Homeರಾಜ್ಯಹಿಟ್‌ ಅಂಡ್‌ ರನ್‌ಗೆ ಇಬ್ಬರು ದುರ್ಮರಣ

ಹಿಟ್‌ ಅಂಡ್‌ ರನ್‌ಗೆ ಇಬ್ಬರು ದುರ್ಮರಣ

ಬೆಂಗಳೂರು,ನ.9-ಮುಂದೆ ಹೋಗುತ್ತಿದ್ದ ಬೈಕ್‌ಗೆ ಹಿಂದಿನಿಂದ ಅತಿ ವೇಗವಾಗಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಮೃತಪಟ್ಟಿರುವ ಘಟನೆ ವಿಜಯಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದೇವನಹಳ್ಳಿ ಪಟ್ಟಣದ ಮಿಥುನ್‌(38) ಮತ್ತು ಪ್ರದೀಪ್‌ಕುಮಾರ್‌ ಅಲಿಯಾಸ್‌‍ ಕನಕ (37) ಮೃತಪಟ್ಟ ದುರ್ದೈವಿಗಳು. ಇವರು ಹೆದ್ದಾರಿಯಲ್ಲಿರುವ ಡಾಬಾಗಳಿಗೆ ಮೊಟ್ಟೆ ಮತ್ತು ಚಿಕನ್‌ ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದರು.

ರಾತ್ರಿ ಮಿಥುನ್‌ ಮತ್ತು ಕನಕ ಬೈಕ್‌ನಲ್ಲಿ ಹೋಗುತ್ತಿದ್ದಾಗ ಬೆಂಗಳೂರು-ಚಿಕ್ಕಬಳ್ಳಾಪುರ ರಸ್ತೆಯ ಮುಕ್ತಿ ಡಾಬಾ ಬಳಿ ಈ ಅಪಘಾತ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಅವರಿಬ್ಬರೂ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.

ಅಪಘಾತ ಎಸೆಗಿದ ಚಾಲಕ ಕಾರನ್ನು ನಿಲ್ಲಿಸದೇ ಚಾಲನೆ ಮಾಡಿಕೊಂಡು ಹೋಗಿದ್ದಾನೆ.
ಸುದ್ದಿ ತಿಳಿದು ವಿಜಯಪುರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಅಪಘಾತ ಸ್ಥಳದಲ್ಲಿ ಕಾರಿನ ನಂಬರ್‌ ಪ್ಲೇಟ್‌ ಬಿದ್ದಿರುವುದು ಕಂಡು ಬಂದಿದೆ.ಇಬ್ಬರು ಯುವಕರ ಮೃತದೇಹಗಳನ್ನು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.

ಈ ನಂಬರ್‌ ಪ್ಲೇಟ್‌ ಆಧರಿಸಿ ಪೊಲೀಸರು ಕಾರು ಹಾಗೂ ಚಾಲಕನ ಪತ್ತೆಗೆ ತನಿಖೆ ಕೈಗೊಂಡಾಗ ಈ ಕಾರು ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದುಕೊಂಡು ಹೋಗುತ್ತಿರುವ ಮಾಹಿತಿ ಲಭ್ಯವಾಗಿದೆ.

ತಕ್ಷಣ ಪೊಲೀಸರು ಕಾರ್ಯಪ್ರವೃತ್ತರಾಗಿ ಸಿನಿಮೀಯಾ ರೀತಿ ಕಾರನ್ನು ಹಿಂಬಾಲಿಸಿಕೊಂಡು ಹೋಗಿ ಕಾರು ನಿಲ್ಲಿಸುವಂತೆ ಅಡ್ಡ ಹಾಕಿದರೂ ಚಾಲಕ ನಿಲ್ಲಿಸದೇ ಅತಿ ವೇಗವಾಗಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಬೆನ್ನಟ್ಟಿ ಕೊನೆಗೂ ಕಾರನ್ನು ನಿಲ್ಲಿಸಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಚಾಲಕನನ್ನು ಕಾರಿನಿಂದ ಹೊರಗೆ ಕರೆತಂದು ಪರಿಶೀಲಿಸಿದಾಗ ಚಾಲಕ ಮದ್ಯ ಸೇವಿಸಿರುವುದು ಕಂಡು ಬಂದಿದೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾರನ್ನು ವಶಪಡಿಸಿಕೊಂಡು ಚಾಲಕನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News