Friday, September 20, 2024
Homeರಾಜ್ಯಟಿಬಿ ಡ್ಯಾಂ 19ನೇ ಕ್ರಸ್ಟ್‌ಗೇಟ್‌ ದುರಸ್ತಿ ಕಾರ್ಯ ಮುಂದುವರಿಕೆ

ಟಿಬಿ ಡ್ಯಾಂ 19ನೇ ಕ್ರಸ್ಟ್‌ಗೇಟ್‌ ದುರಸ್ತಿ ಕಾರ್ಯ ಮುಂದುವರಿಕೆ

ಕೊಪ್ಪಳ,ಆ.16- ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್‌ ದುರಸ್ತಿ ಕಾರ್ಯ ಎರಡನೇ ದಿನ ಮುಂದುವರೆದಿದೆ.ನಿನ್ನೆ ಜಿಂದಾಲ್‌ನಿಂದ ತರಲಾಗಿದ್ದ 65 ಟನ್‌ ತೂಕದ ಸ್ಟಾಪ್‌ಲಾಗ್‌ ಗೇಟನ್ನು ಅಳವಡಿಸುವ ಮೊದಲ ದಿನದ ಕಾರ್ಯಾಚರಣೆ ನಿನ್ನೆ ರಾತ್ರಿ ಸ್ಥಗಿತಗೊಂಡಿತ್ತು. ಜಿಂದಾಲ್‌ ಸಂಸ್ಥೆ ರೂಪಿಸಿದ್ದ ಗೇಟ್‌ನ ಅಳತೆ ದೊಡ್ಡದಾಗಿತ್ತು. ಅದನ್ನು ಕೆಳಗಿಳಿಸಿದಾಗ ಸರಿಯಾಗಿ ಜೋಡಣೆಯಾಗದ ಹಿನ್ನೆಲೆಯಲ್ಲಿ ಮತ್ತೆ ಮೇಲಕ್ಕೆ ಎತ್ತಿ ದೊಡ್ಡದಾಗಿದ್ದ ಗೇಟನ್ನು ಕತ್ತರಿಸಿ ನಿಗದಿತ ಅಳತೆಗೆ ಸರಿಪಡಿಸಿ ವೆಲ್ಡಿಂಗ್‌ ಮಾಡಲಾಗಿದೆ.

ಇಂದು ಬೆಳಿಗ್ಗೆ 6 ಗಂಟೆಯಿಂದ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿದೆ.ನೂರಕ್ಕೂ ಹೆಚ್ಚು ಸಿಬ್ಬಂದಿಗಳು ಗೇಟ್‌ ಅಳವಡಿಕೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾರ್ಯಾಚರಣೆಗೆ ಅಡ್ಡಲಾಗಿರುವ ಅಣೆಕಟ್ಟಿನ ಮೇಲಿನ ಕಬ್ಬಿಣದ ಕಂಬಿಗಳನ್ನು ಕತ್ತರಿಸಲಾಗಿದೆ. ಜಲಾಶಯದಲ್ಲಿನ ನೀರಿನ ರಭಸ ತೀವ್ರವಾಗಿದ್ದು, ಅದರ ನಡುವೆಯೂ ಗೇಟ್‌ ಅಳವಡಿಸಲು ಪ್ರಯತ್ನಿಸಲಾಗುತ್ತಿದೆ.

ಜಲಾಶಯದ ತಡೆಗೋಡೆ ಧಾರಣ ಸಾಮರ್ಥ್ಯ ಆಧರಿಸಿ ಎರಡು ಕ್ರೇನ್‌ಗಳನ್ನು ತಂದು ನಿಲ್ಲಿಸಲಾಗಿದೆ. ಈಗಾಗಲೇ ಹೆಚ್ಚೂ ಕಡಿಮೆ 35 ಟಿಎಂಸಿ ನೀರು ಖಾಲಿಯಾಗಿದೆ. 72 ಟಿಎಂಸಿ ಯಷ್ಟು ನೀರು ಬಾಕಿ ಉಳಿದಿದೆ. ಇರುವ ನೀರನ್ನು ಉಳಿಸಿಕೊಳ್ಳಲು ಐದು ಹಂತದಲ್ಲಿ ಸ್ಟಾಪ್‌ಗೇಟ್‌ಗಳನ್ನು ಅಳವಡಿಸಲು ಪ್ರಯತ್ನಿಸಲಾಗುತ್ತಿದೆ.

