ಚಿಕ್ಕಮಗಳೂರು, ಅ.13- ವಾರದ ಕೊನೆಯ ರಜೆ ದಿನಗಳು ಹಾಗೂ ಆಯುಧಪೂಜೆ, ದಸರಾ ಇದ್ದ ಕಾರಣ ಕಾಫಿ ನಾಡಿಗೆ ಪ್ರವಾಸಿಗರು ಲಗ್ಗೆ ಇಟ್ಟಿದ್ದರು. ಮುಳ್ಳಯ್ಯನಗಿರಿ, ದತ್ತಪೀಠ, ಕೆಮ್ಮಣ್ಣು ಗುಂಡಿ, ಶೃಂಗೇರಿ, ಹೊರನಾಡು ಪ್ರದೇಶಗಳಿಗೆ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಬಂದ ಕಾರಣ ವಾಹನ ದಟ್ಟಣೆಯಲ್ಲಿ ಸಿಲುಕಿ ನರಳಿದರು.
ಮುಳ್ಳಯ್ಯನಗಿರಿ , ದತ್ತಪೀಠ ಹಾಗೂ ಮಳೆಯಿಂದಾಗಿ ಚಂದ್ರದ್ರೋಣ ಪರ್ವತ ಶ್ರೇಣಿಯ ಸಾಲುಗಳು ಹಸಿರು ಹೊದ್ದು ಕಂಗೊಳಿಸುತ್ತಿವೆ. ಪ್ರಕೃತಿಯ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಸಾವಿರಾರು ವಾಹನಗಳಲ್ಲಿ ಜನರು ದಾಟಗುಡಿ ಇಟ್ಟಿದ್ದರು.
ಕಿರಿದಾದ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಾಹನಗಳ ಸಂಖ್ಯೆ ಹೆಚ್ಚಿದ್ದರಿಂದ ಪೊಲೀಸರು ಚಿಕ್ಕಮಗಳೂರು ನಗರದಿಂದಲೇ ಸಾಕಷ್ಟು ಸಂಖ್ಯೆಯ ವಾಹನಗಳನ್ನು ಬೆಟ್ಟಕ್ಕೆ ಬಿಡದೆ ವಾಪಸ್ ಕಳುಹಿಸುತ್ತಿದ್ದರು.
ದೇವೀರಮ್ಮನ ದೇವಸ್ಥಾನಕ್ಕೂ ಕೂಡ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಲಗ್ಗೆ ಇಟ್ಟಿದ್ದರು. ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದರಿಂದ ಎಲ್ಲಾ ಪ್ರವಾಸಿಗರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಭಾರಿ ಸಂಖ್ಯೆಯಲ್ಲಿ ಜನ ಬಂದಿದ್ದರಿಂದ ದೇವಸ್ಥಾನದ ಆಡಳಿತ ಮಂಡಳಿಗೆ ಜನರನ್ನು ಸಂತೈಸುವುದರಲ್ಲಿ ಸಾಕು ಸಾಕಾಗಿ ಹೋಯಿತು.
ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ,ಹೊರನಾಡು, ಹಿರೇಮಗಳೂರು ಕೋದಂಡರಾಮಚಂದ್ರ ಸ್ವಾಮಿ ದೇವಾಲಯ ಸೇರಿದಂತೆ ಅನೇಕ ಧಾರ್ಮಿಕ ಕ್ಷೇತ್ರಗಳಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಕೆ ಎಸ್ ಆರ್ ಟಿ ಸಿ ಬಸ್ ಗಳಲ್ಲಿ ಪ್ರಯಾಣಿಸಲು ಕೂಡ ಅಗಾಧ ಸಂಖ್ಯೆಯಲ್ಲಿ ಜನಸಂದಣಿ ಬಸ್ ನಿಲ್ದಾಣದಲ್ಲಿ ಇದ್ದಿದ್ದು ಕಂಡು ಬಂತು. ನಗರದಲ್ಲೂ ಜನದಟ್ಟಣೆ ಹೆಚ್ಚಿದ್ದರಿಂದ ಪ್ರವಾಸಿಗರು ಮತ್ತು ಸ್ಥಳೀಯರು ಪರದಾಡಿದರು.