Sunday, April 28, 2024
Homeರಾಷ್ಟ್ರೀಯನಾಳೆಯೊಳಗೆ ಚುನಾವಣಾ ಬಾಂಡ್ ಬಹಿರಂಗಕ್ಕೆ SBIಗೆ ಸುಪ್ರೀಂ ಆದೇಶ

ನಾಳೆಯೊಳಗೆ ಚುನಾವಣಾ ಬಾಂಡ್ ಬಹಿರಂಗಕ್ಕೆ SBIಗೆ ಸುಪ್ರೀಂ ಆದೇಶ

ನವದೆಹಲಿ,ಮಾ.11- ಚುನಾವಣಾ ಬಾಂಡ್‍ಗಳ ವಿವರಗಳನ್ನು ನಾಳೆಯೇ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕೆಂದು ಸ್ಪಷ್ಟ ಆದೇಶ ನೀಡಿರುವ ಸುಪ್ರೀಂಕೋರ್ಟ್, ಮೂರು ವಾರಗಳ ಸಮಯಾವಕಾಶ ಕೋರಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪಂಚಪೀಠ , ಕಾಲಾವಕಾಶ ಕೋರಿ ಎಸ್‍ಬಿಐ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿ, ಭಾರತೀಯ ಚುನಾವಣಾ ಆಯೋಗಕ್ಕೆ ಮಾರ್ಚ್ 15ರೊಳಗೆ ತನ್ನ ಅಧಿಕೃತ ವೆಬ್‍ಸೈಟ್‍ನಲ್ಲಿ ವಿವರಗಳನ್ನು ಪ್ರಕಟಿಸಬೇಕು ಎಂದು ಹೇಳಿದೆ. ಕಳೆದ 26 ದಿನಗಳಲ್ಲಿ ನೀವು ಏನು ಮಾಡುತ್ತಿದ್ದಿರಿ? ನ್ಯಾಯಾಲಯದ ಆದೇಶದ ಬಗ್ಗೆ ನಿಮಗೆ ಗೌರವವಿಲ್ಲವೇ? ನೀವು ಚುನಾವಣಾ ಬಾಂಡ್‍ಗಳ ವಿವರಗಳನ್ನು ಬಹಿರಂಗಪಡಿಸಲು ಸಮಯ ಅವಕಾಶ ಕೋರಿದರೆ. ನಾವು ಇಲ್ಲಿಂದಲೇ ಆದೇಶ ನೀಡಬೇಕಾಗುತ್ತದೆ ಎಂದು ಅರ್ಜಿದಾರರ ಪರ ವಕೀಲರಿಗೆ ನ್ಯಾಯಾಲಯದ ಎಚ್ಚರಿಕೆಯನ್ನು ಕೊಟ್ಟಿತು.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್.ಗವಾಯಿ, ಜೆ.ಬಿ.ಪರ್ದಿವಾಲ ಹಾಗೂ ಮನೋಜ್ ಮಿರ್ಶ ಅವರನ್ನೊಳಗೊಂಡ ಪೀಠ ಎಸ್‍ಬಿಐ ಧೋರಣೆಯನ್ನು ತೀವ್ರವಾಗಿ ಖಂಡಿಸಿತು. ನೀವು 26 ದಿನ ಏನು ಮಾಡುತ್ತಿದ್ದೀರಿ? ನಿಮಗೆ ನೀಡಿರುವ ಸಮಯ ಅವಕಾಶ ಎರಡು ದಿನ ಇರುವಾಗ ಬಂದು ಅರ್ಜಿ ಹಾಕಿದ್ದೀರಿ. ನ್ಯಾಯಾಲಯದ ಬಗ್ಗೆ ನಿಮಗೆ ಗೌರವವಿದೆ ಎಂದು ಭಾವಿಸಿಕೊಳ್ಳುತ್ತೇವೆ. ಚುನಾವಣಾ ಬಾಂಡ್‍ಗಳ ವಿವರಗಳ ಬಗ್ಗೆ ಆದೇಶ ನೀಡಲು ನಮಗೆ ತುಂಬಾ ವಿಷಾದವಿದೆ.

ಚುನಾವಣಾ ಆಯೋಗ ಮಾ.15ರ ಸಂಜೆ 5 ಗಂಟೆಯೊಳಗೆ ಯಾವ ಯಾವ ರಾಜಕೀಯ ಪಕ್ಷಗಳು ಎಷ್ಟೆಷ್ಟು ಚುನಾವಣಾ ಬಾಂಡ್‍ಗಳನ್ನು ಪಡೆದುಕೊಂಡಿವೆ ಎಂಬುದನ್ನು ಬಹಿರಂಗಪಡಿಸಬೇಕು. ಎರಡು ವಿಭಾಗಗಳಲ್ಲಿ ಮಾಹಿತಿ ನೀಡಬೇಕು ಎಂದು ನ್ಯಾಯಪೀಠ ಸೂಚನೆ ನೀಡಿತು.

ಒಂದು ವಿಭಾಗದಲ್ಲಿ, ಚುನಾವಣೆ ಬಾಂಡ್‍ಗಳನ್ನು ಖರೀದಿಸಿ ದೇಣಿಗೆ ನೀಡಿದವರ ಮಾಹಿತಿ, ಹೆಸರು, ಅವರು ನೀಡಿದ ಮೊತ್ತದ ದಾಖಲೆ ಇರಬೇಕು. ಎರಡನೇ ವಿಭಾಗದಲ್ಲಿ ರಾಜಕೀಯ ಪಕ್ಷಗಳು ಬಾಂಡ್‍ಗಳ ಮೂಲಕ ದೇಣಿಗೆಯನ್ನು ನಗದೀಕರಣ ಮಾಡಿಕೊಂಡಿರುವ ಕುರಿತು ಮಾಹಿತಿ ಇರಬೇಕು ಎಂದು ಸೂಚಿಸಿದೆ. ಮಾರ್ಚ್ 6ರೊಳಗೆ ಚುನಾವಣಾ ಬಾಂಡ್ ಖರೀದಿಯ ಎಲ್ಲಾ ವಿವರಗಳನ್ನು ಚುನಾವಣಾ ಆಯೋಗಕ್ಕೆ ಒದಗಿಸುವಂತೆ ನೀಡಿರುವ ಹಿಂದಿನ ಆದೇಶವನ್ನು ಪಾಲಿಸದೆ ವಿಳಂಬ ಧೋರಣೆ ಅನುಸರಿಸಿದ್ದಕ್ಕಾಗಿ ಎಸ್‍ಬಿಐಯನ್ನು ಕಠಿಣ ಪದಗಳಲ್ಲಿ ತರಾಟೆಗೆ ತೆಗೆದುಕೊಂಡಿತು.

ಕಳೆದ ಫೆಬ್ರವರಿ 15ರಂದು ಸುಪ್ರೀಂಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು ಅಸಂವಿಧಾನಿಕ ಎಂದು ತೀರ್ಪು ನೀಡಿ ರದ್ದುಗೊಳಿಸಿತ್ತು. ಅಲ್ಲದೆ ಏಪ್ರಿಲ್ 12, 2019ರಿಂದ ಎಲ್ಲಾ ಚುನಾವಣಾ ಬಾಂಡ್ ಖರೀದಿಗಳ ವಿವರಗಳನ್ನು ಮಾ.6ರೊಳಗೆ ಚುನಾವಣಾ ಆಯೋಗಕ್ಕೆ ಒದಗಿಸುವಂತೆ ಎಸ್‍ಬಿಐಗೆ ನಿರ್ದೇಶನ ನೀಡಿತು.ಈ ಎಲ್ಲ ವಿವರಗಳನ್ನು ಕಲೆ ಹಾಕಿ ಮಾಹಿತಿ ಒದಗಿಸಲು ಸ್ವಲ್ಪ ಸಮಯಾವಕಾಶ ಬೇಕಾಗುತ್ತದೆ. ಹೀಗಾಗಿ ನಮಗೆ ಮೂರು ವಾರಗಳ ಕಾಲಾವಕಾಶ ನೀಡಬೇಕು ಎಂದು ಎಸ್‍ಬಿಐ ಪರ ವಕೀಲ ಹರೀಶ್ ಸಾಳ್ವೆ ಅರ್ಜಿಯಲ್ಲಿ ಮನವಿ ಮಾಡಿದರು.

