ಬೆಂಗಳೂರು,ಜು.22- ನಾವು ಮಾಡಿದ್ದು ತಪ್ಪು. ಯಾರೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ. ಇನ್ನು ಮುಂದೆ ಯಾವತ್ತು ಇಂತಹ ತಪ್ಪು ಮಾಡುವುದಿಲ್ಲ ಎಂದು ನಿನ್ನೆ ಶಿವಾಜಿನಗರದಲ್ಲಿ ಫುಟ್‌ಪಾತ್ ತೆರವು ವೇಳೆ ಜಿಬಿಎ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳು ಇದೀಗ ಕೈಮುಗಿದು ಬೇಡಿಕೊಂಡಿದ್ದಾರೆ.
ಘಟನೆ ಬಳಿಕ ಪ್ರಕರಣ ದಾಖಲಿಸಿಕೊಂಡು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿ ಸೇರಿದಂತೆ 11 ಮಂದಿಯನ್ನು ಬಂಧಿಸಿದ್ದಾರೆ.ವಿಚಾರಣೆ ವೇಳೆ ಆರೋಪಿಗಳು ತಮ ತಪ್ಪಿನ ಅರಿವಾಗಿ ಈ ರೀತಿ ಮಾಡದಂತೆ ವಿನಂತಿಸಿಕೊಂಡಿದ್ದಾರೆ.
ಫುಟ್‌ಪಾತ್ ತೆರವು ಕಾರ್ಯಾಚರಣೆ ವೇಳೆ ದಾಳಿ ನಡೆಸಲು ಮುಂಚೆಯೇ ಸಂಚು ರೂಪಿಸಲಾಗಿತ್ತು ಎಂಬುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಪ್ರಮುಖ ಆರೋಪಿ ಬಸವರಾಜ್ ಪಡುಕೋಟೆ ಎಂಬಾತ ತನ್ನ ಚಾಲಕನ ಮೂಲಕ ಪೆಪ್ಪರ್ ಸ್ಟ್ರೇ ತರಿಸಿಕೊಂಡಿದ್ದುದು ತನಿಖೆಯಲ್ಲಿ ಗೊತ್ತಾಗಿದೆ.
ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿ ಬಸವರಾಜ್ ಪಡುಕೋಟೆ ಹಾಗೂ ಭರತ್, ಕೊಟ್ರೋಶ್ ,ಪರಶುರಾಮ್, ಬಸವರಾಜು,ರಾಘು,ರಾಜಣ್ಣ, ಪಾಪಣ್ಣ, ಮುಜಾಹಿದ್ ಮೊಹಮದ್,ಕಿರಣ್‌ನಾಯ್ಕ್ ಮತ್ತು ರಂಗಸ್ವಾಮಿ ಎಂಬಾತನನ್ನು ಬಂಧಿಸಿದ್ದು, ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.
ಇದರಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಸಾಧ್ಯತೆ ಇದ್ದು, ಘಟನಾ ಸ್ಥಳದಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಕೂಲಂಕುಶವಾಗಿ ಪರಿಶೀಲಿಸುತ್ತಿದ್ದು, ಇನ್ನೂ ಹಲವರನ್ನು ಬಂಧಿಸುವ ಸಾಧ್ಯತೆ ಇದೆ.ಫುಟ್‌ಪಾತ್ ತೆರವು ಕಾರ್ಯಾಚರಣೆ ವೇಳೆ ಜಿಬಿಎ ಅಧಿಕಾರಿಗಳ ಮೇಲೆ ದಾಳಿ ನಡೆಸುವ ಉದ್ದೇಶವಾದರೂ ಏನಿತ್ತು ಎಂಬುವುದರ ಬಗ್ಗೆಯೂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಘಟನೆ ಹಿನ್ನಲೆ:
ನಿನ್ನೆ ಶಿವಾಜಿನಗರದ ಅಟಲ್‌ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮುಂಭಾಗದ ಪಾದಚಾರಿ ಮಾರ್ಗದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ತೆರಳಿದ್ದ ಜಿಬಿಎ ಅಧಿಕಾರಿಗಳ ಮೇಲೆ ಏಕಾಏಕಿ ಗುಂಪು ದಾಳಿ ಮಾಡಿ ಪೆಪ್ಪರ್ ಸ್ಪ್ರೇ , ಖಾರದಪುಡಿ ಎರಚಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ ಕೈಗೆ ಸಿಕ್ಕಿದ ಕುರ್ಚಿ ಹಾಗೂ ಇನ್ನಿತರ ವಸ್ತುಗಳನ್ನು ತೆಗೆದುಕೊಂಡು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ನಡೆಸಿದ್ದರು.
