ಬೆಂಗಳೂರು, ಮೇ 20- ಪೆನ್‌ಡ್ರೈವ್ ಪ್ರಕರಣ ಸಂಬಂಧ ಆಡಿಯೋವೊಂದರಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಮಾಜಿ ಸಂಸದ ಶಿವರಾಮೇಗೌಡ ಅವರ ಮನೆ ಬಳಿ ಬಂದ ಗುಂಪೊಂದು ಮೊಟ್ಟೆ ಎಸೆದು ಪರಾರಿಯಾಗಿದೆ.
ಸಂಸದ ಪ್ರಜ್ವಲ್ ಅವರಿಗೆ ಸೇರಿದ್ದು ಎನ್ನಲಾದ ಪೆನ್‌ಡ್ರೈವ್ ಪ್ರಕರಣ ಸಂಬಂಧ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಹಾಗೂ ಮಾಜಿ ಸಂಸದ ಶಿವರಾಮೇಗೌಡ ಅವರ ನಡುವಿನ ಆಡಿಯೋ ಸಂಭಾಷಣೆಯಲ್ಲಿ ದೇವೇಗೌಡರ ಬಗ್ಗೆ ಶಿವರಾಮೇಗೌಡ ಅವಹೇಳನಕಾರಿ ನಿಂದಿಸಿದ್ದಾರೆ ಎನ್ನಲಾಗಿದೆ.
ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ಬನಗಿರಿಯಲ್ಲಿ ವಾಸವಿರುವ ಶಿವರಾಮೇಗೌಡ ಅವರ ಮನೆ ಬಳಿ ತಡರಾತ್ರಿ 11.30ರ ಸುಮಾರಿನಲ್ಲಿ ಕಾರಿನಲ್ಲಿ ಬಂದ ಗೊಂಪೊಂದು ಮನೆ ಮೇಲೆ ಮೊಟ್ಟೆ ಎಸೆಯಲು ಯತ್ನಿಸಿದೆ. ಆ ವೇಳೆ ಪೊಲೀಸರನ್ನು ಕಂಡು ತಂದಿದ್ದ ಮೊಟ್ಟೆಗಳನ್ನು ಅವರ ಕಣ್ತಪ್ಪಿಸಿ ಮನೆ ಮುಂದೆ ಎಸೆದು ಪರಾರಿಯಾಗಿದೆ.
ಈ ಬಗ್ಗೆ ಸಿ.ಕೆ.ಅಚ್ಚು ಕಟ್ಟು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಮೊಟ್ಟೆ ಎಸೆದು ಹೋದವರಿಗಾಗಿ ಶೋಧ ನಡೆಸುತ್ತಿದ್ದಾರೆ.ಶಿವರಾಮೇಗೌಡ ಮನೆ ರಸ್ತೆಯ ಎರಡು ಕಡೆ ಬ್ಯಾರಿಕೇಡ್ ಹಾಕಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.