ರಾಜಕೀಯ ಪಕ್ಷಗಳ ವಿವರಗಳು ಮತ್ತು ಪಕ್ಷಗಳು ಸ್ವೀಕರಿಸಿದ ಬಾಂಡ್‍ಗಳ ಸಂಖ್ಯೆಯನ್ನೂ ಸಹ ನೀಡಬೇಕು. 5 ವರ್ಷದಲ್ಲಿ 22 ಸಾವಿರಕ್ಕೂ ಅಕ ಚುನಾವಣಾ ಬಾಂಡ್‍ಗಳನ್ನು ಬಿಡುಗಡೆ ಮಾಡಲಾಗಿದ್ದು, ಚುನಾವಣಾ ಬಾಂಡ್‍ಗಳ ಕುರಿತ ಮಾಹಿತಿ ನೀಡಿಕೆಗೆ ಕೊಟ್ಟಿರುವ ಗಡುವನ್ನು ಮಾರ್ಚ್ 6ರಿಂದ ಜೂನ್ 30ರವರೆಗೆ ವಿಸ್ತರಿಸಿ ಎಂದು ಪಂಚಪೀಠಕ್ಕೆ ಕೋರಿಕೊಂಡರು. ಅಸೋಸಿಯೇಷನ್ ಫಾರ್ ಡೆಮೊಕ್ರಟಿಕ್ ರೀರ್ಫಾಮನ್ಸ್ ಪರವಾಗಿ ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಅವರು ಎಸ್‍ಬಿಐ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

ಎಸ್‍ಬಿಐ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ, ಪ್ರಕ್ರಿಯೆಯ ಅನಾಮಧೇಯ ಸ್ವರೂಪದಿಂದಾಗಿ ವಿಷಯದ ಸೂಕ್ಷ್ಮತೆಯನ್ನು ಉಲ್ಲೇಖಿಸಿ, ಎಲ್ಲಾ ಮಾಹಿತಿಯನ್ನು ಒಟ್ಟುಗೂಡಿಸಲು ಬ್ಯಾಂಕ್‍ಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ದಾನಿಗಳ ವಿವರಗಳನ್ನು ಅನಾಮಧೇಯತೆಗಾಗಿ ಗೊತ್ತುಪಡಿಸಿದ ಶಾಖೆಗಳಲ್ಲಿ ಮುಚ್ಚಿದ ಕವರ್‍ಗಳಲ್ಲಿ ಇರಿಸಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಈ ವೇಳೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು, ವಿವರಗಳನ್ನು ಮುಚ್ಚಿದ ಕವರ್‍ನಲ್ಲಿ ಇರಿಸಲಾಗಿದೆ ಮತ್ತು ಮುಂಬೈ ಶಾಖೆಗೆ ಸಲ್ಲಿಸಲಾಗಿದೆ ಎಂದು ನೀವು ಹೇಳುತ್ತೀರಿ. ನಮ್ಮ ನಿರ್ದೇಶನಗಳು ಮಾಹಿತಿಗೆ ಹೊಂದಿಕೆಯಾಗುವುದಿಲ್ಲ. ದಾನಿಗಳ ಸ್ಪಷ್ಟ ವಿವರಗಳನ್ನು ಎಸ್‍ಬಿಐ ಮಾತ್ರ ಬಹಿರಂಗಪಡಿಸಲು ನಾವು ಬಯಸಿದ್ದೇವೆ. ನೀವು ಏಕೆ ಕೋರ್ಟ್ ತೀರ್ಪನ್ನು ಅನುಸರಿಸುತ್ತಿಲ್ಲ? ಎಂದು ಮರುಪ್ರಶ್ನೆ ಮಾಡಿದರು.ನ್ಯಾಯಮೂರ್ತಿ ಜಸ್ಟಿಸ್ ಖನ್ನಾ ಅವರು, ಎಲ್ಲಾ ವಿವರಗಳು ಸೀಲ್ಡ್ ಕವರ್‍ನಲ್ಲಿವೆ ಮತ್ತು ನೀವು ಸೀಲ್ ಮಾಡಿದ ಕವರ್‍ನ್ನು ತೆರೆದು ವಿವರಗಳನ್ನು ನೀಡಬೇಕು ಎಂದು ನಿರ್ದೇಶನ ನೀಡಿದರು.

