ಬೆಂಗಳೂರು,ಮಾ.17- ರಾಜ್ಯಮಟ್ಟದಲ್ಲಿ ಸಮಗ್ರ ನೀರಿನ ಗುಣಮಟ್ಟ ನಿರ್ವಹಣೆ ಮತ್ತು ಸಾರ್ವಜನಿಕ ಆರೋಗ್ಯ ಸುರಕ್ಷತಾ ಕಾರ್ಯಕ್ರಮ ಜಾರಿಗೆ ತರುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ವಿಧಾನಪರಿಷತ್‌ನಲ್ಲಿಂದು ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಧನಂಜಯ ಸರ್ಜಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಗರ ಸ್ಥಳೀಯ ಸಂಸ್ಥೆಗಳಲ್ಲಿನ ನೀರು ಸರಬರಾಜು ಘಟಕಗಳಲ್ಲಿ ಕುಡಿಯುವ ನೀರಿನ ಗುಣಮಟ್ಟವನ್ನು ಆಯಾ ಸ್ಥಳೀಯ ಸಂಸ್ಥೆಗಳಲ್ಲಿನ ವ್ಯಾಪ್ತಿಯ ಪ್ರಯೋಗಾಲಯಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಡಿಐಎಸ್ ಮಾನದಂಡಗಳಂತೆ ನಿಯಮಿತವಾಗಿ ಪರೀಕ್ಷಿಸಲಾಗುತ್ತದೆ ಎಂದರು.
ಜಲಾಶಯ ನದಿಗಳಿಂದ ಬರುವ ನೀರನ್ನು ಜಲಶುದ್ಧಿ ಘಟಕಗಳಲ್ಲಿ ನೀರನ್ನು ಶುದ್ಧೀಕರಿಸಿ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಕೊಳವೆ ಬಾವಿ ಅಥವಾ ತೆರೆದ ಬಾವಿ ನೀರನ್ನು ವಾಟರ್ ಫಿಲ್ಟರ್‌ಗಳ ಮುಖಾಂತರ ಟ್ಯಾಂಕ್‌ಗಳಿಗೆ ತುಂಬಿಸಿ ಜನರಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದರು.
ಮಾನದಂಡಗಳ ಪ್ರಕಾರ, ಸ್ವಚ್ಛಗೊಳಿಸಿ ನೀರನ್ನು ಪೂರೈಸಲಾಗುತ್ತಿದೆ. ನೀರಿನ ಮೂಲಕ ಹರಡುವ ಸಾಂಕ್ರಾಮಿಕ ರೋಗ ತಡೆಯಲು ಹಾಗೂ ಸ್ವಚ್ಛತೆ ಕಾಪಾಡಲು ನಗರ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ರಾಷ್ಟ್ರಾದ್ಯಂತ ಜನಗಣತಿ ಕಾರ್ಯವನ್ನು ಕೈಗೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಹೊಸ ನಗರ ಸ್ಥಳೀಯ ಸಂಸ್ಥೆಗಳನ್ನು ರಚಿಸುವ, ವ್ಯಾಪ್ತಿಯನ್ನು ವಿಸ್ತರಿಸುವ ಕಾಲಾವಕಾಶ ಕಳೆದ ಡಿ.30 ರಂದು ಮುಕ್ತಾಯಗೊಂಡಿದೆ. ಇಂತಹ ಪ್ರಸ್ತಾವನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಶಾಸಕ ಅನಿಲ್‌ಕುಮಾರ್ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ರಾಜ್ಯದ ಅವಧಿ ಮುಕ್ತಾಯವಾಗಿರುವ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ವಾರ್ಡ್‌ವಾರು ಮೀಸಲಾತಿ ನಿಗದಿಪಡಿಸಲು ಕ್ರಮ ವಹಿಸಲಾಗುತ್ತಿದೆ. ಈಗಾಗಲೇ 23 ನಗರ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರದಿಂದ ಅಧಿಸೂಚನೆ ಹೊರಡಿಸಿ ಆಕ್ಷೇಪಣೆಯನ್ನು ಆಹ್ವಾನಿಸಲಾಗಿದೆ ಎಂದು ಹೇಳಿದರು. ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 19,509 ಹುದೆಗಳು ಖಾಲಿ ಇದ್ದು, ಗುತ್ತಿಗೆ, ಹೊರಗುತ್ತಿಗೆ, ನೇರಪಾವತಿ, ದಿನಗೂಲಿ ಆಧಾರದ ಮೇಲೆ 12,777 ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
