ಬೆಂಗಳೂರು,ಸೆ.16- ರಾಜ್ಯ ರಾಜಕೀಯದಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ದಾಳಿ ತೀವ್ರಸಂಚಲನ ಮೂಡಿಸಿರುವ ಬೆನ್ನಲ್ಲೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 18 ಮತ್ತು 19ರಂದು ರಾಜ್ಯಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿ ರುವುದು ತೀವ್ರ ಕುತೂಹಲ ಮೂಡಿಸಿದೆ.
ಇತ್ತೀಚೆಗಷ್ಟೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಸಂಸ್ಥೆ ಹಾಗೂ ಆಪ್ತರ ಮೇಲೆ ಇ.ಡಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿರುವುದು ಆಡಳಿತ ಮತ್ತು ವಿಪಕ್ಷಗಳ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿತ್ತು. ಈ ತನಿಖೆಯ ಕಾವು ಇನ್ನೂ ತಣಿಯದಿರುವಾಗಲೇ, ಸತೀಶ್ ಜಾರಕಿಹೊಳಿ ಅವರ ತವರು ಹಾಗೂ ಬಲವಾದ ಹಿಡಿತವಿರುವ ಬೆಳಗಾವಿ ಜಿಲ್ಲೆಗೆ ಗೃಹ ಸಚಿವರೇ ನೇರವಾಗಿ ಆಗಮಿಸುತ್ತಿರುವುದು ಹಲವು ರಾಜಕೀಯ ಸಮೀಕರಣಗಳಿಗೆ ದಾರಿ ಮಾಡಿಕೊಟ್ಟಿದೆ.
ಸೆಪ್ಟೆಂಬರ್ 18 ರಾತ್ರಿ 10 ಗಂಟೆಗೆ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅಮಿತ್ ಶಾ ಅವರು ನಗರದ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.ಬೆಳಿಗ್ಗೆ ಹುಬ್ಬಳ್ಳಿಯ ಗಬ್ಬೂರು ಬೈಪಾಸ್ ಬಳಿ ನೂತನವಾಗಿ ನಿರ್ಮಿಸಲಾಗಿರುವ ಕೆ.ಎಲ್.ಇ ಸಂಸ್ಥೆಯ 1,500 ಹಾಸಿಗೆಗಳ ಅಲ್ಟ್ರಾ-ಮಾಡರ್ನ್ ಹೈಟೆಕ್ ಆಸ್ಪತ್ರೆ ಹಾಗೂ ನೂತನ ವೈದ್ಯಕೀಯ ಮಹಾವಿದ್ಯಾಲಯದ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮಕ್ಕೆ ಭೇಟಿ ನೀಡಲಿರುವ ಅವರು, ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಒಡೆತನದ ಬೀರೇಶ್ವರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.ಅಮಿತ್ ಶಾ ಅವರ ಈ ಭೇಟಿ ಕೇವಲ ಸಾಂಸ್ಥಿಕ ಉದ್ಘಾಟನೆಗಳಿಗಷ್ಟೇ ಸೀಮಿತವಾಗಿರದೆ, ಬೆಳಗಾವಿಯ ವಿಶಿಷ್ಟ ರಾಜಕೀಯ ಹಿನ್ನೆಲೆಯಿಂದಾಗಿ ಮಹತ್ವ ಪಡೆದುಕೊಂಡಿದೆ.
ಹಿಂದೆ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರು ಹಾಗೂ ಜೊಲ್ಲೆ ಕುಟುಂಬ ಒಂದಾಗಿ ಅಖಾಡಕ್ಕಿಳಿದಿದ್ದವು. ಜಾರಕಿಹೊಳಿ ಬ್ರದರ್ಸ್ ಬೆಂಬಲದೊಂದಿಗೇ ಅಣ್ಣಾಸಾಹೇಬ್ ಜೊಲ್ಲೆ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.ಇದೀಗ ಸತೀಶ್ ಜಾರಕಿಹೊಳಿ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಯ ಸರಣಿ ತನಿಖೆ ಚುರುಕುಗೊಂಡ ಬೆನ್ನಲ್ಲೇ, ಅವರದೇ ಕ್ಷೇತ್ರದಲ್ಲಿ ಬಿಜೆಪಿ ನಾಯಕರಾದ ಜೊಲ್ಲೆ ಕುಟುಂಬದ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗವಹಿಸುತ್ತಿರುವುದು ಕಾಂಗ್ರೆಸ್ ವಲಯದಲ್ಲಿ ತಳಮಳ ಸೃಷ್ಟಿಸಿದೆ.
ಈ ಪ್ರವಾಸದ ನೆಪದಲ್ಲಿ ಉತ್ತರ ಕರ್ನಾಟಕ ಭಾಗದ ಬಿಜೆಪಿ ನಾಯಕರನ್ನು ಅಮಿತ್ ಶಾ ಒಗ್ಗೂಡಿಸಲಿದ್ದು, ರಾಜ್ಯದ ಪ್ರಮುಖ ಬಿಜೆಪಿ ಮುಖಂಡರು ಈಗಾಗಲೇ ಹುಬ್ಬಳ್ಳಿಯಲ್ಲಿ ಬೀಡುಬಿಟ್ಟಿದ್ದಾರೆ. ಕೇಂದ್ರ ಗೃಹ ಸಚಿವರ ಕರ್ನಾಟಕ ಪ್ರವಾಸದ ಅಧಿಕೃತ ಕಾರ್ಯಕ್ರಮಗಳ ಕುರಿತು ಗೃಹ ಸಚಿವಾಲಯದ ಸೆಪ್ಟೆಂಬರ್‌ನ ಪ್ರಕಟಣೆಗಳಲ್ಲಿ ಇದುವರೆಗೆ ಸಂಪೂರ್ಣ ಪ್ರವಾಸದ ವಿವರ ಕಾಣಿಸದಿದ್ದರೂ, ಸೆಪ್ಟೆಂಬರ್ 7ರಂದು ಗೋವಾದಲ್ಲಿ ಪಶ್ಚಿಮ ವಲಯ ಮಂಡಳಿಯ ಸಭೆ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ಶಾ ಹಲವು ದಕ್ಷಿಣ ಭಾರತದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
