Homeರಾಜ್ಯಮಧ್ಯ ಪ್ರಾಚ್ಯ ಯುದ್ಧದ ಕರಿ ನೆರಳಿನಲ್ಲೂ ರಾಜ್ಯದ ತೆರಿಗೆ ಸಂಗ್ರಹ ಸಮಾಧಾನಕರ

ಮಧ್ಯ ಪ್ರಾಚ್ಯ ಯುದ್ಧದ ಕರಿ ನೆರಳಿನಲ್ಲೂ ರಾಜ್ಯದ ತೆರಿಗೆ ಸಂಗ್ರಹ ಸಮಾಧಾನಕರ

State tax collection is satisfactory even in the shadow of the Middle East war

ಬೆಂಗಳೂರು, ಜೂ.27- ಪ್ರಸಕ್ತ ಆರ್ಥಿಕ ವರ್ಷದ ಎರಡು ತಿಂಗಳಲ್ಲಿ ರಾಜ್ಯದ ತೆರಿಗೆ ಸಂಗ್ರಹ ಚೇತರಿಕೆಯ ಹಾದಿಯಲ್ಲಿದೆ. ಮಧ್ಯ ಪ್ರಾಚ್ಯ ಯುದ್ಧದ ಕರಿ ನೆರಳಿನಲ್ಲೂ ರಾಜ್ಯದ ತೆರಿಗೆ ಸಂಗ್ರಹ ಸಮಾಧಾನಕರವಾಗಿದೆ.

ಬಜೆಟ್‌ ಗುರಿ ತಲುಪಿಲ್ಲವಾದರೂ ಎಲ್ಲಾ ಪ್ರಮುಖ ತೆರಿಗೆ ಇಲಾಖೆಗಳಿಂದ ತೆರಿಗೆ ಸಂಗ್ರಹ ಅಂದಾಜು ಗುರಿಯ ಸನಿಹದಲ್ಲಿದ್ದು, ಆರ್ಥಿಕ ಇಲಾಖೆ ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಯುದ್ಧದ ಕಾರ್ಮೋಡದಲ್ಲಿ ಪ್ರಸಕ್ತ ಬಜೆಟ್‌ ವರ್ಷ ಆರಂಭವಾಗಿದೆ.

ಇರಾನ್‌-ಅಮೆರಿಕಾ ನಡುವಿನ ಯುದ್ಧ ದೇಶದ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇತ್ತ ಕರ್ನಾಟಕದ ಆರ್ಥಿಕತೆ ಮೇಲೆನೂ ಸಹಜವಾಗಿ ಪರಿಣಾಮ ಬೀರಲಿದೆ. ಆದರೆ ಪ್ರಸಕ್ತ ಆರ್ಥಿಕ ವರ್ಷದ ಎರಡು ತಿಂಗಳು ಕಳೆದಿದ್ದು, ತೆರಿಗೆ ಸಂಗ್ರಹದ ಪ್ರಮಾಣ ಆಶಾದಾಯಕವಾಗಿದೆ. ಕಳೆದ ವರ್ಷದ ಸ್ವಂತ ತೆರಿಗೆ ಸಂಗ್ರಹಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಚೇತರಿಕೆ ಕಾಣುತ್ತಿದೆ. ಕಳೆದ ಆರ್ಥಿಕ ವರ್ಷದ ಆರಂಭಿಕ ಎರಡು ತಿಂಗಳ ತೆರಿಗೆ ಸಂಗ್ರಹದ ಪ್ರತಿಯಾಗಿ ಈ ವರ್ಷ ಎರಡು ತಿಂಗಳಲ್ಲಿ ತೆರಿಗೆ ಸಂಗ್ರಹದಲ್ಲಿ ಶೇ.18 ರಷ್ಟು ಪ್ರಗತಿ ಕಂಡಿದೆ.

ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ, ಸದ್ಯದ ಪ್ರಗತಿ ಚೇತರಿಕೆಯ ಹಾದಿಯಲ್ಲಿದೆ. ಇದರಿಂದ ಆದಾಯ ಸಂಗ್ರಹದ ಕೊರತೆಯಿಂದ ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರಕ್ಕೆ ಇದು ನಿಟ್ಟಿಸಿರು ಬಿಡುವಂತಾಗಿದೆ.2026-27ರ ಪ್ರಸಕ್ತ ಬಜೆಟ್‌ ವರ್ಷದಲ್ಲಿ ಒಟ್ಟು 2,20,000 ಕೋಟಿ ರೂ. ಸ್ವಂತ ತೆರಿಗೆ ರಾಜಸ್ವ ಸಂಗ್ರಹದ ಗುರಿ ನಿಗದಿ ಪಡಿಸಿದೆ.

