Friday, October 11, 2024
Homeರಾಷ್ಟ್ರೀಯ | Nationalಮುನಿರತ್ನ ಹಿಂದೆ ದೊಡ್ಡ ಜಾಲವೇ ಇದೆ, ಸಮಗ್ರ ತನಿಖೆಯಾಗಬೇಕು : ಡಿ.ಕೆ. ಸುರೇಶ್‌

ಮುನಿರತ್ನ ಹಿಂದೆ ದೊಡ್ಡ ಜಾಲವೇ ಇದೆ, ಸಮಗ್ರ ತನಿಖೆಯಾಗಬೇಕು : ಡಿ.ಕೆ. ಸುರೇಶ್‌

There is a big network behind Munirath : D.K. Suresh

ಬೆಂಗಳೂರು, ಸೆ.20– ರಾಜಕೀಯ ಎದುರಾಳಿಗಳಿಗೆ ಎಚ್‌ಐವಿ ಸೋಂಕಿತರ ರಕ್ತವನ್ನು ಇಂಜೆಕ್ಷನ್‌ ಮೂಲಕ ನೀಡಿ ಜೈವಿಕ ಯುದ್ಧ ಮಾದರಿಯನ್ನು ಅನುಸರಿಸಿರುವ ಬಿಜೆಪಿ ಶಾಸಕ ಮುನಿರತ್ನ ಅವರ ಕೃತ್ಯದ ಹಿಂದೆ ದೊಡ್ಡಜಾಲ ಹಾಗೂ ತಂತ್ರಗಾರಿಕೆ ಇದ್ದು, ಇದರ ವಿರುದ್ಧ ಸಮಗ್ರ ತನಿಖೆ ಆಗಬೇಕು ಎಂದು ಮಾಜಿ ಸಂಸದ ಡಿ.ಕೆ. ಸುರೇಶ್‌ ಒತ್ತಾಯಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುನಿರತ್ನ ವಿರುದ್ಧ ಅತ್ಯಾಚಾರ ಅರೋಪ ಹಾಗೂ ಎಚ್‌ಐವಿ ಬಾಧಿತರನ್ನು ರಾಜಕೀಯ ಎದುರಾಳಿಗಳ ವಿರುದ್ಧ ಹನಿಟ್ರ್ಯಾಪ್‌ ಬಳಸಿಕೊಂಡಿರುವ ದೂರುಗಳಿವೆ ಎಂದರು.

ಮೇಲ್ನೋಟಕ್ಕೆ ಈ ಕೃತ್ಯದಲ್ಲಿ ಯಾರನ್ನು, ಯಾವ ರೀತಿ ಬಳಸಿಕೊಳ್ಳಲಾಗಿದೆ ಎಂಬುದು ಗೊತ್ತಾಗುವುದಿಲ್ಲ. ಯಾರನ್ನು ರೋಗ ಹರಡಲು ಬಳಸಿಕೊಂಡಿದ್ದಾರೆ ಎಂಬುದು ಗೊತ್ತಾಗಬೇಕಿದೆ. ಇದಕ್ಕಾಗಿ ಸುದೀರ್ಘ ತನಿಖೆಯಾಗಬೇಕು ಎಂದು ಒತ್ತಾಯಿದರು.
ಈ ಹಿನ್ನಲೆಯಲ್ಲಿ ಒಕ್ಕಲಿಗ ಹಾಗೂ ಪರಿಶಿಷ್ಟ ಜಾತಿಯ ಸಮುದಾಯದ ಮುಖಂಡರು ಚರ್ಚೆ ನಡೆಸಿ, ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದಾರೆ ಎಂದು ಹೇಳಿದರು.

ಮುನಿರತ್ನ ಅವರು ಬಳಸಿರುವ ಪದಗಳು ಮತ್ತು ಅವರ ತಂತ್ರಗಾರಿಕೆಯನ್ನು ಹಿಂದೆಂದೂ ಕಂಡಿರಲಿಲ್ಲ. ಮುನಿರತ್ನನ ಮನಸ್ಥಿತಿಯೇ ವಿಕ್ಷಿಪ್ತವಾಗಿದೆ. ಮುನಿರತ್ನ ಅವರಿಗೆ ಬೆಂಬಲ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಆರ್‌.ಅಶೋಕ್‌, ಸಿ.ಟಿ.ರವಿ ಅವರೇ ಖುದ್ದು ಬೆನ್ನಿಗೆ ನಿಂತು ಕಾಂಗ್ರೆಸ್ಸಿಗರ ವಿರುದ್ದ ಕೃತ್ಯಗಳನ್ನು ಮಾಡಿಸುತ್ತಿ ದ್ದಾರೆಯೇ ಎಂಬ ಅನುಮಾನ ಬರುತ್ತಿದೆ. ಈ ಬಗ್ಗೆ ಅವರು ಸ್ಪಷ್ಟನೆ ನೀಡಬೇಕಿದೆ ಎಂದರು.

ಮುನಿರತ್ನ ಅವರ ಅವಹೇಳನಕಾರಿ ಮಾತುಗಳ ವಿರುದ್ಧ ದಲಿತ ಮತ್ತು ಒಕ್ಕಲಿಗ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಬೇಕಿದೆ. ಇಲ್ಲವಾದರೆ ಇಂತಹದನ್ನು ಹಾದಿಬೀದಿಯಲ್ಲಿ ಹೋಗುವವರೆಲ್ಲ ಬಳಕೆ ಮಾಡಲಾರಂಭಿಸುತ್ತಾರೆ ಎಂದು ಎಚ್ಚರಿಸಿದರು.

