿ ಮಾಡಿ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ” ಎಂದರು

ರೈತರ ನೆರವಿಗೆ ಧಾವಿಸಬೇಕಾದ್ದು ಕೇಂದ್ರ ಸರ್ಕಾರದ ಕರ್ತವ್ಯ

“ಬರಗಾಲದಿಂದಾಗಿ ರಾಜ್ಯದಲ್ಲಿ 62 ಸಾವಿರ ಕೋಟಿ ನಷ್ಟವಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ವರದಿ ಕಳುಹಿಸಲಾಗಿದ್ದು, ರೈತರ ನೆರವಿಗೆ ಧಾವಿಸಬೇಕಾದ್ದು ಕೇಂದ್ರ ಸರ್ಕಾರದ ಕರ್ತವ್ಯ. ರೈತರಿಗೆ ಬೆಳೆ ಪರಿಹಾರವಾಗಿ 2 ಸಾವಿರ ರೂ. ಒದಗಿಸುವುದಾಗಿ ವಿಧಾನಸಭೆಯಲ್ಲಿ ಘೋಷಣೆ ಮಾಡಿದ್ದು, ಕೇಂದ್ರದಿಂದ 22,400 ಕೋಟಿ ಪರಿಹಾರವನ್ನು ಒದಗಿಸಲು ಕೋರಲಾಗಿದೆ. ಈ ಸಂಬಂಧ ಪ್ರಧಾನಿಗಳನ್ನು ಭೇಟಿ ಮಾಡಲು ಸಮಯ ಕೇಳಿದ್ದೇವೆ. ಸರ್ವ ಪಕ್ಷ ನಿಯೋಗ ಕರೆತರುವುದಾಗಿಯೂ ಹೇಳಿದ್ದೇವೆ. ಸರ್ವ ಪಕ್ಷವರನ್ನು ನಮ್ಮ ಜೊತೆ ಬಂದು ಕೇಂದ್ರದ ಮೇಲೆ ಒತ್ತಡ ಹಾಕಲೂ ಕೂಡ ಕೇಳಿದ್ದೇವೆ. ಅವರು ಮುಂದೇನು ಮಾಡುತ್ತಾರೆ ತಿಳಿದಿಲ್ಲ” ಎಂದರು.

“57 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದ್ದು, ರೈತರಿಗೆ ನಷ್ಟವಾಗಿದೆ. ರಾಜಸ್ಥಾನ ಬಿಟ್ಟರೆ ದೇಶದಲ್ಲಿ ಅತಿ ಹೆಚ್ಚು ಒಣ ಭೂಮಿ ಇರುವ ಪ್ರದೇಶ ಕರ್ನಾಟಕ. ರಾಜ್ಯದಲ್ಲಿ ಕುಡಿಯುವ ನೀರಿಗೆ ಸಹ ತೊಂದರೆಯಾಗಿದೆ. ರೈತರಿಗೆ 20 ಸಾವಿರ ಕೋಟಿ ಗಳನ್ನು ಉಚಿತ ವಿದ್ಯುತ್ ಗಾಗಿ ನೀಡಲಾಗುತ್ತಿತ್ತು. ಬರಗಾಲದಿಂದಾಗಿ ವಿದ್ಯುತ್ ಬಳಕೆ ಹೆಚ್ಚಾಗಿ ಈಗ 30 ಸಾವಿರ ಕೋಟಿ ನೀಡುವ ಅನಿವಾರ್ಯತೆ ಒದಗಿದೆ. ಹಣ ಕೊಟ್ಟರೂ ವಿದ್ಯುತ್ ದೊರಕದ ಪರಿಸ್ಥಿತಿ ಎದುರಾಗಿದೆ” ಎಂದು ವಿವರಿಸಿದರು.

ರೈತರೊಂದಿಗೆ ಸಂವಾದ

ಇದೇ ಸಂದರ್ಭದಲ್ಲಿ ವೀಡಿಯೋ ಸಂವಾದದ ಮೂಲಕ ಯಾದಗಿರಿಯ ರೈತರೊಂದಿಗೆ ಸಿಎಂ ಮಾತನಾಡಿದರು. ಈ ವೇಳೆ ಯಾದಗಿರಿ ಜಿಲ್ಲೆಗೆ ಪರಿಹಾರ ಧನ ಬಿಡುಗಡೆ ಮಾಡಿದ್ದಕ್ಕೆ ರೈತರು ಸಿಎಂ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಬರ ಪರಿಹಾರ ನೀಡಲು ಕೇಂದ್ರ ಸರ್ಕಾರದ ಜೊತೆ ಮಾತುಕತೆ ಮಾಡಲು ವಿರೋಧ ಪಕ್ಷದವರು ಬರಲಿದ್ದಾರೆ, ನಮಗೆ ಸಹಾಯ ಮಾಡುತ್ತಾರೆ ಎಂಬ ಆಶಾ ಭಾವನೆಯಿದೆ ಎಂದರು.

RELATED ARTICLES

Latest News