ಅದರಂತೆ ಆರಂಭಿಕ ಎರಡು ತಿಂಗಳಲ್ಲಿ 36,666 ಕೋಟಿ ರೂ. ತೆರಿಗೆ ಸಂಗ್ರಹ ಮಾಡಬೇಕಾಗಿತ್ತು. ಆದರೆ, ಆರ್ಥಿಕ ಇಲಾಖೆ ನೀಡಿರುವ ಅಂಕಿ-ಅಂಶದ ಪ್ರಕಾರ, ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ 34,805 ಕೋಟಿ ರೂ. ಸಂಗ್ರಹ ಮಾಡಿದೆ. ಅಂದರೆ ಬಜೆಟ್‌ ಗುರಿಗೆ ಕೇವಲ 1,861 ಕೋಟಿ ಮಾತ್ರ ಕೊರತೆ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆರಂಭಿಕ ಎರಡು ತಿಂಗಳ ಅವಧಿಯಲ್ಲಿ ತೆರಿಗೆ ಸಂಗ್ರಹದಲ್ಲಿ ಸುಮಾರು ಶೇ.18ರಷ್ಟು ಹೆಚ್ಚಿನ ಪ್ರಗತಿ ಕಂಡಿದೆ.

ಕಳೆದ ಎರಡು ಆರ್ಥಿಕ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಆರಂಭದ ಎರಡು ತಿಂಗಳಲ್ಲಿ ಉತ್ತಮ ತೆರಿಗೆ ಸಂಗ್ರಹವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಬಜೆಟ್‌ ಗುರಿಗೂ ವಾಸ್ತವ ತೆರಿಗೆ ಸಂಗ್ರಹದ ನಡುವೆ ಅಜಗಜಾಂತರ ವ್ಯತ್ಯಾಸ ಇತ್ತು.

2024-25ರಲ್ಲಿ ಒಟ್ಟು ಸ್ವಂತ ತೆರಿಗೆ ರಾಜಸ್ವ ಸಂಗ್ರಹದ ವಾರ್ಷಿಕ ಗುರಿ ಇದ್ದಿದ್ದು, 1,89,893 ಕೋಟಿ ರೂ., ಏಪ್ರಿಲ್‌‍, ಮೇನಲ್ಲಿ 28,356 ಕೋಟಿ ರೂ. ಸಂಗ್ರಹವಾಗಿತ್ತು. ಅಂದರೆ ಬಜೆಟ್‌ ಗುರಿಯ ಮುಂದೆ ಎರಡು ತಿಂಗಳ ತೆರಿಗೆ ಸಂಗ್ರಹದಲ್ಲಿ 3,300 ಕೋಟಿ ರೂ. ಕೊರತೆ ಎದುರಿಸಿತ್ತು. ಅಂದರೆ 2023-24 ಸಾಲಿಗೆ ಹೋಲಿಸಿದರೆ 2024-25ರ ಆರಂಭದ ಎರಡು ತಿಂಗಳಲ್ಲಿ ಶೇ.10.63 ರಷ್ಟು ಪ್ರಗತಿಯಾಗಿತ್ತು.2025-26ರಲ್ಲಿ ಒಟ್ಟು ಸ್ವಂತ ತೆರಿಗೆ ರಾಜಸ್ವ ಸಂಗ್ರಹದ ವಾರ್ಷಿಕ ಬಜೆಟ್‌ ಗುರಿ ಇದ್ದಿದ್ದು 2,08,100 ಕೋಟಿ ರೂ. ಆರಂಭದ ಎರಡು ತಿಂಗಳಲ್ಲಿ 29,511 ಕೋಟಿ ರೂ. ಸ್ವಂತ ತೆರಿಗೆ ರಾಜಸ್ವ ಸಂಗ್ರಹವಾಗಿತ್ತು.

ಈ ವರ್ಷ ಎರಡು ತಿಂಗಳ ತೆರಿಗೆ ಸಂಗ್ರಹದಲ್ಲಿ 5,172 ಕೋಟಿ ರೂ. ಕೊರತೆ ಅನುಭವಿಸಿತ್ತು. ಅಂದರೆ 2024-25 ಸಾಲಿಗೆ ಹೋಲಿಸಿದರೆ 2025-26ರ ಆರಂಭದ ಎರಡು ತಿಂಗಳ ಅವಧಿಯಲ್ಲಿ ಶೇ.4 ರಷ್ಟು ಪ್ರಗತಿ ಕಂಡಿತ್ತು.

ಎರಡು ತಿಂಗಳಲ್ಲಿ ಯಾವ ತೆರಿಗೆ ಎಷ್ಟು ಸಂಗ್ರಹ?:
ರಾಜ್ಯದ ಪ್ರಮುಖ ತೆರಿಗೆ ಮೂಲವಾದ ವಾಣಿಜ್ಯ ತೆರಿಗೆ ರೂಪದಲ್ಲಿ ರಾಜ್ಯ ಸರ್ಕಾರ ಉತ್ತಮ ತೆರಿಗೆ ಸಂಗ್ರಹ ಮಾಡಿದೆ. ಆರ್ಥಿಕ ಇಲಾಖೆ ನೀಡಿದ ಅಂಕಿಅಂಶದಂತೆ ಪ್ರಸ್ತಕ ಬಜೆಟ್‌ ವರ್ಷದಲ್ಲಿ 1,25,000 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹ ಗುರಿ ನಿಗದಿ ಮಾಡಲಾಗಿದೆ.

