ಚಿಕ್ಕಬಳ್ಳಾಪುರ, ಡಿ.25- ಎಟಿಎಂಗೆ ಕನ್ನ ಹಾಕಿ 20 ಲಕ್ಷ ರೂ.ಕಳವು ಮಾಡಿ, ಕಳ್ಳತನದ ನಂತರ ಎಟಿಎಂಗೆ ಬೆಂಕಿ ಹಾಕಿ ಪರಾರಿಯಾದ ಘಟನೆ ನಗರದ ಎಂಜಿ ರಸ್ತೆಯಲ್ಲಿ ನಡೆದಿದೆ.ಎಂಜಿ ರಸ್ತೆಯ ದರ್ಗಾ ಬಳಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ(ಎಸ್‍ಬಿಐ) ಬ್ಯಾಂಕ್‍ಗೆ ಸೇರಿದ ಎಟಿಎಂ ಕೇಂದ್ರಕ್ಕೆ ನುಗ್ಗಿದ ಕಳ್ಳರು ಬರೋಬ್ಬರಿ 20 ಲಕ್ಷ ರೂ. ಹಣ ಕದ್ದು, ಬಳಿಕ ಎಟಿಎಂ ಯಂತ್ರಕ್ಕೆ ಬೆಂಕಿ ಹಚ್ಚಿದ್ದಾರೆ.
ಎಸ್‍ಬಿಐನ ಎಟಿಎಂ ಕೇಂದ್ರವನ್ನು ಹಿಟಾಚಿ ಸಂಸ್ಥೆ ನಿರ್ವಹಣೆ ಮಾಡುತ್ತಿದ್ದು, ಸಿಎಂಎಸ್ ಸಂಸ್ಥೆ ಹಣ ತುಂಬುವ ಕೆಲಸ ಮಾಡುತ್ತಿತ್ತು. ತಡರಾತ್ರಿ ಎಟಿಎಂಗೆ ನುಗ್ಗಿರುವ ದುಷ್ಕರ್ಮಿಗಳ ತಂಡ, ಎಟಿಎಂ ಸಿಸಿ ಕ್ಯಾಮೆರಾಗಳಿಗೆ ಸ್ಪ್ರೇ ಬಳಸಿ ನಂತರ ಗ್ಯಾಸ್ ಕಟರ್‍ನಿಂದ ಎಟಿಎಂ ಬಾಗಿಲುಗಳನ್ನು ಕಟ್ ಮಾಡಿದ್ದಾರೆ.
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-12-2023)
ಕಟರ್‍ನಿಂದಲೇ ಎಟಿಎಂಗೆ ಬೆಂಕಿ ನಂತರ ಎಟಿಎಂನಲ್ಲಿದ್ದ ಸುಮಾರು 20 ಲಕ್ಷ ರೂ.ಗಳನ್ನು ಕದ್ದು ಪರಾರಿಯಾಗಿದ್ದಾರೆ ಎಂದು ಎಟಿಎಂ ಕಟ್ಟಡದ ಮಾಲೀಕ ಶ್ರೀನಿವಾಸ್ ತಿಳಿಸಿದ್ದಾರೆ. ಖತರ್ನಾಕ್ ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.ಇತ್ತೀಚೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಗೌರಿಬಿದನೂರು ತಾಲ್ಲೂಕಿನ ಪೋಶೆಟ್ಟಿಹಳ್ಳಿಯಲ್ಲಿ ಇದೇ ರೀತಿಯ ಘಟನೆಗಳು ನಡೆದಿವೆ. ಆದರೆ ಆರೋಪಿಗಳು ಪೊಲೀಸರ ಕಣ್ಣಿಗೆ ಬಿದ್ದಿಲ್ಲ. ಸದ್ಯಕ್ಕೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಧ್ಯರಾತ್ರಿಯೇ ಘಟನೆಯಾಗಿದ್ದರೂ ಭಾನುವಾರ ಮಧ್ಯಾಹ್ನದವರೆಗೂ ಯಾರ ಗಮನಕ್ಕೂ ಬಂದಿಲ್ಲ. ಕಟ್ಟಡದ ಮಾಲೀಕ ಶ್ರೀನಿವಾಸ್ ಎಟಿಎಂಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಕಾರಿ ಡಿ.ಎಲ್ . ನಾಗೇಶ್, ಡಿವೈಎಸ್‍ಪಿ ಎಸ್.ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.