ಈ ಪ್ರಕರಣ ಯಾವ ಆಯಾಮದಲ್ಲಿ ಹೋಗುತ್ತಿದೆ ಎಂಬುದು ನನಗೆ ಗೊತ್ತಿಲ್ಲ. ಮುನಿರತ್ನ ಅವರ ಆಡಿಯೋವನ್ನು ಪೂರ್ತಿ ಕೇಳಲು ನನ್ನಿಂದ ಸಾಧ್ಯವಾಗಲಿಲ್ಲ. ಆತನ ಕೃತ್ಯಗಳನ್ನು ಜೀರ್ಣಿಸಿಕೊಳ್ಳಲಾಗುತ್ತಿಲ್ಲ ಎಂದು ಹೇಳಿದರು.

ಕುಮಾರಸ್ವಾಮಿ ವಿರುದ್ಧ ಆಕ್ರೋಶ:
ಬೆಂಗಳೂರಿನ ಆರ್‌.ಟಿ.ನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಅತ್ತೆ ಹೆಸರಿನಲ್ಲಿ ತೆಗೆದುಕೊಂಡಿರುವ ಜಮೀನು ಕೂಡ ಸತ್ತವರ ಹೆಸರಿನಲ್ಲೇ ಡಿ-ನೋಟಿಫಿಕೇಷನ್‌ ಮಾಡಿಸಲಾಗಿದೆ. ಬೇರೆಯವರ ವಿಷಯ ಬಂದಾಗ ಸತ್ತವರ ಹೆಸರಿನಲ್ಲಿ ಡಿ-ನೋಟಿಫಿಕೇಷನ್‌ ಮಾಡಿಸಲಾಗಿದೆ ಎಂದು ಹಲವಾರು ಬಾರಿ ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ.

ಆರ್‌ಟಿ ನಗರದ ಜಮೀನ ಡಿ- ನೋಟಿಫಿಕೇಷನ್‌ ಕಡತ ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿದ್ದಾಲೇ ಮುಂದುವರೆದಿದೆ.ಡಿ-ನೋಟಿಫಿಕೇಷನ್‌ಗೂ ಮುನ್ನವೇ ಭೂಮಿ ಖರೀದಿ, ನೋಂದಣಿಯಾಗಿದೆ. ಇದು ಆಧಿಕಾರದ ದುರುಪಯೋಗ ಅಲ್ಲವೇ ಎಂದು ಡಿ.ಕೆ.ಸುರೇಶ್‌ ಪ್ರಶ್ನಿಸಿದರು.

ಈ ಪ್ರಕರಣ ಹಳೆಯದು, ಹಳಸಲು ಎಂದು ಕುಮಾರಸ್ವಾಮಿ ಹೇಳಬಹುದು. ಬೇರೆಯವರ ವಿಚಾರಗಳಾದರೆ ಅವು ಫ್ರೆಶ್‌ ಆಗಿರುತ್ತವೆ. ಇವರ ಪ್ರಕರಣಗಳು ಹಲಸಲು ಎಂದು ಜಾರಿಕೊಳ್ಳಲ್ಲಾಗುತ್ತದೆ. ಅತ್ತೆಯ ಜಮೀನು ಖರೀದಿಗೂ ನನಗೆ ಸಂಬಂಧವಿಲ್ಲ. ಅದೇ ಬೇರೆ ವಿಚಾರ, ಅದು ಮುಗಿದು ಹೋಗಿರುವ ಕಥೆ ಎಂಬ ಸಬೂಬುಗಳು ಕೇಳಿಬರುತ್ತವೆ. ಈ ರೀತಿಯ ದ್ವಂದ್ವ, ಜನರನ್ನು ದಾರಿ ತಪ್ಪಿಸುವುದು, ಸುಳ್ಳು ಹೇಳುವುದು ಸರಿಯೇ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಭದ್ರವಾಗಿದೆ. ನಾಗಮಂಗಲ, ದಾವಣೆಗೆರೆಯಂತಹ ಕೆಲವು ಕಡೆ ಸಂದರ್ಭಗಳನ್ನು ಬಳಸಿಕೊಂಡು ಕೆಲವರು ಶಾಂತಿ ಭಂಗ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ವಿರುದ್ಧ ಸರ್ಕಾರ ಕಠಿಣಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಚನ್ನಪಟ್ಟಣ ನಗರ ಸಭೆಯಲ್ಲಿ ಜೆಡಿಎಸ್‌‍ನ 13 ಮಂದಿ ಕಾಂಗ್ರಸ್‌‍ಗೆ ಸೇರ್ಪಡೆಯಾಗಿದ್ದಾರೆ. ಇದು ಮೂರನೇ ಒಂದು ಭಾಗದಷ್ಟು ಸದಸ್ಯರ ಸಂಖ್ಯೆಯಾಗಿದೆ. ಹೀಗಾಗಿ ಪಕ್ಷಾಂತರ ನಿಷೇಧ ಕಾಯ್ದೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

RELATED ARTICLES

Latest News