Homeರಾಜ್ಯಸೊಂಟದ ಮೂಳೆ ಮುರಿತಕ್ಕೆ ಒಳಗಾಗಿದ್ದ 100ನೇ ವಯಸ್ಸಿನ ವೃದ್ಧೆಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಸೊಂಟದ ಮೂಳೆ ಮುರಿತಕ್ಕೆ ಒಳಗಾಗಿದ್ದ 100ನೇ ವಯಸ್ಸಿನ ವೃದ್ಧೆಗೆ ಯಶಸ್ವಿ ಶಸ್ತ್ರಚಿಕಿತ್ಸೆ

Successful surgery for 100-year-old man who suffered a hip fracture

ಬೆಂಗಳೂರು: ತೀವ್ರ ಸ್ವರೂಪದ ಸೊಂಟದ ಮೂಳೆ ಮುರಿತದಿಂದ ಶಾಶ್ವತವಾಗಿ ಹಾಸಿಗೆ ಹಿಡಿಯುವ ಆತಂಕದಲ್ಲಿದ್ದ 99 ವರ್ಷದ ವೃದ್ಧೆಯೊಬ್ಬರು, ಸಂಕೀರ್ಣ ಹಿಪ್ ರಿಪ್ಲೇಸ್‌ಮೆಂಟ್ ಶಸ್ತ್ರಚಿಕಿತ್ಸೆಯ ಬಳಿಕ ಅಚ್ಚರಿಯ ರೀತಿಯಲ್ಲಿ ಗುಣಮುಖರಾಗಿದ್ದಾರೆ.

ಯಲಹಂಕದಲ್ಲಿರುವ ಸ್ಪರ್ಶ್ ಆಸ್ಪತ್ರೆಯಲ್ಲಿ ನಡೆದ ಈ ಯಶಸ್ವಿ ಚಿಕಿತ್ಸೆಯ ಫಲವಾಗಿ, ಅವರು ತಮ್ಮ 100ನೇ ಹುಟ್ಟುಹಬ್ಬವನ್ನು ಸ್ವತಂತ್ರವಾಗಿ ನಡೆದಾಡುವ ಮೂಲಕ ಸಂಭ್ರಮಿಸಿದ್ದಾರೆ. ಇಳಿ ವಯಸ್ಸಿನಲ್ಲಿ ವೃದ್ಧೆಯ ಚೇತರಿಕೆಯು, ಸಕಾಲಿಕ ವೈದ್ಯಕೀಯ ನೆರವು ಮತ್ತು ಅತ್ಯಾಧುನಿಕ ಜೆರಿಯಾಟ್ರಿಕ್ ಕೇರ್ (ವೃದ್ಧಾಪ್ಯದ ಆರೈಕೆ) ಮೂಲಕ ಏನನ್ನು ಸಾಧಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.

ಲಕ್ಷ್ಮಿ ಭಾರ್ಗವ್ ಅವರು ತಮ್ಮ 99ನೇ ವಯಸ್ಸಿನಲ್ಲಿ ಎಡಭಾಗದ ಫೆಮೊರಲ್ ನೆಕ್ ಫ್ರ್ಯಾಕ್ಚರ್ ಮತ್ತು ಕಾಂಪ್ಲೆಕ್ಸ್ ಸಬ್‌ಟ್ರೊಕಾಂಟೆರಿಕ್ ಎಕ್ಸ್‌ಟೆನ್ಶನ್‌ನಿಂದ ಬಳಲುತ್ತಾ ಆಸ್ಪತ್ರೆಗೆ ದಾಖಲಾಗಿದ್ದರು. ವಯೋವೃದ್ಧರಲ್ಲಿ ಇಂತಹ ಅಸ್ಥಿರ ಗಾಯಗಳು ಭಾರೀ ಸವಾಲೊಡ್ಡುತ್ತವೆ. ಇಳಿ ವಯಸ್ಸಿನ ಜೊತೆಗೆ ದೀರ್ಘಕಾಲದ ಬ್ರಾಂಕಿಯಲ್ ಅಸ್ತಮಾ (ಉಬ್ಬಸ) ಕೂಡ ಇದ್ದುದರಿಂದ ಈ ಪ್ರಕರಣವು ವೈದ್ಯರಿಗೆ ಅತ್ಯಂತ ಹೈ-ರಿಸ್ಕ್ ಆಗಿತ್ತು.