ತೀರ್ಪಿನ ಹಿನ್ನಲೆ:
ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡುವುದು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಕಳೆದ ಗುರುವಾರ ಐತಿಹಾಸಿಕ ತೀರ್ಪು ನೀಡಿ, ಇದು ಸಂವಿಧಾನದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮಾಹಿತಿಯ ಹಕ್ಕಿಗೆ ವಿರುದ್ಧವಾದುದು ಎಂದು ಹೇಳಿತ್ತು. ಸರಳವಾಗಿ ಹೇಳುವುದಾದರೆ, ಚುನಾವಣಾ ಬಾಂಡ್ ಎಂದರೆ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಒಂದು ಸಾಧನ. 2017-18ರ ಬಜೆಟ್‍ನಲ್ಲಿ ಇದನ್ನು ಪರಿಚಯಿಸಲಾಗಿತ್ತು.

ಚುನಾವಣಾ ಬಾಂಡ್ ಎಂದರೆ ಪ್ರಾಮ್‍ಸರಿ ನೋಟ್‍ನ ಸ್ವರೂಪದಲ್ಲಿ ನೀಡಲಾದ ಬಾಂಡ್. ಇದರಲ್ಲಿ ಖರೀದಿದಾರ ಅಥವಾ ಪಾವತಿದಾರನ ಹೆಸರು ಇರುವುದಿಲ್ಲ. ಯಾವುದೇ ಮಾಲೀಕತ್ವದ ಮಾಹಿತಿಯನ್ನೂ ದಾಖಲಿಸಿರುವುದಿಲ್ಲ. ಇದನ್ನು ಹೊಂದಿರುವವರು (ಅಂದರೆ ರಾಜಕೀಯ ಪಕ್ಷ) ಇದರ ಮಾಲೀಕರೆಂದು ಪರಿಗಣಿಸಲಾಗುತ್ತದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್ರ್ಸ್ ವಿವರಿಸುತ್ತದೆ.

ಈ ಯೋಜನೆಯಡಿ ದೇಶದ ಪ್ರಜೆಗಳು ಅಥವಾ ಕಂಪನಿಗಳು 1 ಸಾವಿರ, 10 ಸಾವಿರ, 1 ಲಕ್ಷ, 10 ಲಕ್ಷ ರೂ. ಹಾಗೂ 1 ಕೋಟಿಯ ಅಪವರ್ತನದಲ್ಲಿ ರಾಜಕೀಯ ಪಕ್ಷಗಳಿಂದ ಬಾಂಡ್‍ಗಳನ್ನು ಖರೀದಿ ಮಾಡಬಹುದಿತ್ತು.ಚುನಾವಣಾ ಆಯೋಗದ ದತ್ತಾಂಶದ ಪ್ರಕಾರ, 2018 ಹಾಗೂ ಮಾರ್ಚ್ 2023ರ ನಡುವೆ ಈ ಬಾಂಡ್‍ಗಳ ಮೂಲಕ ಸಲ್ಲಿಸಲಾದ ದೇಣಿಗೆಯ ಶೇ.57ರಷ್ಟು ಬಿಜೆಪಿ ಪಾಲಾಗಿದೆ. 5,271 ಕೋಟಿಯಷ್ಟು ದೇಣಿಗೆ ಚುನಾವಣಾ ಬಾಂಡ್ ಮೂಲಕ ಬಿಜೆಪಿಗೆ ಹರಿದುಬಂದಿದೆ. ಎರಡನೇ ಸ್ಥಾನದಲ್ಲಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 952 ಕೋಟಿ ದೇಣಿಗೆ ಈ ಮೂಲಕ ಪಡೆದಿದೆ.

ಕೋರ್ಟ್ ಕದ ತಟ್ಟಿದ್ದು ಯಾರು?:
ಚುನಾವಣಾ ಬಾಂಡ್ ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ಎ.ಡಿ.ಆರ್. ಹಾಗೂ ಕಾಮನ್ ಕಾಸ್ ಎನ್ನುವ ಎರಡು ಸೇವಾ ಸಂಸ್ಥೆಗಳು ಹಾಗೂ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾಕ್ರ್ಸ್‍ವಾದ) ಸುಪ್ರೀಂ ಕೋರ್ಟ್‍ನಲ್ಲಿ 2018ರಲ್ಲಿ ಎರಡು ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಿದ್ದವು.

RELATED ARTICLES

Latest News