ಜಿಂದಾಲ್‌ ಸಂಸ್ಥೆ ನಿರ್ಮಿಸಿದ್ದ ಗೇಟನ್ನು ನಿಗದಿತ ಅಳತೆಗೆ ಸರಿಪಡಿಸಿಕೊಂಡು ಕೆಳಗಿಳಿಸುವ ಕೆಲಸ ನಡೆದಿದೆ. ಉಳಿದಂತೆ ಕೊಪ್ಪಳದ ಹೊಸಹಳ್ಳಿಯ ಹಿಂದೂಸ್ಥಾನ್‌ ಎಂಜಿನಿಯರಿಂಗ್‌್ಸ ಮತ್ತು ಹೊಸಪೇಟೆಯ ನಾರಾಯಣ ಎಂಜಿನಿಯರ್‌ರ‍ಸ ಸಂಸ್ಥೆಯಿಂದ ಸೇರಿ ಒಟ್ಟು 3 ಗೇಟುಗಳನ್ನು ತರಿಸಲಾಗುತ್ತಿದ್ದು, 19ನೇ ಕ್ರಸ್ಟ್‌ಗೇಟ್‌ಗೆ ಜೋಡಿಸುವ ಪ್ರಯತ್ನ ನಡೆಯುತ್ತಿದೆ. ಜಲಾಶಯ ತಜ್ಞ ಕನ್ನಯ್ಯನಾಯ್ಡು ನೇತೃತ್ವದಲ್ಲಿ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದು, ಒಂದು ವೇಳೆ ಅನಾಹುತ ಸಂಭವಿಸಿದರೆ ರಕ್ಷಣಾ ಕಾರ್ಯ ಕೈಗೊಳ್ಳಲು ಎಸ್‌‍ಡಿಆರ್‌ಎಫ್‌ ತಂಡ ಕೂಡ ಸಿದ್ಧವಾಗಿದೆ.

ಎರಡು ದಿನಗಳೊಳಗಾಗಿ ಗೇಟ್‌ ಅಳವಡಿಸಿ ಸುಮಾರು 70 ಟಿಎಂಸಿ ನೀರನ್ನು ಉಳಿಸುವ ಗುರಿ ರಾಜ್ಯಸರ್ಕಾರದ್ದಾಗಿತ್ತು. ಆದರೆ ಕೊಚ್ಚಿಹೋಗಿರುವ ಗೇಟಿನಲ್ಲಿ ನಿರಂತರವಾಗಿ ನೀರು ಹರಿದು ಹೋಗುತ್ತಿರುವುದರಿಂದಾಗಿ ಈಗಾಗಲೇ 35 ಟಿಎಂಸಿ ನೀರು ಖಾಲಿಯಾಗಿದೆ. ಮತ್ತೆ ಮಳೆ ಬರುವ ನಿರೀಕ್ಷೆಯಿದ್ದು, ಆ ವೇಳೆಗೆ ಅಣೆಕಟ್ಟು ತುಂಬಿಕೊಳ್ಳಲಿದೆ. ಭರ್ತಿಯಾಗುವ ನೀರನ್ನು ಉಳಿಸಿಕೊಳ್ಳಲು ಗೇಟ್‌ ಅಳವಡಿಸಲು ಶ್ರಮಿಸುತ್ತಿರುವುದಾಗಿ ಮೂಲಗಳು ತಿಳಿಸಿವೆ.

ಈ ನಡುವೆ ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಸಚಿವ ಜಮೀರ್‌ ಅಹಮದ್‌ ಖಾನ್‌ ಕಾರ್ಯಾಚರಣೆ ಯಶಸ್ವಿಯಾದ ಬಳಿಕ ಭಾಗವಹಿಸಿದ್ದ ಎಲ್ಲಾ ಸಿಬ್ಬಂದಿಗೂ ತಲಾ 50 ಸಾವಿರ ರೂ. ಉಡುಗೊರೆ ನೀಡುವುದಾಗಿ ಘೋಷಿಸಿದ್ದಾರೆ.

RELATED ARTICLES

Latest News