ರೋಗಿಯ ಸಮಗ್ರ ಕ್ಲಿನಿಕಲ್ ಮೌಲ್ಯಮಾಪನದ ಬಳಿಕ, ಬಹುಶಿಸ್ತೀಯ ವೈದ್ಯರ ತಂಡವು ಅವರ ಆರೋಗ್ಯ ಸ್ಥಿತಿ, ಲಭ್ಯವಿರುವ ಚಿಕಿತ್ಸಾ ವಿಧಾನಗಳು, ಸಂಭವನೀಯ ಅಪಾಯ ಮತ್ತು ನಿರೀಕ್ಷಿತ ಫಲಿತಾಂಶಗಳ ಬಗ್ಗೆ ಕುಟುಂಬದವರೊಂದಿಗೆ ಸುದೀರ್ಘ ಚರ್ಚೆ ನಡೆಸಿತು. ಕುಟುಂಬದವರ ಒಪ್ಪಿಗೆ ಪಡೆದ ಬಳಿಕ, ಆರ್ಥೋಪೆಡಿಕ್ ವೈದ್ಯರ ತಂಡವು ಲಾಂಗ್-ಸ್ಟೆಮ್, ಡಿಸ್ಟಲ್-ಫಿಕ್ಸಿಂಗ್ ಬೈಪೋಲಾರ್ ಹೆಮಿಆರ್ಥ್ರೋಪ್ಲಾಸ್ಟಿ ಎಂಬ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿತು. ವಯಸ್ಸಿನ ಕಾರಣದಿಂದ ಮೂಳೆಯ ಗುಣಮಟ್ಟ ಕುಸಿದಿದ್ದರೂ, ಶಸ್ತ್ರಚಿಕಿತ್ಸೆಯ ಬಳಿಕ ವೃದ್ಧೆಯು ಯಾವುದೇ ಅಡೆತಡೆಗಳಿಲ್ಲದೆ ಚೇತರಿಸಿಕೊಂಡು ಕೇವಲ ಮೂರೇ ದಿನಗಳಲ್ಲಿ ಆಸ್ಪತ್ರೆಯಿಂದ ಸುರಕ್ಷಿತವಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಈ ಕುರಿತು ಸ್ಪರ್ಶ್ ಆಸ್ಪತ್ರೆಯ ಯಲಹಂಕ ಘಟಕದ ಹಿರಿಯ ಮೂಳೆ ಮತ್ತು ಕೀಲು ತಜ್ಞ ಡಾ. ವೇಣುಗೋಪಾಲ್ ಎನ್. ಮಾತನಾಡಿ, “99 ವರ್ಷದ ಹಾಗೂ ಬ್ರಾಂಕಿಯಲ್ ಆಸ್ತಮಾ ಸಮಸ್ಯೆ ಹೊಂದಿದ್ದ ರೋಗಿಗೆ ಇಂತಹ ಮುರಿತದ ಚಿಕಿತ್ಸೆ ನೀಡುವುದು ಅತ್ಯಂತ ಸವಾಲಿನ ಕೆಲಸ. ಈ ವಯಸ್ಸಿನಲ್ಲಿ ಮೂಳೆಯ ಗುಣಮಟ್ಟ ಸಾಕಷ್ಟು ಕುಸಿದಿರುತ್ತದೆ. ದೀರ್ಘಕಾಲ ಹಾಸಿಗೆಯಲ್ಲಿರುವುದು ಜೀವಕ್ಕೆ ಅಪಾಯಕಾರಿಯಾಗಬಹುದು. ಆದ್ದರಿಂದ ದುರ್ಬಲಗೊಂಡ ಮೂಳೆಯನ್ನು ಮೀರಿ ತೊಡೆಯ ಮೂಳೆಯ ಆಳದ ಭಾಗದಲ್ಲಿ ಇಂಪ್ಲಾಂಟ್ ಅನ್ನು ದೃಢವಾಗಿ ಅಳವಡಿಸುವ ಲಾಂಗ್-ಸ್ಟೆಮ್, ಡಿಸ್ಟಲ್-ಫಿಕ್ಸಿಂಗ್ ಬೈಪೋಲಾರ್ ವಿನ್ಯಾಸವನ್ನು ಬಳಸಲಾಯಿತು.

ಇದರಿಂದ ರೋಗಿಯು ಶಸ್ತ್ರಚಿಕಿತ್ಸೆಯ ನಂತರವೇ ಬಹುತೇಕ ತಕ್ಷಣ ತೂಕವನ್ನು ಹೊತ್ತು ನಡೆಯಲು ಸಾಧ್ಯವಾಯಿತು. 100ನೇ ವಯಸ್ಸಿನಲ್ಲೂ ಅವರು ಸ್ವತಂತ್ರವಾಗಿ ನಡೆಯುತ್ತಿರುವುದು ವಯೋವೃದ್ಧರ ಮೂಳೆ ಚಿಕಿತ್ಸೆಯಲ್ಲಿ ಆಧುನಿಕ ವೈದ್ಯಕೀಯ ಸಾಧಿಸಿರುವ ಯಶಸ್ಸಿಗೆ ಸಾಕ್ಷಿಯಾಗಿದೆ,” ಎಂದು ತಿಳಿಸಿದರು.