ಈ ಪೈಕಿ ಏಪ್ರಿಲ್‌ನಿಂದ ಮೇವರೆಗೆ 20,594 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷಗಿಂತ ಶೇ.18 ಪ್ರಗತಿ ಕಂಡಿದೆ.ಇತ್ತ ಅಬಕಾರಿ ತೆರಿಗೆ ರಾಜ್ಯದ ಎರಡನೇ ಅತಿ ದೊಡ್ಡ ಸ್ವಂತ ತೆರಿಗೆ ರಾಜಸ್ವ ಮೂಲವಾಗಿದೆ. ಪ್ರಸಕ್ತ ಬಜೆಟ್‌ ವರ್ಷದಲ್ಲಿ 45,000 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹದ ವಾರ್ಷಿಕ ಗುರಿ ಇಡಲಾಗಿದೆ. ಈ ಪೈಕಿ ಎರಡು ತಿಂಗಳಲ್ಲಿ 7,086 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.11 ರಷ್ಟು ಹೆಚ್ಚಳವಾಗಿದೆ.

ಇನ್ನು ಮೋಟಾರು ವಾಹನ ತೆರಿಗೆ ಸಂಗ್ರಹದಲ್ಲೂ ಆರಂಭಿಕ ಎರಡು ತಿಂಗಳಲ್ಲಿ ಉತ್ತಮ ಪ್ರಗತಿ ಕಂಡಿದೆ. ಪ್ರಸಕ್ತ ಬಜೆಟ್‌ ವರ್ಷದಲ್ಲಿ 15,500 ಕೋಟಿ ರೂ. ವಾರ್ಷಿಕ ಗುರಿ ನಿಗದಿ ಮಾಡಲಾಗಿದೆ. ಈ ಪೈಕಿ ಎರಡು ತಿಂಗಳಲ್ಲಿ 2,226 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಎರಡು ತಿಂಗಳಲ್ಲಿ ಶೇ.16 ಏರಿಕೆಯಾಗಿದೆ.

ಮುದ್ರಾಂಕ ಮತ್ತು ನೋಂದಣಿ ಶುಲ್ಕ ಸಂಗ್ರಹದಲ್ಲಿ ರಾಜ್ಯ ಸರ್ಕಾರ ಎರಡು ತಿಂಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ಪ್ರಸಕ್ತ ಬಜೆಟ್‌ ವರ್ಷದಲ್ಲಿ 29,000 ಕೋಟಿ ರೂ. ವಾರ್ಷಿಕ ಗುರಿ ನಿಗದಿ ಮಾಡಲಾಗಿದೆ. ಈ ಪೈಕಿ ಎರಡು ತಿಂಗಳಲ್ಲಿ 4,717 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಎರಡು ತಿಂಗಳಲ್ಲಿ ಶೇ.33 ರಷ್ಟು ಅತ್ಯುತ್ತಮ ಪ್ರಗತಿ ಕಂಡಿದೆ.

ಸ್ವಂತ ತೆರಿಗೆಯೇತರ ರಾಜಸ್ವ ಸಂಗ್ರಹದಲ್ಲಿ ತೀವ್ರ ಕುಸಿತ :
ಈ ಬಾರಿ ಸ್ವಂತ ತೆರಿಗೆಯೇತರ ರಾಜಸ್ವ ಸಂಗ್ರಹದಲ್ಲಿ ತೀವ್ರ ಕುಸಿತ ಕಂಡಿದೆ. ಪ್ರಸಕ್ತ ಬಜೆಟ್‌ ವರ್ಷದಲ್ಲಿ 16,000 ಕೋಟಿ ರೂ. ಸ್ವಂತ ತೆರಿಗೆಯೇತರ ರಾಜಸ್ವ ಸಂಗ್ರಹದ ವಾರ್ಷಿಕ ಗುರಿ ನಿಗದಿ ಮಾಡಲಾಗಿದೆ.

ಆದರೆ ಕಳೆದ ಎರಡು ತಿಂಗಳಲ್ಲಿ 2,203 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ 16,500 ಕೋಟಿ ರೂ. ಸ್ವಂತ ತೆರಿಗೆಯೇತರ ರಾಜಸ್ವ ಸಂಗ್ರಹದ ವಾರ್ಷಿಕ ಗುರಿ ನಿಗದಿ ಮಾಡಲಾಗಿತ್ತು. ಆ ಪೈಕಿ ಆರಂಭದ ಎರಡು ತಿಂಗಳಲ್ಲೇ 4,839 ಕೋಟಿ ರೂ. ಸಂಗ್ರಹಿಸಲಾಗಿತ್ತು. ಅಂದರೆ ಪ್ರಸಕ್ತ ವರ್ಷದಲ್ಲಿ ಶೇ.54 ರಷ್ಟು ಸಂಗ್ರಹದಲ್ಲಿ ಕುಸಿತ ಕಂಡಿದೆ ಎಂದು ಆರ್ಥಿಕ ಇಲಾಖೆ ಅಂಕಿಅಂಶ ನೀಡಿದೆ.

RELATED ARTICLES

Latest News