Friday, November 22, 2024
Homeರಾಜ್ಯಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿಕೆಶಿಗೆ ಬಿಗ್ ರಿಲೀಫ್

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿಕೆಶಿಗೆ ಬಿಗ್ ರಿಲೀಫ್

ನವದೆಹಲಿ,ಮಾ.5- ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಕರ್ನಾಟಕದ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಜಾರಿನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ದಾಖಲಿಸಿದ್ದ ಪ್ರಕರಣವನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ. ನ್ಯಾಯಾಲಯದ ಈ ತೀರ್ಪಿನಿಂದ ಡಿ.ಕೆ.ಶಿವಕುಮಾರ್ ಅವರಿಗೆ ಕಾನೂನು ಹೋರಾಟದಲ್ಲಿ ದೊಡ್ಡ ಗೆಲುವು ತಂದುಕೊಟ್ಟಂತಾಗಿದೆ.

ಇಡಿ ಅಧಿಕಾರಿಗಳು ತಮ್ಮ ವಿರುದ್ಧ ದಾಖಲಿಸಿದ್ದ 120ಬಿ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಸುದೀರ್ಘ ವಾದ-ವಿವಾದವನ್ನು ಆಲಿಸಿದ್ದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನೊಳಗೊಂಡ ಏಕಸದಸ್ಯ ಪೀಠ ಇಡಿ ದಾಖಲಿಸಿದ್ದ ದೂರನ್ನು ರದ್ದುಗೊಳಿಸಿ ವಿಚಾರಣೆಗೆ ತಡೆ ನೀಡಿತು.

ಡಿ.ಕೆ.ಶಿವಕುಮಾರ್ ಅವರ ದೆಹಲಿ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಸಮನ್ಸ್ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಡಿಕೆಶಿ ವಿರುದ್ದ ಸೆಕ್ಷನ್ 120ಬಿ ಆರೋಪವಿದೆ. ಇದರ ಜತೆಗೆ ಮತ್ತೊಂದು ಅಧಿಸೂಚಿತ ಕೇಸ್ ಇರಬೇಕೆಂದಿಲ್ಲ ಎಂದು ಹೈಕೋರ್ಟ್ ಹೇಳಿತ್ತು. ದೆಹಲಿಯ ಡಿಕೆಶಿ ಹಾಗೂ ಆಪ್ತರ ನಿವಾಸಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದ ಸಮಯದಲ್ಲಿ ಸುಮಾರು 8.59 ಕೋಟಿ ರೂ. ಹಣ ಜಪ್ತಿ ಮಾಡಲಾಗಿತ್ತು.

ಈ ಹಣ ಅಕ್ರಮವೋ ಅಥವಾ ಸಕ್ರಮವೋ ಎಂಬ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸಬೇಕಿತ್ತು.
ಈ ಕುರಿತು ತನಿಖೆ ನಡೆಸುವ ಸಲುವಾಗಿ ಇಡಿ ನೀಡಿದ್ದ ಸಮನ್ಸ್ ವಿರುದ್ಧ ಡಿ.ಕೆ. ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಈ ಹಣ ತನಿಖೆಗೆ ಯೋಗ್ಯ ಎಂದು ಹೈಕೋರ್ಟ್ ಹೇಳಿತ್ತು.

RELATED ARTICLES

Latest News