Monday, September 16, 2024
Homeರಾಜ್ಯಕಸ್ತೂರಿ ರಂಗನ್‌ ವರದಿಗೆ ತೀವ್ರ ಆಕ್ಷೇಪ : ಮಲೆನಾಡು ಭಾಗದಲ್ಲಿ ಜನಜಾಗೃತಿ

ಕಸ್ತೂರಿ ರಂಗನ್‌ ವರದಿಗೆ ತೀವ್ರ ಆಕ್ಷೇಪ : ಮಲೆನಾಡು ಭಾಗದಲ್ಲಿ ಜನಜಾಗೃತಿ

Kasturi Rangan's Report

ಚಿಕ್ಕಮಗಳೂರು, ಸೆ.3- ಕಸ್ತೂರಿ ರಂಗನ್‌ ವರದಿ ಆಧರಿಸಿ ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ವಲಯ ಘೋಷಣೆಗೆ ಸಂಬಂಧ 6ನೇ ಕರಡು ಅಧಿಸೂಚನೆಗೆ ತೀವ್ರ ಆಕ್ಷೇಪಣೆಗಳು ವ್ಯಕ್ತವಾಗಿವೆ.

13 ಆಕ್ಷೇಪಣೆಗಳಿಗೆ ಸಂಬಂಧಿಸಿ ದಂತೆ ಮಲೆನಾಡು ಜಿಲ್ಲಾ ವ್ಯಾಪ್ತಿಯಲ್ಲಿ ಕಾವೇರಿದ ಚರ್ಚೆ ನಡೆಯುತ್ತಿದೆ. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಸೇರಿದಂತೆ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಈವರೆಗಿನ ಸಂಬಂಧ ಮನೆಮನೆಗಳಿಗೆ ಅಧಿಸೂಚನೆಯ ಆಕ್ಷೇಪಣೆಗಳನ್ನು ತಲುಪಿಸಿ ಜಾಗೃತಿ ಮೂಡಿಸಲಾಗುತ್ತಿದೆ.

ಮಲೆನಾಡು ಕರಾವಳಿ ಜನಪರ ಒಕ್ಕೂಟದ ಪ್ರಧಾನ ಸಂಚಾಲಕರಾದ ಅನಿಲ್‌ ಹೊಸಕೊಪ್ಪ, ಪ್ರಧಾನ ಕಾರ್ಯದರ್ಶಿಯಾದ ಸುಧೀರ್‌ ಕುಮಾರ್‌ ಮುರೋಳ್ಳಿ ಅವರು ಅವೈಜ್ಞಾನಿಕ ಕಸ್ತೂರಿ ರಂಗನ್‌ ವರದಿಯನ್ನು ತಿರಸ್ಕರಿಸಿ ಸ್ಥಳೀಯ ಜನಪ್ರತಿನಿಧಿಗಳನ್ನು ಒಳಗೊಂಡ ಹೊಸ ಪರಿಣಿತಿ ತಂಡವನ್ನು ನೇಮಿಸಿ ವರದಿಯನ್ನು ಅಮೂಲಾಗ್ರವಾಗಿ ಪರಿಶೀಲಿಸಬೇಕೆಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವರಾದ ಭೂಪೇಂದ್ರ ಯಾದವ್‌ ಮತ್ತು ಅರಣ್ಯ ಇಲಾಖೆ ಕಾರ್ಯದರ್ಶಿಯವರಿಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ.

ವರದಿಗೆ ಸಂಬಂಧಿಸಿದಂತೆ ಕೆಳಕಂಡ ಆಕ್ಷೇಪಣೆಗಳನ್ನು ಉಲ್ಲೇಖಿಸಿದ್ದಾರೆ.
*ಕಸ್ತೂರಿ ರಂಗನ್‌ ವರದಿಯು ತೀವ್ರ ಅವೈಜ್ಞಾನಿಕವಾಗಿದ್ದು, ಸೆಟಲೈಟ್‌ ಚಿತ್ರಣದ ಆಧಾರದ ಮೇಲೆ ವಾಸ್ತವಿಕ ಮತ್ತು ನೈಜತೆಯ ಚಿತ್ರಣಕ್ಕೆ ವ್ಯತಿರಿಕ್ತವಾಗಿದೆ. ಸದರಿ ಸಮಿತಿಯು ಈ ಭಾಗಕ್ಕೆ ಭೇಟಿ ಕೊಡದೇ ವಾಸ್ತವ ಚಿತ್ರಣವನ್ನು ಅರಿಯದೇ ನೀಡಿದ ವರದಿಯಾಗಿರುತ್ತದೆ.
*ಈ ಭಾಗದ ಗ್ರಾಮಗಳ ಶೇ.20 ಕ್ಕಿಂತ ಹೆಚ್ಚು ಭೌಗೋಳಿಕ ಪ್ರದೇಶವನ್ನು ಜೀವವೈವಿಧ್ಯ ಪರಿಸರ ಸೂಕ್ಷ್ಮ ಪ್ರದೇಶವನ್ನಾಗಿ ಸೇರಿಸಲ್ಪಟ್ಟಿದೆ. ಇದು ಅವೈಜ್ಞಾನಿಕವಾಗಿರುತ್ತದೆ.
*ಘೋಷಿಸಿದ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಗ್ರಾಮ ಮಟ್ಟದ ಜನಾಭಿಪ್ರಾಯ ಅಥವಾ ಭೌತಿಕ ಸರ್ವೇ ಮಾಡಿ ವಿಷಯ ಸಂಗ್ರಹ ಮಾಡಿರುವುದಿಲ್ಲ.
*ಪಶ್ಚಿಮ ಘಟ್ಟ ಪ್ರದೇಶವನ್ನು ರಕ್ಷಣೆ ಹಾಗೂ ಸಂರಕ್ಷಿಸಲು ಅಸ್ತಿತ್ವದಲ್ಲಿರುವ ಕಾನೂನು, ನೀತಿ-ನಿಯಮ ಇರುವುದರಿಂದ ಹೊಸಮಾನದಂಡದ ಅವಶ್ಯಕತೆ ಇರುವುದಿಲ್ಲ.


