ಮೈಸೂರು, ಸೆ.26- ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026 ರ ಗಜಪಡೆಗೆ ಮೂರನೇ ಹಂತದ ಮರದ ಅಂಬಾರಿ ತಾಲೀಮು ಆರಂಭವಾಗಿದೆ.ನಿನ್ನೆಯಿಂದ ಆನೆಗಳಿಗೆ ಮರದ ಅಂಬಾರಿ ಹೊರಿಸಿ ತಾಲೀಮು ನೀಡಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.
ಮೊದಲ ದಿನ ಮಹೇಂದ್ರ ಆನೆಗೆ ಮರದ ಅಂಬಾರಿ ಕಟ್ಟಿ ತಾಲೀಮು ನೀಡಲು ಸಿದ್ಧತೆ ಮಾಡಲಾಗಿತ್ತು.ಆದರೆ ಮರದ ಅಂಬಾರಿಯ ಕೆಳಭಾಗದ ಹಾಸಿಗೆ ಮತ್ತು ಹತ್ತಿಯ ಹಗ್ಗಗಳು ಒ್ದೆಯಾಗಿ ಭಾರವಾಗಿರುವ ಕಾರಣ, ಆನೆಗೆ ಅಸೌಕರ್ಯ ಮತ್ತು ಬಿಗಿತ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಆನೆಯ ಆರಾಮ ಮತ್ತು ಸುರಕ್ಷತೆಯ ದಷ್ಟಿಯಿಂದ ಇಂದಿನ ಮರದ ಅಂಬಾರಿ ತಾಲೀಮನ್ನು ಮುಂದೂಡಲಾಗಿದೆ.
ತಾಲೀಮಿನ ಪರಿಷ್ಕೃತ ದಿನಾಂಕ ಮತ್ತು ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.ಚಿನ್ನದ ಅಂಬಾರಿ ರೇಸ್ನಲ್ಲಿ 5 ಆನೆಗಳು: ಈ ಬಾರಿ ಚಿನ್ನದ ಅಂಬಾರಿ ಹೊರುವ ರೇಸ್ನಲ್ಲಿ ಪ್ರಶಾಂತ, ಧನಂಜಯ, ಮಹೇಂದ್ರ, ಸುಗ್ರೀವ ಮತ್ತು ಏಕಲವ್ಯ ಸೇರಿದಂತೆ ಐದು ಆನೆಗಳಿವೆ.
ಈ ಎಲ್ಲಾ ಆನೆಗಳಿಗೂ ಹಂತ ಹಂತವಾಗಿ ಮರದ ಅಂಬಾರಿ ತಾಲೀಮು ನೀಡಲಾಗುತ್ತಿದೆ. ಗಜಪಡೆಯ ಎಲ್ಲಾ ಆನೆಗಳ ಆರೋಗ್ಯ ಸ್ಥಿತಿ ಉತ್ತಮವಾಗಿದೆ. ಜಂಬೂಸವಾರಿಯ ಪ್ರಮುಖ ಆನೆ ಅಭಿಮನ್ಯು ಅ. 5 ರಂದು ಮೈಸೂರಿಗೆ ಆಗಮಿಸಲಿದ್ದಾನೆ ಎಂದು ಡಿಸಿಎಫ್ ಪ್ರಭುಗೌಡ ತಿಳಿಸಿದ್ದಾರೆ.
