Saturday, January 11, 2025
Homeಬೆಂಗಳೂರುಉದ್ಯಮಿಗಳ ಪಾರ್ಟಿಗೆ ಕಾಡು ಪ್ರಾಣಿಗಳ ಬೇಟೆ : ಶಾರ್ಪ್‌ ಶೂಟರ್‌ ಸೇರಿ ಮೂವರ ಬಂಧನ

ಉದ್ಯಮಿಗಳ ಪಾರ್ಟಿಗೆ ಕಾಡು ಪ್ರಾಣಿಗಳ ಬೇಟೆ : ಶಾರ್ಪ್‌ ಶೂಟರ್‌ ಸೇರಿ ಮೂವರ ಬಂಧನ

ಬೆಂಗಳೂರು, ಜ.11- ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಪಾರ್ಟಿಗೆ ಕಾಡು ಪ್ರಾಣಿಗಳ ಮಾಂಸ ನೀಡಲು ಬೇಟೆಯಾಡುತ್ತಿದ್ದ ಶಾರ್ಪ್‌ ಶೂಟರ್‌ ಸೇರಿದಂತೆ ಮೂವರನ್ನು ಸಂಚಾರಿ ಅರಣ್ಯಾಧಿಕಾರಿಗಳು ಸತತ ಪ್ರಯತ್ನದಿಂದ ವಿಶೇಷ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ. ನಗರದ ತೋಟದಗುಡ್ಡದಹಳ್ಳಿ ನಿವಾಸಿ ಶಾರ್ಪ್‌ ಶೂಟರ್‌ ಶ್ರೀನಿವಾಸ್‌‍(46), ನೆಲಮಂಗಲದ ಹನುಮಂತರಾಜು(44) ಮತ್ತು ರಾಮನಗರದ ಮುನಿರಾಜು(38) ಬಂಧಿತ ಆರೋಪಿಗಳು.

ಈ ಮೂವರಿಗಾಗಿ ಸತತ ಎರಡು ತಿಂಗಳಿನಿಂದ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದರು. ಥಾರ್‌ ಜೀಪ್‌ನಲ್ಲಿ ಪರಾರಿಯಾಗುತ್ತಿದ್ದ ಮೂವರು ಆರೋಪಿಗಳನ್ನು ಸುಮಾರು 6 ಕಿ. ಮೀಟರ್‌ವರೆಗೂ ಅರಣ್ಯಾಧಿಕಾರಿಗಳು ಸಿನಿಮಾ ಶೈಲಿಯಲ್ಲಿ ಬೆನ್ನಟ್ಟಿಕೊಂಡು ಹೋಗಿ ರಾಮನಗರ ಜಿಲ್ಲೆಯ ಚಿಕ್ಕಕುಂಟನಹಳ್ಳಿ ಕ್ರಾಸ್‌‍ ಬಳಿ ಜೀಪ್‌ನ್ನು ತಡೆದು ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ 2 ಜಿಂಕೆ, 2 ಕಾಡು ಹಂದಿ, 1 ಗನ್‌, 1ಏರ್‌ ಗನ್‌, 11 ಜೀವಂತ ಗುಂಡು, 2 ಚಾಕು, 1ಕೊಡಲಿ, 1ಮಚ್ಚು, 3 ಮೊಬೈಲ್‌‍, ಥಾರ್‌ ಜೀಪ್‌ ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು ಹೈ ಫ್ಲ್ಯಾಶ್‌ ಲೈಟ್ಗಳನ್ನ ಬಳಸಿ ಅರಣ್ಯದಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಿ ಅವುಗಳ ಮಾಂಸವನ್ನು ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಪಾರ್ಟಿಗೆ ಸರಬರಾಜು ಮಾಡುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುನಿತಾ ಬಾಯಿ, ಉಪ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಸರಿತಾ ಮಾರ್ಗದರ್ಶನ, ಆರ್‌ಎಫ್‌ಒ ರಮೇಶ್‌, ಸಿದ್ದರಾಜು, ಅಮೃತ್‌ ದೇಸಾಯಿ, ರಾಜು, ಆಶಾ, ಚಾಲಕ ಸುರೇಶ್‌ ನೇತೃತ್ವದ ತಂಡ ವಿಶೇಷ ಕಾರ್ಯಚರಣೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ.
ಮೂವರು ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ಅರಣ್ಯಾಧಿಕಾರಿಗಳು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿದ್ದ ಕಾಡುಪ್ರಾಣಿಗಳನ್ನು ನ್ಯಾಯಾಲಯದ ಅನುಮತಿ ಪಡೆದು ಮರಣೋತ್ತರ ಪರೀಕ್ಷೆ ಮಾಡಿಸಿದ ನಂತರ ಸುಟ್ಟುಹಾಕಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಸುನೀತಾ ಬಾಯಿ ತಿಳಿಸಿದ್ದಾರೆ.

RELATED ARTICLES

Latest News