Saturday, April 27, 2024
Homeರಾಜಕೀಯಮೋದಿ 'ವೀಕ್' ಪ್ರಧಾನಿ ಎಂದ ಸಿದ್ದರಾಮಯ್ಯಗೆ ಬಿಜೆಪಿ ತಿರುಗೇಟು

ಮೋದಿ ‘ವೀಕ್’ ಪ್ರಧಾನಿ ಎಂದ ಸಿದ್ದರಾಮಯ್ಯಗೆ ಬಿಜೆಪಿ ತಿರುಗೇಟು

ಬೆಂಗಳೂರು,ಮಾ.20- ಅಧಿಕಾರಕ್ಕೆ ಬಂದು ಎಂಟು ತಿಂಗಳು ತುಂಬುವ ಒಳಗೆ ಕರ್ನಾಟಕಕ್ಕೆ ಅತಿ ಹೆಚ್ಚು ಸಾಲ ಮಾಡಿರುವ ರಾಜ್ಯ ಎಂಬ ಕಳಂಕ ತಂದ ಸಿದ್ದರಾಮಯ್ಯನವರೇ ನೀವು ಹೇಗೆ ಸ್ಟ್ರಾಂಗ್ ಮುಖ್ಯಮಂತ್ರಿ ಎಂದು ಬಿಜೆಪಿ ಪ್ರಶ್ನಿಸಿದೆ. ನಾನು ಸ್ಟ್ರಾಂಗ್ ಮುಖ್ಯಮಂತ್ರಿ.

ನರೇಂದ್ರಮೋದಿ ಅವರು ವೀಕ್ ಪ್ರಧಾನಮಂತ್ರಿ ಎಂಬ ಸಿದ್ದರಾಮಯ್ಯನವರ ಆರೋಪಕ್ಕೆ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಬಿಜೆಪಿ, ಬಿಡಿಗಾಸು ಅನುದಾನ ಬರುತ್ತಿಲ್ಲವೆಂದು ಶಾಸಕ-ಸಚಿವರುಗಳಿಂದ ಪ್ರತಿನಿತ್ಯ ಬೈಗುಳದ ಮಂಗಳಾರತಿ ಮಾಡಿಸಿಕೊಂಡಿರುವ ನೀವು ಸ್ಟ್ರಾಂಗ್ ಮುಖ್ಯಮಂತ್ರಿ ಎಂದು ವ್ಯಂಗ್ಯ ಮಾಡಿದೆ.

ತಾನು ಹೇಳಿದ ಅಧಿಕಾರಿಗಳನ್ನು ವರ್ಗಾವಣೆ ಮಾಡಿಲ್ಲವೆಂದು ನಿಮ್ಮ ಪುತ್ರ ರತ್ನನೇ ನಿಮಗೆ ಹಲೋ ಅಪ್ಪಾ ಎಂದು ಆವಾಜ್ ಹಾಕಿದ್ದು ಮರೆತು ಬಿಟ್ಟಿದ್ದೀರಾ ಎಂದು ಪ್ರಶ್ನಿಸಿದೆ. ಪ್ರಮಾಣವಚನ ಸ್ವೀಕರಿಸಿದ ತಿಂಗಳೊಳಗೆ ಶಾಸಕನಿಂದ ನಿಮ್ಮ ಆಡಳಿತದ ವಿರುದ್ಧ ಬಹಿರಂಗ ಪತ್ರ, ಮುಖ್ಯಮಂತ್ರಿಯಾಗಿ ಎರಡು ತಿಂಗಳು ತುಂಬುವ ಮುನ್ನವೇ ನಿಮ್ಮ ಕುರ್ಚಿಯ ವ್ಯಾಲಿಡಿಟಿ ಕೇವಲ ಚುನಾವಣೆವರೆಗೂ ಮಾತ್ರ ಎಂಬುದು ನಿಮ್ಮ ಶಾಸಕರಿಂದಲೇ ಬಹಿರಂಗ ಮಾಡಿರುವುದು ನೀವು ಸ್ಟ್ರಾಂಗ್ ಮುಖ್ಯಮಂತ್ರಿ ಎಂಬುದಕ್ಕೆ ನೀಡಿರುವ ಪ್ರಮಾಣಪತ್ರ ಎಂದು ಕುಹುಕವಾಡಿದೆ.

ಅಧಿಕಾರ ಸ್ವೀಕರಿಸಿ ಆರು ತಿಂಗಳು ತುಂಬುವ ಮುನ್ನವೇ 692 ರೈತರ ಆತ್ಮಹತ್ಯೆಯಾಗಿದೆ. ನಿಮ್ಮ ಅಮಾಯಕ ಬ್ರದರ್ಸ್‍ಗಳಿಂದ ಎಲ್ಲೆಂದರಲ್ಲಿ ಗಲಭೆ, ಬಾಂಬ್ ಬ್ಲಾಸ್ಟ್ , ಮಹಿಳೆಯರ ಮೇಲೆ ಹಾಡಹಗಲೇ ಹಲ್ಲೆ, ಗ್ಯಾಂಗ್ ರೇಪ್ ನಡೆದಿರುವುದು ನಿಮ್ಮ ಸ್ಟ್ರಾಂಗ್ ನಾಯಕತ್ವಕ್ಕೆ ಹಿಡಿದ ಕೈಗನ್ನಡಿ ಎಂದು ತಿರುಗೇಟು ಕೊಟ್ಟಿದೆ.

ಈಗ ಹೇಳಿ ಇಷ್ಟೆಲ್ಲಾ ಅಪಭ್ರಂಶಗಳ ನಡುವೆಯೂ ನಿಮ್ಮನ್ನು ನೀವು ಸ್ಟ್ರಾಂಗ್ ಸಿಎಂ ಎಂದು ಕರೆದುಕೊಂಡರೆ ಅದು ನಿಮ್ಮ ಬೆನ್ನು ನೀವೇ ತಟ್ಟಿಕೊಂಡಂತೆಯೇ ಹೊರತು ಬೇರೆನೂ ಅಲ್ಲ ಎಂದು ಬಿಜೆಪಿ ಸಾಲು ಸಾಲು ಟ್ವೀಟ್ ಮೂಲಕ ಸಿದ್ದರಾಮಯ್ಯನವರವ ವಿರುದ್ದ ವಾಗ್ಬಾಣ ಬಿಟ್ಟಿದೆ.

RELATED ARTICLES

Latest News