Homeಬೆಂಗಳೂರುಒಂದೇ ಮಳೆಗೆ ಬ್ರ್ಯಾಂಡ್ ಬೆಂಗಳೂರು ಬಣ್ಣ ಬಯಲು, ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿರುವ ಜನ

ಒಂದೇ ಮಳೆಗೆ ಬ್ರ್ಯಾಂಡ್ ಬೆಂಗಳೂರು ಬಣ್ಣ ಬಯಲು, ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿರುವ ಜನ

ಬೆಂಗಳೂರು, ಸೆ.16- ಗಣೇಶ ಹಬ್ಬದ ಮರುದಿನ ಸುರಿದ ಭಾರಿ ಮಳೆ ಸಿಲಿಕಾನ್‌ ಸಿಟಿಯ ಬಣ್ಣ ಬಯಲು ಮಾಡಿದೆ.ಬಿಸಿಲಿನ ಬೇಗೆಯಲ್ಲಿ ಬೆಂದುಹೋಗಿದ್ದ ಬೆಂಗಳೂರಿಗೆ ವರುಣ ತಂಪೆರೆದರೂ, ತಡರಾತ್ರಿ ಸುರಿದ ಧಾರಾಕಾರ ಮಳೆ ನಗರದ ಮೂಲಸೌಕರ್ಯದ ನೈಜ ಸ್ಥಿತಿಯನ್ನು ಮತ್ತೊಮ್ಮೆ ಬಟಾಬಯಲು ಮಾಡಿದೆ.

ನಿನ್ನೆ ಸಂಜೆ ಸುಮಾರು 6.30ಕ್ಕೆ ಆರಂಭವಾದ ಮಳೆ ಮಧ್ಯರಾತ್ರಿಯವರೆಗೂ ಅಬ್ಬರಿಸಿದ್ದು, ಹಲವು ತಗ್ಗು ಪ್ರದೇಶಗಳು ಹಾಗೂ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಮತ್ತು ಸಾರ್ವಜನಿಕರು ಪರದಾಡುವಂತಾಯಿತು.

ನಗರದಲ್ಲಿ ಒಂದೇ ದಿನ ಸುಮಾರು 55 ಮಿ.ಮೀ. ಮಳೆಯಾಗಿದ್ದು, ಹಲವು ಪ್ರದೇಶಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದೆ. ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ವಸ್ತುಗಳು ನೀರಿನಲ್ಲಿ ಸಿಲುಕಿ ಹಾಳಾಗಿವೆ ಎಂದು ತಗ್ಗು ಪ್ರದೇಶದ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.ಕೆಲವೆಡೆ ಇಡೀ ರಾತ್ರಿ ಜನರು ನಿದ್ದೆಯಿಲ್ಲದೆ ನೀರು ಹೊರಹಾಕುವ ಕೆಲಸ ಮಾಡಬೇಕಾಯಿತು.

ದೊಮ್ಮಲೂರಿನಲ್ಲಿ ಗೋಡೆ ಕುಸಿದು ಹಸುಗಳ ಸಾವು

ಮಳೆಯ ಅವಾಂತರಕ್ಕೆ ದೊಮ್ಮಲೂರಿನಲ್ಲಿ ಆರ್ಮಿ ಕಾಂಪೌಂಡ್‌ನ ಗೋಡೆ ಕುಸಿದು ಹಸುಗಳು ಮೃತಪಟ್ಟಿರುವ ಘಟನೆ ನಡೆದಿದೆ.ಮುನಿರಾಜು ಎಂಬುವವರಿಗೆ ಸೇರಿದ ಹಸು-ಕರುಗಳನ್ನು ಗೋಡೆ ಸಮೀಪ ಕಟ್ಟಲಾಗಿತ್ತು. ಗೋಡೆ ಕುಸಿದ ವೇಳೆ ನಾಲ್ಕು ಹಸುಗಳು ಹಾಗೂ ಒಂದು ಕರು ಮೃತಪಟ್ಟಿವೆ ಎಂದು ತಿಳಿದುಬಂದಿದೆ. ಹಸುಗಳಿಗೆ ಹಾಲು ಕರೆಯುತ್ತಿದ್ದ ವೇಳೆ ಘಟನೆ ನಡೆದಿದ್ದು, ಮುನಿರಾಜು ಅವರ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಆಂಬುಲೆನ್ಸ್‌ಗೂ ದಾರಿ ಕೊಡದ ಜಲಾವೃತ ರಸ್ತೆ

ಶಿವಾಜಿನಗರ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದವು. ನೀರು ತುಂಬಿದ್ದ ರಸ್ತೆಯಲ್ಲಿ ಆಂಬುಲೆನ್ಸ್‌ ಸಂಚಾರಕ್ಕೂ ತೊಂದರೆಯಾಗಿದ್ದು, ಪೊಲೀಸರು ನೆರವಿಗೆ ಧಾವಿಸಿ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಅನುವು ಮಾಡಿಕೊಟ್ಟ ಘಟನೆ ನಡೆದಿದೆ.

