ಚೆನ್ನೈ,ಜೂ.22- ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ವಿಷಕಾರಿ ಮದ್ಯ ಸೇವಿಸಿದ ಪ್ರಕರಣದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 55ಕ್ಕೇ ಏರಿಕೆಯಾಗಿದ್ದು, ಕನಿಷ್ಠ 88 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತಪಟ್ಟವರಲ್ಲಿ ಬಹುತೇಕ ಮಂದಿ ಕರುಣಾಪುರಂ ಪ್ರದೇಶದವರು. ದುರಂತದಲ್ಲಿ ಮೂವರು ಅಪ್ರಾಪ್ತ ಮಕ್ಕಳು ತಮ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಒಡಹುಟ್ಟಿದವರು ಈಗ ಅನಿಶ್ಚಿತ ಭವಿಷ್ಯದತ್ತ ನೋಡುತ್ತಿದ್ದಾರೆ. ಅವರನ್ನು ಹೇಗೆ ನೋಡಿಕೊಳ್ಳಬೇಕೆಂದು ನನಗೆ ತಿಳಿದಿಲ್ಲ ಎಂದು ಅವರ ಅಜ್ಜಿ ತಿಳಿಸಿದ್ದಾರೆ.
ಮಗನನ್ನು ಕಳೆದುಕೊಂಡ ಮಹಿಳೆಯೊಬ್ಬರು, ಬಡವರ ಭವಿಷ್ಯ ಹಾಳು ಮಾಡುತ್ತಿರುವ ಮದ್ಯ ಮಾರಾಟವನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.ಮತ್ತೊಬ್ಬ ತಾಯಿ, ನನ್ನ ಮಗನಿಗೆ ವಿಪರೀತ ಹೊಟ್ಟೆನೋವು ಕಾಣಿಸಿಕೊಂಡಿತು, ಅವನಿಗೆ ಕಣ್ಣು ಕಾಣುವುದಿಲ್ಲ ಮತ್ತು ಕಿವಿಗಳು ಕೇಳುವುದಿಲ್ಲ ಏನು ಮಾಡುವುದು ಎಂದು ತಲೆ ಮೇಲೆ ಕೈ ಹೊತ್ತಿ ಕುಳಿತಿದ್ದಾರೆ.
ಕಳ್ಳಭಟ್ಟಿ ದುರಂತದ ಹಿನ್ನೆಲೆಯಲ್ಲಿ ಪೊಲೀಸರು ನಾಲ್ವರು ಶಂಕಿತ ಕಾಳಧನಿಕರನ್ನು ಬಂಧಿಸಿದ್ದು, 10 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.ವಿಷಕಾರಿ ಮದ್ಯ ಸೇವನೆಯಿಂದ ಈ ಸಾವುಗಳು ಸಂಭವಿಸಿವೆ ಎಂದು ದಢಪಡಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಸರ್ಕಾರವು ಜಿಲ್ಲಾ ಪೊಲೀಸ್ ಮುಖ್ಯಸ್ಥ ಸಮಯ್ ಸಿಂಗ್ ಮೀನಾ ಅವರನ್ನು ಅಮಾನತುಗೊಳಿಸಿದೆ ಮತ್ತು ಅವರ ಸ್ಥಾನಕ್ಕೆ ರಜತ್ ಚತುರ್ವೇದಿ ಅವರನ್ನು ನೇಮಿಸಿದೆ. ಜಿಲ್ಲಾಧಿಕಾರಿ ಶ್ರವಣ್ ಕುಮಾರ್ ಜಾತಾವತ್ ಅವರ ಸ್ಥಾನಕ್ಕೆ ಎಂಎಸ್ ಪ್ರಶಾಂತ್ ಅವರನ್ನು ನೇಮಿಸಲಾಗಿದೆ.
ನಿಷೇಧಾಜ್ಞೆ ಜಾರಿ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಶ್ರೇಣಿಯ ಅಧಿಕಾರಿ, ಮೂವರು ಇನ್‌್ಸಪೆಕ್ಟರ್‌ಗಳು ಮತ್ತು ಅನೇಕ ಸಬ್‌ಇನ್‌ಸ್ಪೆಕ್ಟರ್‌ಗಳನ್ನು ಸಹ ಅಮಾನತುಗೊಳಿಸಲಾಗಿದೆ. ವಿಷಕಾರಿ ಮದ್ಯ ದುರಂತದ ತನಿಖೆಯನ್ನು ರಾಜ್ಯ ಸರ್ಕಾರವು ಸಿಬಿ-ಸಿಐಡಿಗೆ ವರ್ಗಾಯಿಸಿದೆ.
ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಎಕ್ಸ್ ನಲ್ಲಿನ ಪೋಸ್ಟ್‌ನಲ್ಲಿ ಜೀವಹಾನಿಯ ಬಗ್ಗೆ ಆಘಾತ ಮತ್ತು ನೋವನ್ನು ಅನುಭವಿಸಿದ್ದಾರೆ ಎಂದು ಹೇಳಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನು ತಡೆಯಲು ವಿಫಲರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಎಲ್ಲರ ವಿರುದ್ಧವೂ ಶಿಸ್ತುಕ್ರಮ ಮಾಡುತ್ತೇವೆ.
ಅಂತಹ ದುಷ್ಕರ್ಮಿಗಳ ಬಗ್ಗೆ ಸಾರ್ವಜನಿಕರು ದೂರು ನೀಡಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಮದ್ರಾಸ್ ಹೈಕೋರ್ಟಿನ ನಿವತ್ತ ನ್ಯಾಯಾಧೀಶ ನ್ಯಾಯಮೂರ್ತಿ ಬಿ ಗೋಕುಲದಾಸ್ ಅವರಿಂದ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಮತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ.