-ಶಾಂದಾರ್
ಬೆಂಗಳೂರು,ಜೂ.23- ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದ ವೇಗದ ಬೆಳವಣಿಗೆಯು ವಿಶ್ವದಾದ್ಯಂತ ಎಐ ಪಾರ್ಕ್ಗಳು ಹಾಗೂ ತಂತ್ರಜ್ಞಾನ ಕೇಂದ್ರಗಳ ಸ್ಥಾಪನೆ ಹೆಚ್ಚಾಗುತ್ತಿದೆ. ಈಗ ಅದು ಕೈ ಮೀರಿ ಹೋಗುತ್ತಿದೆ. ಆದರೆ ಇದರಿಂದಾಗುವ ಅನಾಹುತ ನಿರೀಕ್ಷಿಸಲೂ ಅಸಾಧ್ಯ. ಇಂತಹ ಎಐ ಹಬ್ ಅಥವಾ ಟೆಕ್ ಪಾರ್ಕ್ಗಳನ್ನು ನಿರ್ಮಿಸಲು ಅತ್ಯಾಧುನಿಕ ಕಂಪ್ಯೂಟಿಂಗ್ ಮೂಲಸೌಕರ್ಯ, ಭಾರಿ ವಿದ್ಯುತ್ ವ್ಯವಸ್ಥೆ, ಅಪಾರ ಪ್ರಮಾಣದ ನೀರು, ಸೌಲಭ್ಯಗಳು ಮತ್ತು ಬಲಿಷ್ಠ ಪರಿಸರ ವ್ಯವಸ್ಥೆ ಅತ್ಯಂತ ಅಗತ್ಯವಾಗಿವೆ.
ಪ್ರಸ್ತುತ ಬಿಡದಿ ಬಳಿ ಆರಂಭಿಸಲು ಉದ್ದೇಶಿಸಿರುವ ಎಐ ಹಬ್ ಇದನ್ನೆಲ್ಲಾ ಪೂರೈಸಬಲ್ಲದೆ ಎಂಬ ಪ್ರಶ್ನೆ ಎದುರಾಗಿದ್ದು ಸಾಮಾಜಿಕ ಕಳಕಳಿಯೂ ಕೂಡ ಮುಖ್ಯಎಂದು ತಜ್ಞರು ಎಚ್ಚರಿಸಿದ್ದಾರೆ.ಎಐ ಪಾರ್ಕ್ನ ಹೃದಯಭಾಗವೇ ಅದರ ಡೇಟಾ ಸೆಂಟರ್ಗಳು. ಸಾವಿರಾರು ಜಿಪಿಯು ಮತ್ತು ಟಿಪಿಯು ಪ್ರೊಸೆಸರ್ಗಳನ್ನು ಹೊಂದಿರುವ ಹೆಚ್ಚಿನ ಸಾಮರ್ಥ್ಯದ ಸರ್ವರ್ ವ್ಯವಸ್ಥೆಗಳು ಅಗತ್ಯವಾಗುತ್ತವೆ ಅವುಗಳನ್ನು ಕೂಲ್ ಮಾಡಲು ಅಪಾರ ನೀರು ಬೇಕಾಗುತ್ತದೆ.ಅದು ಕೂಡ ಕಡಿಯುವ ನೀರಿನಷ್ಟು ಶುದ್ದವಾಗಿರಬೇಕು. ಇದರಿಂದ ಕೃಷಿ ಮತ್ತು ಅಕ್ಕಪಕ್ಕದ ಗ್ರಾಮದ ಜನರಿಗೆ ನೀರಿನ ಬವಣೆ ಎದುರಾಗಲಿದೆ.
ಅಂದಾಜಿನ ಪ್ರಕಾರ ಪ್ರತಿಯೊಂದು 40ರಿಂದ 50 ಚಾಟ್ ಪ್ರಶ್ನೆಗಳಿಗೆ ಐನೂರು ಮಿ.ಲೀಟರ್ ನೀರು ಬಳಕೆಯಾಗುತ್ತದೆ. ಇದನ್ನು ನೀವು ಅಂದಾಜಿಸಿದರೆ ಕೋಟ್ಯಂತರ ಜನ ಇದನ್ನು ಬಳಸುತ್ತಾರೆ. ಇದಕ್ಕೆ ಬೇಕಾದಷ್ಟು ನೀರು ವ್ಯಯವಾಗುವ ಪ್ರಮಾಣವನ್ನು ನೀವು ನಿರೀಕ್ಷಿಸಬಹುದು.
