ಬೆಂಗಳೂರು,ಏ.1- ತಂಬಾಕು ಸೇವನೆಯಿಂದ ಆಗುತ್ತಿರುವ ದುಷ್ಪರಿಣಾಮಗಳನ್ನು ತಡೆಗಟ್ಟುವ ಸಂಬಂಧ ತಂಬಾಕು ಮತ್ತು ಅದರ ಉತ್ಪನ್ನಗಳ ಮೇಲೆ ನಿರ್ಬಂಧ ಹಾಗೂ ನಿಷೇಧ ವಿಧಿಸುವ ಕುರಿತು ವರದಿ ನೀಡಲು ರಚಿತವಾಗಿರುವ ವಿಧಾನಸಭೆಯ ಅರ್ಜಿ ಸಮಿತಿಯ ಉಪಸಮಿತಿಯ ಅವಧಿಯನ್ನು ಆರು ತಿಂಗಳ ಕಾಲ ವಿಸ್ತರಿಸಲಾಗಿದೆ.
ಅರ್ಜಿ ಸಮಿತಿಯ ಉಪಸಮಿತಿಯ ಅವಧಿಯನ್ನು ಮಾ.21ರಿಂದ 6 ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ವಿಧಾನಸಭೆಯ ಅಧಿಕೃತ ಪ್ರಕಟಣೆ ತಿಳಿಸಿದೆ.
ಕಳೆದ ಡಿ.21ರಂದು ಅರ್ಜಿ ಸಲ್ಲಿಕೆಯ ಉಪಸಮಿತಿಯನ್ನು ರಚಿಸಿ ಮೂರು ತಿಂಗಳ ಒಳಗೆ ವರದಿ ನೀಡಲು ಸೂಚಿಸಲಾಗಿತ್ತು. ತಂಬಾಕು ಉತ್ಪನ್ನಗಳ ಮೇಲೆ ನಿಬಂಧನೆ, ನಿರ್ಬಂಧ ಮತ್ತು ನಿಷೇಧ ವಿಸುವ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಿ ವರದಿ ನೀಡಲು ಈ ಉಪಸಮಿತಿಯನ್ನು ರಚಿಸಲಾಗಿತ್ತು.
ಸರ್ಕಾರದ ಕೆಲವು ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಇನ್ನು ಕೆಲವು ಇಲಾಖೆಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿ ವರದಿ ನೀಡಲು 6 ತಿಂಗಳ ಕಾಲಾವಕಾಶವನ್ನು ಉಪಸಮಿತಿ ಕೋರಿದ್ದ ಹಿನ್ನಲೆಯಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಉಪಸಮಿತಿ ಅವಧಿಯನ್ನು ವಿಸ್ತರಿಸಿದ್ದಾರೆ.