ಹಾರೋಹಳ್ಳಿ, ಜೂ.3- ಸರಕಾರಿ ಆಸ್ಪತ್ರೆಯ ಮಹಿಳಾ ಶೌಚಾಲಯದಲ್ಲಿ ಕ್ಯಾಮೆರಾ ಇಟ್ಟು ವಿಡಿಯೋ ಚಿತ್ರೀಕರಿಸುತ್ತಿದ್ದ ಸಿಬ್ಬಂದಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಸಿಕ್ಕಿಬಿದ್ದ ಯುವಕ ಅದೇ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಆತನಿಗೆ ಗ್ರಾಮಸ್ಥರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಹಾರೋಹಳ್ಳಿ ತಾಲೂಕಿನ ತೋಕಸಂದ್ರ ಗ್ರಾಮದ ಸರಕಾರಿ ಆಸ್ಪತ್ರೆಯ ಕಥೆ ಇದಾಗಿದ್ದು, ಕ್ಯಾಮೆರಾ ಇಟ್ಟು ಸಿಕ್ಕಿಬಿದ್ದ ಸಿಬ್ಬಂದಿ ತೋಕಸಂದ್ರ ಗ್ರಾಮದ ಸುನೀಲ್(ಶ್ರೀಧರ್) ಎಂದು ಗುರುತಿಸಲಾಗಿದೆ.ಈತ ಕಳೆದ 5 ವರ್ಷದಿಂದಲೂ ಇದೇ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾನೆ.
ಏನಿದು ಘಟನೆ :
ತೋಕಸಂದ್ರ ಸರಕಾರಿ ಆಸ್ಪತ್ರೆಗೆ ಮಹಿಳೆಯೊಬ್ಬರು ಅನಾರೋಗ್ಯದಿಂದ ಬಂದಿದ್ದಾರೆ ಈ ವೇಳೆ ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದ ಸುನೀಲ್(ಶ್ರೀಧರ್) ಮಹಿಳೆಗೆ ಮೂತ್ರ ಪರೀಕ್ಷೆಗಾಗಿ ಮೂತ್ರ ನೀಡುವಂತೆ ಹೇಳಿದ್ದಾನೆ. ಈ ವೇಳೆ ಶೌಚಕ್ಕೆ ತೆರಳಿದ ಮಹಿಳೆ ನೀರು ಬರುತ್ತಿಲ್ಲ ಎಂದು ಸುಲೀಲ್ ಬಳಿ ಹೇಳಿದ್ದಾರೆ. ಪರೀಕ್ಷಿಸುತ್ತೇನೆ ಎಂದು ಒಳಹೋದ ಸುನೀಲ್(ಶ್ರೀಧರ್) ನೀರು ಬರುತ್ತಿದೆ ಎಂದು ಮಹಿಳೆಯನ್ನು ಪುನಃ ಶೌಚದ ಒಳಗೆ ಕಳುಹಿಸಿದ್ದಾನೆ.
ಒಳಹೋದ ಮಹಿಳೆಗೆ ಕಪ್ಪು ಬಣ್ಣದ ಚಿಕ್ಕ ವಸ್ತುವೊಂದು ಕಂಡಿದ್ದು ಅನುಮಾನಗೊಂಡ ಮಹಿಳೆ ತನ್ನ ಪತಿಗೆ ತಿಳಿಸಿದ್ದಾರೆ. ಶೌಚಕ್ಕೆ ಓಡೋಡಿ ಹೋದ ಮಹಿಳೆಯ ಪತಿ, ಇದೇನಿದು ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಸುನೀಲ್(ಶ್ರೀಧರ್) ಕ್ಯಾಮೆರಾವನ್ನು ಸ್ಥಳದಲ್ಲಿಯೇ ಹೊಡೆದುಹಾಕಿದ್ದಾನೆ. ಇದರಿಂದ ಕುಪಿತಗೊಂಡ ಸ್ಥಳೀಯರು ಸುನೀಲ್ಗೆ ಧರ್ಮದೇಟು ನೀಡಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸಂಬಧ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದು ತನಿಖೆಯ ನಂತರವಷ್ಟೇ ಸತ್ಯಾಸತ್ಯತೆ ಹೊರಬರಬೇಕಿದೆ.