*ಸೂಕ್ಷ್ಮ ಪ್ರದೇಶ ಘೋಷಿಸಿರುವುದರಿಂದ ಗ್ರಾಮಸ್ಥರ ಮತ್ತು ಅರಣ್ಯವಾಸಿಗಳ ಜೀವನ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಆಗುವುದನ್ನು ಅವಲೋಕನ ತೆಗೆದುಕೊಂಡದ್ದು ಇರುವುದಿಲ್ಲ.
*ಈ ಭಾಗದ ಅಭಿವೃದ್ಧಿ ದಿಶೆಯಲ್ಲಿ ಪರಿಸರ ಸೂಕ್ಷ್ಮ ಘೋಷಣೆಯಿಂದ ಅಭಿವೃದ್ಧಿಗೆ ಮಾರಕವಾಗುವುದು. ಅಲ್ಲದೇ, ನೈಸರ್ಗಿಕ ಮತ್ತು ಮೂಲಭೂತ ಸೌಕರ್ಯದಿಂದ ವಂಚಿತವಾಗುತ್ತದೆ.
*ಉಪಗ್ರಹ ಆಧಾರಿತ ಸರ್ವೇ ಆಗಿರುವುದರಿಂದ ಅಡಿಕೆ, ತೆಂಗಿನ ತೋಟ, ಕಾಫಿ, ರಬ್ಬರ್‌ ಹಾಗೂ ಇನ್ನಿತರ ಕೃಷಿ ತೋಟಗಾರಿಕೆ ಬೆಳೆಗಳಿಂದ ಹಸಿರು ಪ್ರದೇಶವನ್ನು ಸಹಿತ ಅರಣ್ಯ ಪ್ರದೇಶವೆಂದು ಪರಿಗಣಿಸಿರುವುದು ನೈಸರ್ಗಿಕ ವಿರೋಧವಾದ ಕ್ರಮ.
*ಘೋಷಿಸಲ್ಪಟ್ಟ ಸೂಕ್ಷ್ಮ ಪ್ರದೇಶದಲ್ಲಿ ಹಸಿರುಕರಣದ ಪ್ರದೇಶದಿಂದ ಖಾಸಗಿ ಮತ್ತು ಅರಣ್ಯವಾಸಿಗಳ ತೋಟಗಾರಿಕೆ ಕೃಷಿ ಚಟುವಟಿಕೆಯ ಹಸಿರುಕರಣ ಪ್ರದೇಶವನ್ನು ಭೌತಿಕ ಸರ್ವೇ ಮೂಲಕ ನೈಸರ್ಗಿಕ ಅರಣ್ಯ ಗಡಿ ಗುರುತಿಸಿರುವುದಿಲ್ಲ.
*ಘೋಷಿಸಿದ ಹಳ್ಳಿ(ಗ್ರಾಮದ) ನಿರ್ದಿಷ್ಠ ಸರ್ವೇ ನಂಬರ್‌ ಪ್ರದೇಶ ವ್ಯಾಖ್ಯಾನಿಸದೇ ಇರುವುದು ಅವೈಜ್ಞಾನಿಕ.
*ಘೋಷಿಸಿದ ಪ್ರದೇಶದಲ್ಲಿ ನೈಸರ್ಗಿಕ ಮತ್ತು ಮಾನವ ಮೂಲ ಸೌಕರ್ಯದ ಮೂಲಭೂತ ಹಕ್ಕುಗಳಾದ ನೀರು, ರಸ್ತೆ ಅಭಿವೃದ್ಧಿ ಮುಂತಾದ ಹಲವಾರು ಪಾರಂಪರಿಕ ನಾಗರಿಕತೆಯ ಸೌಕರ್ಯ ಅವನತಿಗೆ ಕಾರ್ಯ ನಿರ್ಬಂಧನದಿಂದ ಮಾನವ ಹಕ್ಕುಗಳ ಜೀವನ ಹಕ್ಕು ಉಲ್ಲಂಘನೆ ಆಗುವುದು.
*ವರದಿಯು ಕೃಷಿ ಹಾಗೂ ತೋಟಗಾರಿಕೆ ಆಧಾರಿತ ಉದ್ಯಮಗಳ ಅಸ್ತಿತ್ವನ್ನು ನಿರ್ಲಕ್ಷಿಸಿದೆ.
*ಈ ಹಿಂದಿನ ಕರಡು ಅಧಿಸೂಚನೆಗೆ ರಾಜ್ಯಗಳು ಸಲ್ಲಿಸಿದ ತಕರಾರು ಮತ್ತು ಸಲಹೆಗಳ ಬಗ್ಗೆ ಪುನರ್‌ ಪರಿಶೀಲಿಸಲು ನಿವೃತ್ತ ಐ.ಎ.ಎಸ್‌‍. ಅಧಿಕಾರಿ ಸಂಜಯ್‌ ಕುಮಾರ್‌ ನೇತೃತ್ವದ ಸಮಿತಿಯು ಈ ಭಾಗದ ಯಾವುದೇ ಹಳ್ಳಿ ಪ್ರದೇಶಗಳಿಗೆ ಭೇಟಿ ಕೊಟ್ಟು ವಾಸ್ತವಿಕತೆಯನ್ನು ಅರಿತಿರುವುದಿಲ್ಲ ಎಂದು ತಮ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ.

RELATED ARTICLES

Latest News