ಅರಿವಳಿಕೆ ಮತ್ತು ನೋವು ನಿರ್ವಹಣಾ ವಿಭಾಗದ ಮುಖ್ಯಸ್ಥ ಡಾ. ತಿರುನಾವುಕ್ಕರಸು ಶಿವರಾಮನ್ ಅವರು, ರೋಗಿಯ ವಯಸ್ಸು ಹಾಗೂ ಸಹ-ಅನಾರೋಗ್ಯಗಳನ್ನು ಗಮನದಲ್ಲಿಟ್ಟುಕೊಂಡು ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾದ ಅರಿವಳಿಕೆ ಚಿಕಿತ್ಸಾ ಯೋಜನೆಯನ್ನು ರೂಪಿಸಿದ್ದರು. ವಿಶೇಷ ನಿಗಾವಹಿಸುವಿಕೆ ಹಾಗೂ ಸುಧಾರಿತ ನೋವು ನಿರ್ವಹಣಾ ವಿಧಾನಗಳಿಂದ ಶಸ್ತ್ರಚಿಕಿತ್ಸೆ ಸುರಕ್ಷಿತವಾಗಿ ಪೂರ್ಣಗೊಂಡಿತು ಎಂದು ಆಸ್ಪತ್ರೆ ತಿಳಿಸಿದೆ.

ಸ್ಪರ್ಶ್ ಆಸ್ಪತ್ರೆ ಯಲಹಂಕ ಹಾಗೂ ಸರ್ಜಾಪುರ ರಸ್ತೆ ಘಟಕಗಳ ಕ್ಲಸ್ಟರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಭಿಷೇಕ್ ಥಾಮಸ್ ಮಾತನಾಡಿ, “ಸಂಕೀರ್ಣ ವೈದ್ಯಕೀಯ ಸೇವೆಗಳನ್ನೂ ರೋಗಿಗಳಿಗೆ ಸರಳ ಮತ್ತು ಸುರಕ್ಷಿತ ಅನುಭವವಾಗಿಸುವುದು ನಮ್ಮ ಉದ್ದೇಶ. ವಿವಿಧ ವಿಭಾಗಗಳ ತಜ್ಞರು ಒಟ್ಟಾಗಿ ಕಾರ್ಯನಿರ್ವಹಿಸುವ ಸಮಗ್ರ ಚಿಕಿತ್ಸಾ ವ್ಯವಸ್ಥೆಯಿಂದಲೇ ಇಂತಹ ಸಂಕೀರ್ಣ ಪ್ರಕರಣಗಳಲ್ಲಿಯೂ ರೋಗಿಗಳ ಚಲನಶೀಲತೆ, ಸ್ವಾವಲಂಬನೆ ಹಾಗೂ ಜೀವನದ ಗುಣಮಟ್ಟವನ್ನು ಮರುಸ್ಥಾಪಿಸಲು ಸಾಧ್ಯವಾಗುತ್ತಿದೆ,” ಎಂದು ಹೇಳಿದರು.

ಭಾರತದಲ್ಲಿ ವಯೋವೃದ್ಧರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಕೀರ್ಣ ಮೂಳೆ ಮುರಿತಗಳಿಗೆ ಸಮಯೋಚಿತ ಶಸ್ತ್ರಚಿಕಿತ್ಸೆ, ಬಹುಶಿಸ್ತೀಯ ವೈದ್ಯಕೀಯ ಆರೈಕೆ ಹಾಗೂ ಪರಿಣಾಮಕಾರಿ ಪುನರ್ವಸತಿ ಚಿಕಿತ್ಸೆಯ ಮೂಲಕ ಅತ್ಯಂತ ಹಿರಿಯ ವಯಸ್ಸಿನ ರೋಗಿಗಳಲ್ಲಿಯೂ ಚಲನಶೀಲತೆ ಮತ್ತು ಸ್ವಾವಲಂಬನೆಯನ್ನು ಮರಳಿ ನೀಡಲು ಸಾಧ್ಯ ಎಂಬುದನ್ನು ಈ ಪ್ರಕರಣ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಸ್ಪರ್ಶ್ ಆಸ್ಪತ್ರೆ ತಿಳಿಸಿದೆ.

RELATED ARTICLES

Latest News