ಪ್ರಸ್ತುತ ಬಿಡದಿ ವ್ಯಾಪ್ತಿಯಲ್ಲಿ ನೀರಿನ ಮೂಲಗಳನ್ನು ನಾವು ನೋಡಿದರೆ ಕಾವೇರಿ ನೀರು ಸಿಗಬಹುದು ಆದರೆ ಪ್ರಸ್ತುತ ಇಲ್ಲಿ ಈಗಾಗಲೇ ಮೇಕೆದಾಟು ಅಣೆಕಟ್ಟಿಗಾಗಿ ನೆರೆಯ ತಮಿಳುನಾಡು ಕೆಂಡ ಕಾರುತ್ತಿದೆ. ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಒಂದು ಕಡೆಯಾದರೆ ಎಐ ಹಬ್ ಸೃಷ್ಟಿಯಾದರೆ ನೀರು ಯಾರಿಗೆ ಸೇರುತ್ತದೆ ಎಂಬುದು ಈಗ ದೊಡ್ಡ ಪ್ರಶ್ನೆಯಾಗುತ್ತದೆ.
ವಿದ್ಯುತ್ ಮತ್ತು ಉಪಯುಕ್ತ ಸೇವೆಗಳು :
ಎಐ ಡೇಟಾ ಸೆಂಟರ್ಗಳು ಅಪಾರ ಪ್ರಮಾಣದ ವಿದ್ಯುತ್ ಬಳಕೆ ಮಾಡುತ್ತವೆ. ಆದ್ದರಿಂದ ನಿರಂತರ ವಿದ್ಯುತ್ ಪೂರೈಕೆ ಅತ್ಯಗತ್ಯ. ಪ್ರಸ್ಯತ 20 ಮೆಗಾವ್ಯಾಟ್ನಿಂದ 100 ಮೆಗಾವ್ಯಾಟ್ಗಿಂತಲೂ ಹೆಚ್ಚಿನ ವಿದ್ಯುತ್ ಸಾಮರ್ಥ್ಯ ಬೇಕಾಗುತ್ತದೆ. ಆದರೆ ಅದನ್ನು ಪಡೆಯವ ವಿಧಾನ ಕೂಡ ಮುಖ್ಯವಾಗಿದ್ದು ಇದೇ ಇಲ್ಲಿ ಪ್ರಮುಖ ಸವಾಲಾಗಿದೆ.
ಉಳಿದಂತೆ ಸೌರ, ಪವನ ಅಥವಾ ಇತರ ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆ ಮಾಡಬಹುದಾದರೂ ಸ್ಥಳೀಯ ವಿದ್ಯುತ್ ಗ್ರಿಡ್ಗಳನ್ನು ಒತ್ತಡಕ್ಕೊಳಪಡಿಸುತ್ತದೆ. ಇಲ್ಲಿ ಉತ್ಪಾದನೆಯಾಗುವ ಇ-ತ್ಯಾಜ್ಯ ವಿಶೇಷವಾಗಿ ಎಐ ಎಲೆಕ್ಟ್ರಾನಿಕ್ ತ್ಯಾಜ್ಯ ವಿಲೇವಾರಿ ಕೂಡ ಅಪಾಯಕಾರಿ ಸನ್ನಿವೇಶ ಸೃಷ್ಟಿಸುತ್ತದೆ. ಇದನ್ನು ಸರಿಯಾಗಿ ನಿರ್ವಹಿಸದಿದ್ದರೆ ಪರಿಸರ ವ್ಯವಸ್ಥೆಗೆ ಅಪಾಯವಿದೆ.
