ಸಕಲೇಶಪುರ, ಸೆ.16- ಲಾಡ್ಜ್‌ವೊಂದರಲ್ಲಿ ಬೆಂಗಳೂರಿನ ಯುವತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಯುವತಿಯನ್ನು ಬೆಂಗಳೂರಿನ ನಾಗಸಂದ್ರ ನಿವಾಸಿ ವರ್ಷಾ (23) ಎಂದು ಗುರುತಿಸಲಾಗಿದೆ.
ಕಳೆದ ಶುಕ್ರವಾರ ವರ್ಷಾ ತನ್ನ ಬಾಯ್‌ಫ್ರೆಂಡ್ ರಘು ಹಾಗೂ ಸ್ನೇಹಿತ ದರ್ಶನ್ ಜೊತೆ ಸಕಲೇಶಪುರಕ್ಕೆ ಟ್ರಿಪ್ ಬಂದಿದ್ದರು. ಶನಿವಾರ, ಭಾನುವಾರ ಹಾಗೂ ಸೋಮವಾರ ಬೆಟ್ಟದ ಭೈರವೇಶ್ವರ, ಮಜಗಹಳ್ಳಿ ಫಾಲ್ಸ್ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಮೂವರು ಭೇಟಿ ನೀಡಿದ್ದರು. ನಂತರ ವಳಲಹಳ್ಳಿ ಕೂಡಿಗೆಯಲ್ಲಿರುವ ಲಾಡ್ಜ್‌ನಲ್ಲಿ ಒಂದೇ ಕೊಠಡಿಯಲ್ಲಿ ಮೂವರು ತಂಗಿದ್ದರು. ನಿನ್ನೆ ಸ್ನಾನಕ್ಕೆ ತೆರಳಿದ್ದ ವೇಳೆ ವರ್ಷಾ ಕುಸಿದು ಬಿದ್ದಿದ್ದಾಳೆ ಎನ್ನಲಾಗಿದೆ.
ತಕ್ಷಣ ರಘು ಹಾಗೂ ದರ್ಶನ್ ಅವರು ವರ್ಷಾಳನ್ನು ಸಕಲೇಶಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಆದರೆ, ವೈದ್ಯರು ಪರೀಕ್ಷಿಸಿದಾಗ ಯುವತಿ ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ವರ್ಷಾ ಸಾವಿಗೆ ನಿಖರ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ.