ಓಲ್ಡ್‌ ಏರ್‌ಪೋರ್ಟ್‌ ರಸ್ತೆಯಲ್ಲೂ ತಡರಾತ್ರಿ ಮಳೆ ನೀರು ರಸ್ತೆಯ ಮೇಲೆ ಹರಿದು ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ರಾಜಕಾಲುವೆ ನೀರು ರಸ್ತೆಗೆ ಹರಿದು ಬಂದ ಪರಿಣಾಮ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಸ್ಥಳಕ್ಕೆ ಬಂದ ಟ್ರಾಫಿಕ್‌ ಪೊಲೀಸರು ನೀರು ಹರಿದುಹೋಗುವಂತೆ ವ್ಯವಸ್ಥೆ ಮಾಡಿ, ಸಂಚಾರ ಸುಗಮಗೊಳಿಸಲು ಹರಸಾಹಸಪಟ್ಟರು.

ಇನ್ನೂ ಮೂರು ದಿನ ಮಳೆ

ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ನಗರದಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಮುಂದಿನ ಮೂರು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ವಾಹನ ಸವಾರರ ಆಕ್ರೋಶ

ಕಸ್ತೂರಿಬಾ ರಸ್ತೆಯಲ್ಲಿ ಬೃಹತ್‌ ಮರದ ಕೊಂಬೆ ರಸ್ತೆಗೆ ಉರುಳಿದ್ದರಿಂದ ಎಂಜಿ ರಸ್ತೆ, ವಿಧಾನಸೌಧ ಹಾಗೂ ಕಬ್ಬನ್‌ ಪಾರ್ಕ್‌ ಕಡೆಗೆ ತೆರಳುವ ವಾಹನ ಸವಾರರು ಪರದಾಡಿದರು.ಕೊಂಬೆ ಬಿದ್ದಿದ್ದರೂ ತೆರವು ಕಾರ್ಯಾಚರಣೆ ತಡವಾಗಿದ್ದಕ್ಕೆ ವಾಹನ ಸವಾರರು ಜಿಬಿಎ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾತ್ರಿ ಮಳೆ ಸುರಿದಾಗಲೇ ಕ್ರಮ ಕೈಗೊಳ್ಳಬೇಕಿತ್ತು. ಕೆಲಸಕ್ಕೆ ತೆರಳುವ ಸಮಯದಲ್ಲಿ ರಸ್ತೆ ಬಂದ್‌ ಮಾಡುವ ಪರಿಸ್ಥಿತಿ ಏಕೆ ಬರಬೇಕು? ಅಪಾಯಕಾರಿ ಮರದ ಬಗ್ಗೆ ಮುಂಚಿತವಾಗಿ ಮಾಹಿತಿ ಇರಲಿಲ್ಲವೇ? ಎಂದು ಪ್ರಶ್ನಿಸಿದರು.

ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮರ ಕತ್ತರಿಸುವ ಯಂತ್ರಗಳ ಮೂಲಕ ಬೃಹತ್‌ ಕೊಂಬೆಯನ್ನು ತೆರವುಗೊಳಿಸಿದರು. ಕಾರ್ಯಾಚರಣೆ ಹಿನ್ನೆಲೆಯಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗಿತ್ತು. ಕೊಂಬೆ ತೆರವು ಪೂರ್ಣಗೊಂಡ ಬಳಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಮಳೆ ತಂದ ಅವಾಂತರ

  • 55 ಮಿ.ಮೀ. – ನಗರದಲ್ಲಿ ಒಂದೇ ದಿನ ಸುರಿದ ಮಳೆ
  • 6.30ರಿಂದ ಬೆಳಗಿನ ಜಾವದವರೆಗೆ – ಹಲವು ಗಂಟೆಗಳ ಕಾಲ ಮಳೆ
  • 3 ದಿನ – ಮಳೆ ಮುಂದುವರಿಯುವ ಸಾಧ್ಯತೆ
  • ದೊಮ್ಮಲೂರು – ಗೋಡೆ ಕುಸಿದು ಹಸು-ಕರುಗಳ ಸಾವು
  • ಕಸ್ತೂರಿಬಾ ರಸ್ತೆ – ಬೃಹತ್‌ ಕೊಂಬೆ ಬಿದ್ದು ಸಂಚಾರಕ್ಕೆ ಅಡ್ಡಿ
  • ಶಿವಾಜಿನಗರ – ಜಲಾವೃತ ರಸ್ತೆಯಲ್ಲಿ ಆಂಬುಲೆನ್ಸ್‌ಗೆ ತೊಂದರೆ

ಅಧಿಕಾರಿಗಳಿಗೆ ಜಿಬಿಎ ಸೂಚನೆ

ಮಳೆಯ ಹಿನ್ನೆಲೆಯಲ್ಲಿ ಜಿಬಿಎ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಎಲ್ಲಾ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು, ತಗ್ಗು ಪ್ರದೇಶಗಳಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಯಾವುದೇ ಅನಾಹುತವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಮಳೆ ಸಂದರ್ಭದಲ್ಲಿ ಅಗತ್ಯವಿದ್ದರೆ ಅಂಡರ್‌ಪಾಸ್‌ಗಳನ್ನು ಮುಚ್ಚಬೇಕು. ಅರಣ್ಯ ಇಲಾಖೆಯ ಹೆಚ್ಚುವರಿ ಸಿಬ್ಬಂದಿಯನ್ನು ಕಾರ್ಯಾಚರಣೆಗೆ ಬಳಸಿಕೊಂಡು ಬಿದ್ದ ಮರಗಳು ಮತ್ತು ಕೊಂಬೆಗಳನ್ನು ತ್ವರಿತವಾಗಿ ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.

RELATED ARTICLES
spot_img

Latest News