ಇದಲ್ಲದೆ ಯುಪಿಎಸ್ ಮತ್ತು ಬ್ಯಾಕಪ್ ಜನರೇಟರ್ ವ್ಯವಸ್ಥೆಗಳು ಬೇಕಾಗುತ್ತದೆ ಇದರಿಂದ ಸತ್ತಲಿನ ವಾತಾವರಣ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ.ಈಗಾಗಲೇ ಹವಾಮಾನ ವೈಪರಿತ್ಯ ಹೆಚ್ಚುತ್ತಿದೆ. ಇಂಗಾಲ ಹೊರಸೂಸುವಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭೂಮಿಯ ಹಸಿರುಮನೆಗೆ ಹಾನಿಯಾಗುತ್ತದೆ. ಇದರಿಂದ ಮಾನವ ಸಂಕುಲಕ್ಕೆ ಅಪಾಯ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಇದರ ನಡುವೆ ಭಾರೀ ಸರ್ವರ್ಗಳ ತೂಕ ತಡೆಯುವ ಬಲಿಷ್ಠ ಕಟ್ಟಡಗಳು, ಸ್ಟಾರ್ಟ್ಅಪ್ಗಳು ಮತ್ತು ಸಂಶೋಧಕರಿಗೆ ಸಹ-ಕಾರ್ಯ ಸ್ಥಳಗಳು, ನಾವೀನ್ಯತೆ ಪ್ರಯೋಗಾಲಯಗಳು ಹಾಗೂ ತರಬೇತಿ ಕೇಂದ್ರಗಳು, ಬಹು-ಹಂತದ ಭದ್ರತಾ ವ್ಯವಸ್ಥೆಗಳು ಸೇರಿದಂತೆ ಹಲವು ಆಧುನಿಕ ಸೇವೆಗಳು ಸೃಷ್ಟಿಸಬೇಕಿದೆ.
ಇನ್ನು ಎಐ ಪಾರ್ಕ್ ಯಶಸ್ಸಿಗೆ ಕೇವಲ ತಂತ್ರಜ್ಞಾನವಷ್ಟೇ ಸಾಕಾಗುವುದಿಲ್ಲ, ಮಾನವ ಸಂಪನೂಲವೂ ಪ್ರಮುಖ ಪಾತ್ರ ವಹಿಸುತ್ತದೆ. ಐಐಟಿ, ಐಐಎಸ್ಸಿ, ಐಐಐಟಿ ಮುಂತಾದ ಉನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಗಳೊಂದಿಗೆ ಸಹಭಾಗಿತ್ವ, ಸ್ಟಾರ್ಟ್ಅಪ್ ಇನ್ಕ್ಯುಬೇಷನ್ ಕೇಂದ್ರಗಳು, ವೆಂಚರ್ ಕ್ಯಾಪಿಟಲ್ ಮತ್ತು ಹೂಡಿಕೆದಾರರ ಬೆಂಬಲ ಕಾನೂನು, ಪೇಟೆಂಟ್ ಹಾಗೂ ಬೌದ್ಧಿಕ ಆಸ್ತಿ ಸಲಹಾ ಸೇವೆಗಳು ಬೇಕಾಗುತ್ತದೆ. ಎಐ ಅಭಿವೃದ್ಧಿಯಲ್ಲಿ ಸುರಕ್ಷತೆ ಮತ್ತು ನೈತಿಕತೆ ಪ್ರಮುಖವಾಗಿರುವುದರಿಂದ ಸ್ಪಷ್ಟ ನಿಯಂತ್ರಣದ ವ್ಯವಸ್ಥೆ ಅತ್ಯಗತ್ಯ.
ಡೇಟಾ ಗೌಪ್ಯತೆ ಮತ್ತು ಭದ್ರತಾ ಮಾನದಂಡಗಳು, ಎಐ ಸುರಕ್ಷತಾ ಮಾರ್ಗಸೂಚಿಗಳು ಮತ್ತು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ನಿಯಮಾವಳಿಗಳ ಅನುಸರಣೆ ಮಾಡಬೇಕಿರುವುದರಿಂದ ಅನುಷ್ಠಾನದಲ್ಲಿ ಹಲವು ಅಡೆತಡೆಗಳು ಎದುರಾಗುತ್ತವೆ. ಇದೇನೆ ಇದ್ದರೂ ಇಷ್ಟು ದೊಡ್ಡ ಕಾರ್ಯಯೋಜನೆಗೆ ಅಪಾರ ನೀರು, ವಿದ್ಯತ್ ಜೊತೆ ಪರಿಸರ ರಕ್ಷಣೆ ದೊಡ್ಡ ಸವಾಲಾಗಿದೆ. ಇವೆಲ್ಲವನ್ನು ಗಮನಿಸಿದರೆ ಇದನ್ನು ಕಾರ್ಯಗತಗೊಳಿಸುವುದು ಅಷ್ಟು ಸುಲಭವಲ್ಲ. ಎಐ ಹಬ್ಗಳು ಹೋಗಿ ಗೋದಾಮಗಳು ಸೃಷ್ಷಿಯಾದರೂ ಅಚ್ಚರಿ ಪಡಬೇಕಾಗಿಲ್ಲ.
